ಸೋಲು-ಗೆಲವು ಒಂದೇ ನಾಣ್ಯದ ಮುಖ
ಕನ್ನಡಪ್ರಭ ವಾರ್ತೆ, ಗದಗ, ಏ. 25
ಪಠ್ಯದ ಒಂದು ಭಾಗವಾದ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ವಿದ್ಯಾರ್ಥಿಗಳ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕ, ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖಗಳು. ಪ್ರತಿಯೊಬ್ಬರಲ್ಲೂ ವಿಶೇಷ ಪ್ರತಿಭೆ ಶಕ್ತಿಗಳಿದ್ದು ಗುರಿ ಮತ್ತು ಸಾಧಿಸುವ ಛಲದಿಂದ ಪ್ರಯತ್ನಸಿದ್ದರೆ ಮಾದರಿಯ ವ್ಯಕ್ತಿಗಳಾಗಲು ಸಾಧ್ಯ ಎಂದು ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಹೇಳಿದರು.
ಅವರು ಸ್ಥಳೀಯ ಕೆಎಲ್ಇ ಸಂಸ್ಥೆಯ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ನಾಡಿನ ಭವಿಷ್ಯವಾದ ಯುವಕರು ಯಾವ ದುಷ್ಟ ವ್ಯಸನಗಳಿಗೆ ಬಲಿಯಾಗದೆ ಆರೋಗ್ಯವಂತರಾಗಿ ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳುವ ಮೂಲಕ ಕಲಿತ ವಿದ್ಯೆಯನ್ನು ಜೀವನವನ್ನು ಅಪಾಯದಿಂದ ರಕ್ಷಿಸುವ ಸಂಜೀವಿನಿಯಾಗಿ ಬಳಸಿಕೊಳ್ಳವಂತೆ ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸ್ಥಾನಿಕ ಆಡಳಿತ ಮಂಡಳಿಯ ಚೇರ್ಮನ್ ರಜಿನಿ ಪಾಟೀಲ ಮಾತನಾಡಿ, ಶಿಸ್ತು, ಸಂಮಯಗಳು ಸಾಧನೆಗೆ ಪೂರಕವಾಗಿದ್ದು, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಸಕ್ಕುಬಾಯಿ ಮಲ್ಲಾಪುರ ಹಾಗೂ ವಿಜಯಲಕ್ಷ್ಮಿ ಚಿಕ್ಕಮಠ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ಜೆ.ಎ. ಪಾಟೀಲ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಎಸ್.ಎಸ್. ಸಂಗೊಳ್ಳಿ, ನಾಗಶ್ರೀ ಪೂಜಾರಿ, ಶ್ವೇತಾ ರಾಚಯ್ಯನವರ, ವೀಣಾ ತಿರ್ಲಾಪುರ, ಜಬೀನ ಶಿರಹಟ್ಟಿ, ವಿಶಾಲ ತಳಗಡೆ ಮುಂತಾದವರು ಉಪಸ್ಥಿತರಿದ್ದರು. ಪಿ.ಎನ್. ಮುನವಳ್ಳಿ ಸ್ವಾಗತಿಸಿದರು. ಎ.ಕೆ. ಮಠ ಪರಿಚಯಿಸಿದರು. ತಾರಾ .ಬಿ.ಎನ್ ನಿರೂಪಿಸಿದರು. ಅನಲಾ ಶೆಟ್ಟರ ವಂದಿಸಿದರು.