ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಿದಿರಿಗೆ ಹೂವು: ಬರಗಾಲದ ನೋವು...?

Rashmi Kasaragodu
Updated On : 27 Apr 2014, 1:09 am

ವಿನಯ ದಂಟಕಲ್
ಕನ್ನಡಪ್ರಭ ವಾರ್ತೆ, ಶಿರಸಿ, ಏ. 26
ಸಾಯುವ ಮುನ್ನ ಹಂಸ ಪಕ್ಷಿ ಹಾಡುತ್ತದೆಯಂತೆ. ಅದೇ ರೀತಿ ಬಿದಿರು ಹೂ ಬಿಡುತ್ತದೆ. ಈಗ ಮಲೆನಾಡಿನಲ್ಲಿ ಬಿದಿರು ಹೂ ಬಿಟ್ಟಿದೆ. ಈ ಮೂಲಕ ಬಿದಿರು ಹಿಂಡುಗಳು ಸಾವಿನತ್ತ ಮುಖ ಮಾಡಿವೆ.
ಮಲೆನಾಡಿನಲ್ಲಿ ನೀರಿನ ಸೆಲೆ ಹೆಚ್ಚಿರುವ ಸ್ಥಳಗಳಲ್ಲಿ ಬಿದಿರು ಹಿಂಡು ಹಿಂಡಾಗಿ ಬೆಳೆಯುತ್ತದೆ. ಯಾವ ಜಾಗದಲ್ಲಿ ಬಿದಿರು ಮೆಳೆಗಳು ಯಥೇಚ್ಛವಾಗಿರುತ್ತವೋ ಅಂತಹ ಸ್ಥಳಗಳಲ್ಲಿ ತಂಪಿನ ವಾತಾವರಣ ಹಾಗೂ ಅಂತರ್ಜಲ ಮಟ್ಟ ಉತ್ತಮವಾಗಿರುತ್ತದೆ. ಬಿದಿರಿನಲ್ಲಿ ಹತ್ತು ಹಲವು ಪ್ರಬೇಧಗಳಿದ್ದು ವಾಟೆ, ಶಮೆ, ಹಳದಿ (ಬೊಂಬು) ಹಾಗೂ ಇತರ ಬಿದಿರುಗಳು ಮಲೆನಾಡಿನಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ಮಲೆನಾಡಿನಲ್ಲಿಯೂ ಕಾಳಿ ನದಿ ತೀರ ಪ್ರದೇಶ, ಗಂಗಾವಳಿ-ಬೇಡ್ತಿ-ಶಾಲ್ಮಲಾ ನದಿ ತೀರ ಪ್ರದೇಶ, ಅಘನಾಶಿನಿ ಹಾಗೂ ಶರಾವತಿ ತೀರದಲ್ಲಿ ಬಿದಿರಿನ ಮೆಳೆಗಳನ್ನು ಹೆಚ್ಚಾಗಿ ಕಾಣಬಹುದಾಗಿದೆ. ಮಳೆಗಾಲದ ನಂತರ ಕಳಲೆಯ ರೂಪದಲ್ಲಿ ದಿನಕ್ಕೆ 6 ಅಡಿಗಳಿಗೂ ಅಧಿಕ ಎತ್ತರ ಬೆಳೆಯುವ ಬಿದಿರು ಹಲವು ವರ್ಷಗಳ ಕಾಲ ಬದುಕುತ್ತದೆ.
ಬಿದಿರಿನ ಅಕ್ಕಿ: ಅಘನಾಶಿನಿ ನದಿ ತೀರದಲ್ಲಿ ಬಿದಿರಿನ ಜತೆಗೆ ವಾಟೆ ಎನ್ನುವ ಸಣ್ಣ ಪ್ರಮಾಣದ ಬಿದಿರಿನ ಮೆಳೆಗಳು ಬೆಳೆಯುತ್ತವೆ. ನದಿಯ ದಡದ ಮಣ್ಣನ್ನು ಹಿಡಿದಿರುವ ಪುಣ್ಯದ ಕಾರ್ಯ ಈ ವಾಟೆ ಮೆಳೆಗಳದ್ದು. ಈ ವರ್ಷ ವಾಟೆಯ ಮೆಳೆಗಳಲ್ಲಿ ಹೂ ಬಿಟ್ಟ ಪರಿಣಾಮ ಮೆಳೆಗಳು ಹಳದಿಯಾಗಿ, ಮೆಳೆಗಳ ತುಂಬೆಲ್ಲ ಅಕ್ಕಿಯನ್ನು ಹೊತ್ತುಕೊಂಡು ನಿಂತಿವೆ. ಒಂದೊಂದು ಬಿದಿರುವ ಮೆಳೆಯಿಂದಲೂ ಕನಿಷ್ಟ 50 ಕೆಜಿ ವರೆಗೆ ಅಕ್ಕಿಯನ್ನು ಸಂಗ್ರಹ ಮಾಡಬಹುದಾಗಿದೆ. ಬಿದಿರು ಅಕ್ಕಿಯಲ್ಲಿ ವಿಶೇಷ ಸತ್ವವಿದ್ದು, ಶಕ್ತಿ ವರ್ಧಕವಾಗಿ ಕೆಲಸ ಮಾಡುತ್ತದೆ. ಅಲ್ಲದೇ ಬಿದಿರು ಅಕ್ಕಿ ತಂಪಿನ ಗುಣವನ್ನು ಹೊಂದಿದ್ದು, ಅಕ್ಕಿಯಲ್ಲಿಯೇ ಅತ್ಯಂತ ವಿಶೇಷ ಗುಣಗಳನ್ನು ಹೊಂದಿದೆ. ಹಳದಿ ಬಣ್ಣದ ಅಕ್ಕಿ ಬಿದಿರು ಮೆಳೆಯ ಸುತ್ತ ಉದುರುತ್ತದೆ. ಇದರ ಸಂಗ್ರಹಣೆ ಕಷ್ಟದ ಕೆಲಸವೂ ಹೌದು. ಬರಗಾಲದ ಸಂದರ್ಭದಲ್ಲಿ ಈ ಅಕ್ಕಿಯನ್ನೇ ಆಹಾರಕ್ಕಾಗಿ ಬಳಕೆ ಮಾಡಲಾಗುತ್ತದೆ.
ಹೆಗ್ಗಣ, ಇಲಿ ಕಾಟ: ಬಿದಿರು ಹೂ ಬಿಟ್ಟ ನಂತರ ಬಿದಿರಿನ ಅಕ್ಕಿ ಬೆಳೆಯುತ್ತದೆ. ಆ ನಂತರದ ದಿನಗಳಲ್ಲಿ ಬಿದಿರು ಮೆಳೆಗಳು ಒಣಗಲು ಆರಂಭಿಸುತ್ತವೆ. ಹಾಗೆಯೇ ನಿಧಾನವಾಗಿ ಸಾವನ್ನಪ್ಪುತ್ತವೆ. ಇಂತಹ ಸಂದರ್ಭದಲ್ಲಿ ಬಿದಿರಿನ ಹಿಂಡುಗಳು ಬೆಂಕಿಗೆ ಆಹುತಿಯಾಗುವುದು ಹೆಚ್ಚು. ಜತೆಯಲ್ಲಿ ಅತಿಯಾಗಿ ಬೆಳೆದ ಬಿದಿರು ಅಕ್ಕಿಗಳಿಗೆ ಹೆಗ್ಗಣ, ಇಲಿಗಳು ದಾಳಿ ನಡೆಸುತ್ತವೆ. ಇವುಗಳ ಕಾಟ ವಿಪರೀತವಾಗುವುದರ ಜತೆಗೆ ಹೆಗ್ಗಣ, ಇಲಿಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. 1950ರ ದಶಕದಲ್ಲಿ ಭಾರತದಾದ್ಯಂತ ಬರಗಾಲ ಬಂದಾಗ ಜನಸಾಮಾನ್ಯರನ್ನು ರಕ್ಷಣೆ ಮಾಡಿದ್ದು ಬಿದಿರು ಅಕ್ಕಿ ಎಂದು ಕೃಷಿ, ಆರ್ಥಿಕ ತಜ್ಞ ಪ್ರಶಾಂತ ಭಟ್ಟ (ಗುಡ್ಡೆ) ಹೆಗ್ಗಾರ ಅಭಿಪ್ರಾಯ ಪಡುತ್ತಾರೆ.
ನದಿಗಳ ಇಕ್ಕೆಲದಲ್ಲಿ ಹುಲುಸಾಗಿ ಬೆಳೆಯುವ ಬಿದಿರು ಮೆಳೆಗಳು ಪ್ರವಾಹದ ಸಂದರ್ಭದಲ್ಲಿ ನೀರಿಗೆ ಇದ್ದಡಗಳೂ ಕೊಚ್ಚಿ ಹೋಗದಂತೆ ಭೂಮಿಯನ್ನು ಗಟ್ಟಿಯಾಗಿ ಹಿಡಿದು ಕಾಪಾಡುವ ಕಾರ್ಯವನ್ನು ಕೈಗೊಳ್ಳುತ್ತವೆ. ಆದರೆ ಬಿದಿರು ಮೆಳೆಗಳಿಗೆ ಸಾವು ಬಂದ ನಂತರ ನದಿಯ ಇಕ್ಕೆಲಗಳೂ ಪ್ರವಾಹಕ್ಕೆ ಕೊಚ್ಚಿ ಹೋಗುತ್ತವೆ. ಇದರಿಂದ ಉಂಟಾಗುವ ಪರಿಣಾಮಗಳು ಭೀಕರವಾದುದು ಎಂದು ಪ್ರಶಾಂತ ಭಟ್ಟರು ಹೇಳುತ್ತಾರೆ.
ಬಿದಿರು ಹೂ ಬಿಟ್ಟ ನಂತರ ಒಣಗಿರುವ ಮೆಳೆಗಳಿಗೆ ಬೆಂಕಿ ತಗುಲದಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ನದಿ ದಡಗಳ ಇಕ್ಕೆಲದಲ್ಲಿಯೂ ಒಣಗಿ ನಿಲ್ಲುವ ಬಿದಿರನ್ನು ಸಂರಕ್ಷಿಸುವುದರ ಜತೆಗೆ ಮಳೆಗಾಲದಲ್ಲಿ ನದಿ ತೀರ ಕೊಚ್ಚಿ ಹೋಗದಂತೆ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆಯಿದೆ.


60 ವರ್ಷಗಳಿಗೊಮ್ಮೆ ಹೂ ಬಿಡುತ್ತೆ
ಬಿದಿರು 60 ವರ್ಷಗಳಿಗೊಮ್ಮೆ ಹೂ ಬಿಡುವುದು ವಾಡಿಕೆ. ಹೂ ಬಿಟ್ಟ ನಂತರ ಬಿದಿರು ಸಾವನ್ನಪ್ಪುತ್ತದೆ. ಬಿದಿರು ಹೂ ಬಿಟ್ಟರೆ ಬರ ಬರುತ್ತದೆ ಎನ್ನುವುದು ನಂಬಿಕೆ. ಭಾರತದಲ್ಲಿ 1980ರ ದಶಕದಲ್ಲಿ ಬಿದಿರು ಹೂಬಿಟ್ಟಿತ್ತು.
ಆ ದಶಕದಲ್ಲಿ ದೇಶದಲ್ಲಿ ಹಿಂದೆಂದೂ ಕಾಣದಂತಹ ಬರಗಾಲ ಕಂಡುಬಂದಿತ್ತು ಎಂಬುದು ಹಿರಿಯರ ಮಾತಿನ ಮೂಲಕ ತಿಳಿದು ಬರುತ್ತದೆ. ಮಲೆನಾಡಿನಲ್ಲಿ ನಾಲ್ಕೈದು ವರ್ಷಗಳಿಂದೀಚೆಗೆ ಬಿದಿರು ಮೆಳೆಗಳಲ್ಲಿ ಹೂ ಬಿಡಲಾರಂಭವಾಗಿದೆ. 2007-08ರಲ್ಲಿ ಕಾಳಿ ನದಿ ಕಣಿವೆ, ಗಂಗಾವಳಿ ನದಿ ತೀರದಲ್ಲಿ ಬಿದಿರು ಹೂ ಬಿಟ್ಟಿತ್ತು. ನಂತರದ ದಿನಗಳಲ್ಲಿ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಹಳಿಯಾಳ, ಜೋಯಿಡಾ, ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಬಿದಿರು ಹೂ ಬಿಟ್ಟಿತ್ತು. ಇದೀಗ ಅಘನಾಶಿನಿ ತೀರದಲ್ಲಿಯೂ ಬಿದಿರು ಮೆಳೆಗಳಲ್ಲಿ ಹೂವರಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement