ಸರ್ವೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರಿಗೆ ದೂರು
ನರಗುಂದ: ನಗರದ ಸೋಮಪುರ ಬಡಾವಣೆಯಲ್ಲಿ ನಿವೇಶನ ಅಳತೆ ಮಾಡುವಲ್ಲಿ ನಗರ ಸರ್ವೆ ಅಧಿಕಾರಿಗಳು ವಿಳಂಬ ನೀತಿ ಮಾಡಿದ್ದಾರೆ. ಜತೆಗೆ ನಿವೇಶನದ ಗಡಿ ಗುರುತಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿ ದೊಡ್ಡದುರ್ಗಪ್ಪ ದಂಡಾಪುರ ಅವರು ಲೋಕಾಯುಕ್ತ ಪೊಲೀಸ್ ಡಿಎಸ್ಪಿ ರವಿ ಪುರಷೋತ್ತಮ ಅವರಿಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದರು. ದಂಡಾಪುರ ಬಡಾವಣೆಯ 2013ರ ಸೆಪ್ಟೆಂಬರ್ 18ರಂದು ತಮ್ಮ ನಿವೇಶನ ಅಳತೆ ಮಾಡಿ ಗಡಿ ಗುರುತಿಸಲು ಅರ್ಜಿ ಸಲ್ಲಿಸಿದ್ದರು. 16ನೇ ಮಾರ್ಚ್ 2014ರಲ್ಲಿ ನಿವೇಶನ ಅಳತೆ ಮಾಡಲು ಪ್ರಾರಂಭಿಸಿದ ಅಧಿಕಾರಿಗಳು ಸರಿಯಾಗಿ ಅಳತೆ ಮಾಡಲಿಲ್ಲ. ಸರ್ವೆ ಮಾಡಿದ ಬಗ್ಗೆ ದಾಖಲೆ ನೀಡಿಲ್ಲ ಎಂದು ತಿಳಿಸಿದರು. ಲೋಕಾಯುಕ್ತರು ಸಮಸ್ಯೆ ಸರಿಪಡಿಸುವಂತೆ ನಗರ ಸರ್ವೆ ಅಧಿಕಾರಿಗೆ ಸೂಚಿಸಿದರು. ಕೊಣ್ಣೂರಿನ ನಬೀಸಾಬ್ ಪಿಂಜಾರ ಆಸ್ತಿಗೆ ಸಂಬಂಧಿಸಿದಂತೆ ಲೋಕಾಯುಕ್ತರಿಗೆ ದೂರು ಸಲ್ಲಿಸಿದರು.
ಹತ್ತದ ಹೈಮಾಸ್ಟ್ ದೀಪ
ನರಗುಂದ: ಪಟ್ಟಣದ ಹುಬ್ಬಳ್ಳಿ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಬಸ್ ನಿಲ್ದಾಣದಲ್ಲಿ ರಾತ್ರಿ ಸಮಯದಲ್ಲಿ ಬಸ್ ಪ್ರಯಾಣಿಕರಿಗೆ ಅನುಕೂಲವಾಗಲೆಂದು ಹೈಮಾಸ್ಟ್ ವಿದ್ಯುತ್ ದೀಪವನ್ನು ನಿರ್ಮಿಸಿ 4-5 ತಿಂಗಳು ಗತಿಸಿದರೂ ಇಂದಿಗೂ ಈ ಹೈ ಮಾಸ್ಟ್ ದೀಪ ಹತ್ತದೆ ಹೆಸರಿಗೆ ಮಾತ್ರ ಎಂಬಂತಾಗಿದೆ. ಈ ಕುರಿತು ಇಲ್ಲಿನ ನಿವಾಸಿಗಳು ಹಾಗೂ ಪ್ರಯಾಣಿಕರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನವಾಗದೇ ಇರುವುದು ನೋವಿನ ಸಂಗತಿ. ಈ ಹೈಮಾಸ್ಟ್ ದೀಪ ಹತ್ತದೇ ಇರುವುದರಿಂದ ಬಸ್ ನಿಲ್ದಾಣದಲ್ಲಿ ಹಾಗೂ ಅಕ್ಕಪಕ್ಕದಲ್ಲಿ ಸಾರ್ವಜನಿಕರು ಬಹಿರ್ದೆಸೆಗೆ ಹೋಗುವುದರಿಂದ ಇಡೀ ನಿಲ್ದಾಣವೇ ಗಬ್ಬುವಾಸನೆ ಬೀರುತ್ತಿದೆ. ಈ ಕುರಿತು ಬಸ್ ನಿಲ್ದಾಣದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ರಾತ್ರಿ ವೇಳೆಯಲ್ಲಿ ಈ ಹೈಮಾಸ್ಟ್ ದೀಪ ಉರಿಯುವಂತೆ ಕ್ರಮ ಕೈಗೊಳ್ಳಲಿ ಎಂಬುದು ಪ್ರಯಾಣಿಕರ ಹಾಗೂ ಸಾರ್ವಜನಿಕರ ಅಭಿಪ್ರಾಯವಾಗಿದೆ.