ಕಾಂಗ್ರೆಸ್ ಧೋರಣೆ: ಖಂಡನೆ
ಗದಗ: ಅಕ್ರಮವಾಗಿ ಗೋವುಗಳನ್ನು ಸಾಗಿಸುವಾಗ ಎಎನ್‌ಎಫ್ ಪೊಲೀಸರ ಗುಂಡಿನಿಂದ ಹತನಾದ ಕಬೀರ್ ಪ್ರಕರಣದಲ್ಲಿ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿ ಅತ್ಯಂತ ಖಂಡನೀಯ ಎಂದು ಆರೋಪಿಸಿ ಸೋಮವಾರ ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭ ಮಾತನಾಡಿದ ಪಕ್ಷದ ವಿವಿಧ ಮುಖಂಡರು, ಮೊದಲಿಂದಲೂ ಸಮಾಜ ಒಡೆಯುವ ಪಕ್ಷಪಾತಿ ಧೋರಣೆಗಳನ್ನು ತನ್ನ ಆಡಳಿತದಲ್ಲಿ ರೂಢಿಸಿಕೊಂಡಿದ್ದ ಈ ಸರ್ಕಾರ, ಈ ಪ್ರಕರಣದಲ್ಲಿ ತನ್ನ ಹಳೇ ಚಾಳಿ ಮುಂದುವರೆಸಿದೆ. ಅಪರಾಧಿಗಳಿಗೆ ಕುಮ್ಮಕ್ಕು ನೀಡುವ ಹಾಗೂ ಕರ್ತವ್ಯನಿರತ ಪೊಲೀಸರ ನೈತಿಕ ಸ್ಥೈರ್ಯ ಕುಸಿಯುವಂತಹ ಕಾಂಗ್ರೆಸ್‌ನ ನಡೆಯನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದರು. ಅನೇಕ ಬಾರಿ ನಕ್ಸಲ್ ಕೃತ್ಯಗಳು ನಡೆದಿದ್ದ ಶೃಂಗೇರಿಯ ತನಿಕೋಡಿನಲ್ಲಿ ನಿಯೋಜನೆಯಾಗಿದ್ದ ಎಎನ್‌ಎಫ್ ಪಡೆಯ ಪೊಲೀಸರು, ರಾತ್ರಿ ವೇಳೆ ಕದ್ದು ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಕಬೀರ ಮತ್ತು ಸಂಗಡಿಗರ ವಾಹನ ನಿಲ್ಲಿಸಿ ತಪಾಸಣೆಗೊಳಿಪಡಿಸಲು ಪ್ರಯತ್ನಿಸಿದಾಗ ಕಾನೂನಿನನ್ವಯ ತಪಾಸಣೆಗೊಳಡದೆ ವಾಹನದಿಂದ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರಿಂದ, ಸೂಕ್ಷ್ಮ ಪರಿಸ್ಥಿತಿ ಅರಿವಿದ್ದ ನಕ್ಸಲ್ ದಳದ ಪೊಲೀಸರು ಅನುಮಾನಗೊಂಡು ಗುಂಡು ಹಾರಿಸಬೇಕಾದ ಅನಿವಾರ್ಯತೆ ಉಂಟಾಗಿದೆ. ಆದರೆ, ಈ ಸಾಮಾನ್ಯ ಸಂಗತಿ ಅರಿಯದ ಸರ್ಕಾರ ಮೃತನ ಮತದ (ಅಲ್ಪಸಂಖ್ಯಾತ) ಆಧಾರದ ಮೇಲೆ ತನ್ನ ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ದೂರಿದರು. ಸಚಿವ ಯು.ಟಿ. ಖಾದರ್ ಕಬೀರ್ ಮತ್ತು ಸಂಗಡಿಗರ ಪರವಾಗಿ ಹೇಳಿಕೆ ನೀಡುವ ಮೂಲಕ ಅವರ ಅಪರಾಧಗಳನ್ನು ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ. ಸಚಿವ ರಮಾನಾಥ ರೈ ಈ ಪ್ರಕರಣದಲ್ಲಿ ಸಂಬಂಧವೇ ಇಲ್ಲದ ಸಂಘ ಪರಿವಾರ ಎಳೆದು ತರುವು ಮೂಲಕ ಅಲ್ಪಸಂಖ್ಯಾತರಲ್ಲಿ ಕೋಮುಭಾವನೆ ಮೂಡಿಸಿ ತಮ್ಮ ಬೆಳೆ ಬೆಯಿಸಿಕೊಳ್ಳಲು ಸಂಚು ನಡೆಸಿದ್ದಾರೆ.
ಅಪರಾಧಿಗಳನ್ನು ಕೋಮು ಆಧಾರದ ಮೇಲೆ ನೋಡುವ, ರಕ್ಷಿಸುವ ಪ್ರೋತ್ಸಾಹ ನೀಡುವ ರೀತಿ ನೀತಿಗಳನ್ನು ಸರ್ಕಾರ ಕೈಬಿಡಬೇಕು. ಸರ್ಕಾರ ತನ್ನ ಈ ನಡೆಯನ್ನು ತಿದ್ದಿಕೊಳ್ಳದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಪಾಲರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ. ಪ್ರತಿಭಟನೆಯಲ್ಲಿ ಈಶಣ್ಣ ಮುನವಳ್ಳಿ, ಶ್ರೀನಿವಾಸ ಭಾಂಡಗೆ, ಎಂ.ಎಂ. ಹಿರೇಮಠ, ದಶರಥ ಕೊಳ್ಳಿ, ಅನಿಲ ಅಬ್ಬಿಗೇರಿ, ಜಗದೀಶ ಬಾಂಡಗೆ, ವಿಶ್ವನಾಥ, ಮಂಜುನಾಥ ಹವಳೆ, ಸುದೀರ ಕಾಟಿಗರ, ಪವನ ಬಾಕಳೆ, ಕರಿಗೌಡ್ರ, ವಿನಾಯಕ ಹಬೀಬ, ಅಶೋಕ ಜವಳಿ, ಸುರೇಶ ಚಿತ್ತರಗಿ, ಸಾಗರ ಕೊಳ್ಳಿ, ಬಾಬಣ್ಣ ಮಾನ್ವಿ, ಮಹಾದೇವಪ್ಪ ಚಿಂಚಲಿ, ಮಾಲಿಗೌಡರ ಇದ್ದರು.