ಅರಹುಣಸಿ ಗ್ರಾಮಸ್ಥರಿಂದ ಪ್ರತಿಭಟನೆ
ರೋಣ: ತಾಲೂಕಿನ ಅರಹುಣಸಿಯಿಂದ ಮೇಲ್ಮಠದವರೆಗೆ ನಿರ್ಮಿಸಲಾದ 5 ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ವರ್ಷ ಗತಿಸುವುದರಲ್ಲಿಯೇ ಡಾಂಬರ್ ಕಿತ್ತು ಹೋಗಿದೆ. ಇದರಿಂದ ಕೋಟ್ಯಾಂತರ ರು.ಗಳ ಅನುದಾನ ಮಣ್ಣು ಪಾಲಾಗಿದೆ ಎಂದು ಆರೋಪಿಸಿ ಅರಹುಣಸಿ ಗ್ರಾಮಸ್ಥರು ಭಾನುವಾರ ರಸ್ತೆ ಮೇಲೆ ಕುಳಿತು ಪ್ರತಿಭಟಿಸಿದರು.
ಗ್ರಾಮದ ಮಲ್ಲಿಕಾರ್ಜುನ ಚೌಡರಡ್ಡಿ, ಉಮೇಶ ಕುಡಗುಂಟಿ ಮಾತನಾಡಿ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ರು. 4.5 ಕೋಟಿ ವೆಚ್ಚದಲ್ಲಿ ರೋಣದಿಂದ ವಾಯಾ ಬಾಸಲಾಪುರ, ಹಿರೇಮಣ್ಣೂರ, ಅರಹುಣಸಿ ಮಾರ್ಗವಾಗಿ ಮೇಲ್ಮಠದವರೆಗಿನ 15 ಕಿ.ಮೀ ರಸ್ತೆ ನಿರ್ಮಿಸಿದೆ. ಅರಹುಣಸಿಯಿಂದ ಮೇಲ್ಮಠದವರೆಗೆ ರಸ್ತೆಯ ಗುಣಮಟ್ಟ ಕಾಯ್ದುಕೊಳ್ಳಲು ಬಳಕೆ ಮಾಡಬೇಕಿದ್ದ ಗರಸು, ಕಡಿ ಮತ್ತು ಡಾಂಬರ್ನ್ನು ಸಮರ್ಪಕವಾಗಿ ಬಳಸದೇ ಬೇಕಾಬಿಟ್ಟಿ ಕಾಟಾಚಾರಕ್ಕೆ ಎಂಬಂತೆ ರಸ್ತೆ ನಿರ್ಮಿಸಿದ್ದಾರೆ. ಈ ಕಾಮಗಾರಿ ಗುತ್ತಿಗೆ ಪಡೆದ ಎಸ್.ಎಸ್. ಮಮದಾಪುರ ಅವರು ತಾವು ಕಾಮಗಾರಿ ಉಸ್ತುವಾರಿ ನೋಡಿಕೊಳ್ಳದೆ ಬದಾಮಿಯ ಗಾಣಿಗೇರ ಎಂಬುವರಿಗೆ ರಸ್ತೆ ನಿರ್ಮಾಣದ ಜವಾಬ್ದಾರಿ ವಹಿಸಿದ್ದರು. ಇದರಿಂದಾಗಿಯೇ ರಸ್ತೆ ಕಾಮಗಾರಿ ಸಂಪೂ ರ್ಣ ಕಳಪೆ ಮಟ್ಟದಿಂದ ಕೂಡಿದ್ದು, ರಸ್ತೆ ನಿರ್ಮಿಸಿ ವರ್ಷದೊಳಗೆ ಅಲ್ಲಲ್ಲಿ ಡಾಂಬರ್ ಕಿತ್ತಿದ್ದು ರಸ್ತೆಯೂದ್ದಕ್ಕೂ ತಗ್ಗು, ದಿನ್ನೆ ಬಿದ್ದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಣ್ಣುಚ್ಚಿ ಕುಳಿತ ಅಧಿಕಾರಿಗಳು: ರಸ್ತೆ 2009ರಲ್ಲಿ ಪ್ರಾರಂಭವಾಗಿ, 2010ಕ್ಕೆ ಮುಕ್ತಾಯಗೊಳ್ಳಬೇಕಿತ್ತು. 2015ರ ವರೆಗೆ 5 ವರ್ಷಗಳ ಕಾಲ ನಿರ್ವಹಣೆ ಅವಧಿಯಿದೆ. ವಿಪರ್ಯಾಸವೆಂದರೆ ಕಾಮಗಾರಿ ಪ್ರಾರಂಭವಾಗಿದ್ದು 2012ರಲ್ಲಿ, ಮುಕ್ತಾಯವಾಗಿದ್ದು 2014ರ ಜೂನ್ನಲ್ಲಿ. ಹೀಗಿದ್ದರೂ ಈಗಾಗಲೇ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಕುರಿತು ಗ್ರಾಮಸ್ಥರು ಅನೇಕ ಬಾರಿ ಗುತ್ತಿಗೆದಾರರಿಗೆ ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಜಿಲ್ಲಾ ಯೋಜನಾ ವಿಭಾಗದ ಎಇಇ ಜಿ.ಆರ್. ಪಾಟೀಲ ಮತ್ತು ಶಾಖಾ ಅಧಿಕಾರಿ ಉಮೇಶ ಇಟಗಿ ಅವರ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಮುಂದಾಗದೆ ಕಣ್ಣುಚ್ಚಿ ಕುಳಿತಿದ್ದಾರೆ ಎಂದು ಮಲ್ಲಿಕಾರ್ಜುನಗೌಡ ಚೌಡರಡ್ಡಿ ಆರೋಪಿಸಿದರು.
ಜಿಲ್ಲಾಡಳಿತ ಎದುರು ಸತ್ಯಾಗ್ರಹ: ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕಳಪೆ ರಸ್ತೆ ಅಭಿವೃದ್ದಿ ಮತ್ತು ಅರ್ಧಕ್ಕೆ ನಿಂತ ರಸ್ತೆ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಅರಹುಣಸಿ ಮತ್ತು ಮೇಲ್ಮಠ ಗ್ರಾಮಸ್ಥರು, ರೈತರು ಚಕ್ಕಡಿ, ಟ್ರ್ಯಾಕ್ಟರ್ ಸಮೇತ ಜಿಲ್ಲಾ ಆಡಳಿತ ಭವನ ಎದುರು ಅನಿರ್ದಿಷ್ಟ ಕಾಲ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಗ್ರಾಮಸ್ಥರಾದ ಹೆಬ್ಬಳೆಪ್ಪ ನಡುವಿನಮನಿ, ಮೈಲಾರಪ್ಪ ಹೊಸತೋಟದ, ನಾಗರಾಜ ಗುದ್ನೇಪ್ಪನವರ, ಮುತ್ತಪ್ಪ ಗಾಣಿಗೇರ, ಅಲ್ಲಾಸಾಬ ಅತ್ತಾರ, ಸಿದ್ದಲಿಂಗಯ್ಯ ಹತ್ತಿಮಠ, ಶರಣಪ್ಪ ಚಲವಾದಿ, ಹನಮಂತ ತಿಮ್ಮರಡ್ಡಿ, ಪರಸಪ್ಪ ಆರೇರ, ಬಸವರಾಜ ಆರಮನದ ಪ್ರತಿಭಟನೆಯಲ್ಲಿದ್ದರು.