ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬತ್ತಿದ ಕೆರೆ ನೀರಿಗೆ ಬರೆ

Rashmi Kasaragodu
Updated On : 28 Apr 2014, 12:30 pm

ಶಿವಕುಮಾರ ಕುಷ್ಟಗಿ
ಗದಗ: ಜಿಲ್ಲೆಯಾದ್ಯಂತ ಕಳೆದ ಸಾಲಿನ ಹಿಂಗಾರು ಹಂಗಾಮಿನಲ್ಲಿ ಸಮರ್ಪಕವಾಗಿ ಮಳೆಯಾಗದ ಹಿನ್ನೆಲೆಯಲ್ಲಿ ಜಿಲ್ಲೆಯ ಬಹುತೇಕ ಕೆರೆಗಳು ಏ. 2ನೇ ವಾರದಲ್ಲಿಯೇ ಬತ್ತಿದ್ದು, ಮುಂದಿನ ಮುಂಗಾರು ಪ್ರಾರಂಭವಾಗಿ ಕೆರೆಗೆ ನೀರು ಲಭ್ಯವಾಗುವವರೆಗೂ ರೈತರು ತಮ್ಮ ಜಾನುವಾರುಗಳಿಗೆ ಬೇಕಾಗುವ ನೀರನ್ನು ಎಲ್ಲಿಂದ ತರುವುದು ಎನ್ನುವ ಆತಂಕ ಎದುರಿಸುತ್ತಿದ್ದಾರೆ.
ಜಿಲ್ಲೆಯ ಪಟ್ಟಣ ಪ್ರದೇಶಗಳಲ್ಲಿ ಈ ಸಮಸ್ಯೆ ಅಷ್ಟಾಗಿ ಕಂಡು ಬರುವುದಿಲ್ಲ. ಆದರೆ, 5 ತಾಲೂಕುಗಳ ವ್ಯಾಪ್ತಿಯ 106 ಗ್ರಾಪಂಗಳ ವ್ಯಾಪ್ತಿಯಲ್ಲಿ ಕೆಲ ಹಳ್ಳಿಗಳಲ್ಲಿನ ಕೆರೆಯಲ್ಲಿ ನೀರಿನ ಪ್ರಮಾಣ ಕೊನೆ ಹಂತಕ್ಕೆ ತಲುಪಿದ್ದರೆ, ಇನ್ನುಳಿದ ಹಲವಾರು ಕೆರೆಗಳು ಸಂಪೂರ್ಣ ಬತ್ತಿವೆ. ಇದರಿಂದ ಸಾರ್ವಜನಿಕರು ತಮಗೆ ಬೇಕಾಗುವ ನೀರನ್ನು ಪಡೆಯುವುದೇ ದುಸ್ಥರವಾದ ಈ ಸಂದರ್ಭ ಜಾನುವಾರುಗಳಿಗೂ ಬೇಕಾಗುವಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಸಿದೆ.
ಎಷ್ಟು ಕೆರೆಗಳಲ್ಲಿ ಸಮಸ್ಯೆ?: ಜಿಲ್ಲೆಯ 30ಕ್ಕೂ ಹೆಚ್ಚು ಗ್ರಾಮಗಳು ಸಂಪೂರ್ಣವಾಗಿ ಕೆರೆಗಳನ್ನೇ ಕುಡಿವ ನೀರಿಗೆ ಆಶ್ರಯಿಸಿವೆ. ಈ ಕೆರೆಗಳಿಗೆ ಜನವರಿ ಮೊದಲ ವಾರ ಮಲಪ್ರಭಾ ಕಾಲುವೆ ಮೂಲಕ ನೀರು ಹರಿಸಿದ ಹಿನ್ನೆಲೆಯಲ್ಲಿ ಕೆಲವೊಂದು ಗ್ರಾಮಗಳಲ್ಲಿ ಇನ್ನು 10ರಿಂದ 15 ದಿನಗಳಿಗಾಗುವಷ್ಟು ಮಾತ್ರ ಲಭ್ಯವಾಗಿದೆ. ಇನ್ನು ಜಿಲ್ಲೆಯ 5 ತಾಲೂಕುಗಳ ವ್ಯಾಪ್ತಿಯಲ್ಲಿ ಕೇವಲ ಜಾನುವಾರುಗಳ ಉಪಯೋಗಕ್ಕಾಗಿಯೇ 321 ಕೆರೆಗಳಿಗೆ ಅವುಗಳಲ್ಲಿ 198ಕ್ಕೂ ಹೆಚ್ಚು ಕೆರೆಗಳು ಈಗಾಗಲೇ ಸಂಪೂರ್ಣ ಬತ್ತಿವೆ. ಇನ್ನು 123 ಕೆರೆಗಳ ನೀರು ಸಂಗ್ರಹ ಕಡಿಮೆಯಾಗಿದೆ ಎನ್ನುವ ಮಾಹಿತಿ ಇಲಾಖೆಗಳ ಕಡತದಿಂದಲೇ ತಿಳಿದು ಬರುತ್ತದೆ.
ರೈತಾಪಿ ವರ್ಗ ತೊಂದರೆಯಲ್ಲಿ: ಕೆರೆಗಳಲ್ಲಿ ನೀರು ಸಂಗ್ರಹದ ಪ್ರಮಾಣದ ಕುಸಿದಿರುವುದು ಮತ್ತು ಕೆರೆಗಳು ಬತ್ತುತ್ತಿರುವ ನೇರ ಪರಿಣಾಮ ಗ್ರಾಮೀಣ ಪ್ರದೇಶದ ರೈತಾಪಿ ವರ್ಗದ ಮೇಲಾಗುತ್ತಿದೆ. ರೈತರು ತಮ್ಮ ಕೃಷಿ ಚಟುವಟಿಕೆಗೆ ಬೇಕಾಗುವ ಎತ್ತುಗಳು ಮತ್ತು ಪರ್ಯಾಯ ಉತ್ಪನ್ನವಾಗಿ ನಂಬಿರುವ ಹೈನುಗಾರಿಕೆಗಾಗಿ ಸಾಕಿರುವ ಜಾನುವಾರುಗಳಿಗೆ ನೀರಿಲ್ಲದಂತಾಗಿದೆ. ಇನ್ನು ಕೆಲ ಗ್ರಾಮಗಳಲ್ಲಿ ಕೆರೆಗಳಲ್ಲಿನ ನೀರನ್ನೇ ಆಧರಿಸಿ ತಮ್ಮ ಸಂಪೂರ್ಣ ಜೀವನ ನಡೆಸುತ್ತಿದ್ದಾರೆ ಎನ್ನುವುದು ಗಮನಾರ್ಹ.
ಜಾನುವಾರುಗಳದ್ದೇ ಚಿಂತೆ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 57 ಸಾವಿರಕ್ಕೂ ಅಧಿಕ ಕುಟುಂಬಗಳು ಇಂದಿಗೂ ಹೈನುಗಾರಿಕೆ ನಂಬಿ ಜೀವನ ಸಾಗಿಸುತ್ತಿದ್ದಾರೆ ಎಂದು ಇಲಾಖೆ ಕಡತಗಳು ಹೇಳುತ್ತಿವೆ. ಗ್ರಾಮೀಣ ಪ್ರದೇಶದ ಸಾರ್ವಜನಿಕರು ಸಾಕಿಕೊಂಡಿರುವ ಜಾನುವಾರುಗಳಿಗೆ ಕುಡಿಯಲು, ಅವುಗಳ ಮೈ ತೊಳೆಯಲು ಸಾಕಷ್ಟು ಪ್ರಮಾಣದಲ್ಲಿ ನೀರು ಬೇಕು. ಆದರೆ, ಗ್ರಾಮೀಣ ಪ್ರದೇಶದಲ್ಲಿ ತೀವ್ರ ವಿದ್ಯುತ್ ಕೊರತೆ ಹಾಗೂ ಅಂತರ್ಜಲದ ಕೊರತೆಯಿಂದ ಜಾನುವಾರುಗಳಿಗೆ ಕುಡಿಯಲು ನೀರು ಲಭ್ಯವಾಗುತ್ತಿಲ್ಲ. ಎಲ್ಲ ಜಾನುವಾರುಗಳಿಗೆ ಬೇಕಾಗುವಷ್ಟು ನೀರನ್ನು ಸಂಗ್ರಹಿಸುವುದು ಕಷ್ಟ ಸಾಧ್ಯ. ಹಾಗಾಗಿ, ಕೆರೆಗಳಲ್ಲಿನ ನೀರು ಕಡಿಮೆಯಾಗುತ್ತಿರುವುದು ಜಾನುವಾರು ಹೊಂದಿರುವ ಪ್ರತಿಯೊಬ್ಬರಲ್ಲಿಯೂ ಚಿಂತೆಗೆ ಕಾರಣವಾಗಿದೆ.


ಕೆರೆಗೆ ನೀರು ಬರಲಿ
ಪ್ರತಿ ವರ್ಷ ಬೇಸಿಗೆಯಲ್ಲಿ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲಾಗುತ್ತಿತ್ತು. ಆದರೆ, ಈ ಬಾರಿ ಡ್ಯಾಂನಲ್ಲಿಯೂ ನೀರಿಲ್ಲ. ಹಾಗಾಗಿ ಜಾನುವಾರುಗಳನ್ನು ಹೊಂದಿರುವ ನಮಗೆ ಸಾಕಷ್ಟು ಸಮಸ್ಯೆಯಾಗಿದೆ. ಬೇಸಿಗೆ ಸಂದರ್ಭ ದೊಡ್ಡ ಪ್ರಮಾಣದ ಮಳೆಯಾಗಿ ಕೆರೆ ನೀರು ಬಂದರೆ ಮಾತ್ರ ನಮ್ಮಂತೆ ಹೈನುಗಾರಿಕೆಯನ್ನೇ ನಂಬಿ ಜೀವನ ನಡೆಸುವವರಿಗೆ ಅನುಕೂಲ. ಇಲ್ಲವಾದಲ್ಲಿ ಕೊಡ ನೀರಿಗೆ ನಾವೇ ಪರದಾಡುತ್ತಿರುವ ಈ ಸಂದರ್ಭ ಜಾನುವಾರುಗಳನ್ನು ಸಾಕುವುದು ತೀರಾ ದುಸ್ತರವಾಗುತ್ತಿದೆ.
-ಸಂಗಪ್ಪ ತಳವಾರ
ಹೈನುಗಾರಿಕೆ ನಡೆಸುತ್ತಿರುವ ರೈತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement