ಮರಳು ವಿತರಿಸಲು ತೀರ್ಮಾನ
ಗದಗ: ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ ಪ್ರಕಾರ ಹರಾಜು ಮಾಡಬೇಕಾಗಿರುವ ಮರಳು ಬ್ಲಾಕ್ಗಳನ್ನು ಸಮೀಕ್ಷೆ ನಡೆಸಿ ಗುರುತಿಸಲು ಸಂಬಂಧಿತರಿಂದ ಪ್ರಸ್ತಾವನೆಗೆ ದಿನಪತ್ರಿಕೆಗಳಲ್ಲಿ ಜಾಹೀರಾತು ಪ್ರಕಟಿಸಲಾಗಿತ್ತು. ಈ ಕುರಿತಂತೆ ಸ್ವೀಕೃತವಾದ ಅರ್ಜಿಗಳ ಕುರಿತು ಸೋಮವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು.
ಸಮಿತಿಯ ಅಧ್ಯಕ್ಷ, ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಅವರು ಮಾತನಾಡಿ, ಈಗಾಗಲೇ ಬಂದಿರುವ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಮಾಡಿ ಅರ್ಹರಿರುವವರ ಪಟ್ಟಿ ತಯಾರಿಸಿ ತಯಾರಿಸಿ ತಾಂತ್ರಿಕ ಮತ್ತು ಆರ್ಥಿಕ ಪ್ರಸ್ತಾವನೆ ಕೋರಿಕೆಗೆ ಅಗತ್ಯದ ಕ್ರಮ ಜರುಗಿಸಲು ಗಣಿ ಇಲಾಖೆಯ ಹಿರಿಯ ಭೂ ವಿಜ್ಞಾನಿ ಹಾಗೂ ಕಾರ್ಯನಿರ್ವಾಹಕ ಅಭಿಯಂತರರು ಮತ್ತು ಲೋಕೋಪಯೋಗಿ ಇಲಾಖೆ, ಗದಗ ಇವರಿಗೆ ಸೂಚಿಸಿದರು.
ವಿವರ ತಕ್ಷಣ ಸಲ್ಲಿಸಿ: ಲೋಕೋಪಯೋಗಿ ಇಲಾಖೆಯ ಸ್ಟಾಕ್ ಯಾರ್ಡ್ನಲ್ಲಿ ಇರುವ ಮರಳು ದಾಸ್ತಾನನ್ನು ಗ್ರಾಹಕರಿಗೆ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪ್ರಸ್ತುತ 4 ಸ್ಟಾಕ್ ಯಾರ್ಡ್ಗಳಲ್ಲಿ ಮರಳನ್ನು ಸಂಗ್ರಹಣೆ ಮಾಡಲಾಗಿದ್ದು, ನಿರಂತರವಾಗಿ ಮರಳು ಸರಬರಾಜು ಮಾಡಲು ಮೂಲ ಸೌಕರ್ಯ ಹೊಂದಿರುವಂತಹ ಸ್ಟಾಕ್ ಯಾರ್ಡ್ನ ಮರಳನ್ನು ಹೊರತುಪಡಿಸಿ ಉಳಿದವುಗಳಲ್ಲಿರುವ ಮರಳನ್ನು ಆದ್ಯತೆಯ ಮೇಲೆ ಗ್ರಾಹಕರಿಗೆ ನೀಡುವಂತೆ ಹಾಗೂ ಸದ್ಯ ಅವುಗಳಲ್ಲಿ ಲಭ್ಯವಿರುವ ಮರಳಿನ ಪ್ರಮಾಣ, ದಂಡ ಮೂಲಕ ವಸೂಲಾದ ಮೊತ್ತದ ವಿವರವನ್ನು ತಕ್ಷಣ ಸಲ್ಲಿಸಲು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಸಂಜೆ 6 ನಂತರ ಸಂಚಾರ ಬೇಡ: ಗದಗ ಜಿಲ್ಲೆಗೆ 20 ಮತ್ತು ಇತರೆ ಜಿಲ್ಲೆಗಳಿಗೆ 60 ಲೋಡ್ ಮರಳನ್ನು ಮಾತ್ರ ದಿನಂಪ್ರತಿ ಗ್ರಾಹಕರಿಗೆ ಸರಬರಾಜು ಮಾಡಲು ತೀರ್ಮಾನಿಸಲಾಯಿತು. ದಿನಕ್ಕೆ ಒಂದು ವಾಹನಕ್ಕೆ ಒಂದು ಸಲ ಮಾತ್ರ ಮರಳು ಸಾಗಾಟ ಮಾಡಲು ಪರವಾನಗಿ ಜಾರಿ ಮಾಡಿ ಬೆಳಗ್ಗೆ 8ರಿಂದ ಮಧ್ಯಾಹ್ನ 2ರ ವರೆಗೆ ಮಾತ್ರ ಸ್ಟಾಕ್ ಯಾರ್ಡ್ನಲ್ಲಿರುವ ಮರಳನ್ನು ಗ್ರಾಹಕರಿಗೆ ವಿತರಿಸುವಂತೆ ತೀರ್ಮಾನಿಸಲಾಯಿತು. ಸಂಜೆ 6ರೊಳಗೆ ಎಲ್ಲಾ ವಾಹನಗಳು ನಿರ್ಮಾಣದ ಸ್ಥಳ ತಲುಪಬೇಕು. ಆ ಅವಧಿಯ ನಂತರ ರಸ್ತೆಯಲ್ಲಿ ಸಂಚರಿಸುವ ಮರಳು ತುಂಬಿದ ವಾಹನಗಳನ್ನು ಅನಧಿಕೃತವೆಂದು ಪರಿಗಣಿಸಿ ಅಂತಹ ವಾಹನಗಳನ್ನು ಹಾಗೂ ಜಪ್ತಿ ಮಾಡಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು.
ನಂಬರ್ ಪ್ಲೇಟ್ ಇಲ್ಲದ ವಾಹನ ಜಪ್ತಿ ಮಾಡಿ: ಟ್ರ್ಯಾಕ್ಟರ್ಗಳಿಂದ ಮರಳು ಸಾಗಾಟ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಲಾಗಿದೆ. ವಿಶೇಷ ಪ್ರಕರಣಗಳಲ್ಲಿ ಹಾಗೂ ಸ್ವಂತ ಕಟ್ಟಡ ನಿರ್ಮಾಣಕ್ಕೆ ಮಾತ್ರ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಮರಳು ಸಾಗಾಟ ಪರವಾನಗಿ ಕಡ್ಡಾಯವಾಗಿ ಪಡೆಯುವುದು ಅವಶ್ಯಕವಾಗಿದೆ. ರಿಜಿಸ್ಟ್ರೇಶನ್ ನಂಬರ್ ಪ್ಲೇಟ್ ಇಲ್ಲದ ವಾಹನಗಳನ್ನು ಜಪ್ತಿ ಮಾಡಿ ಪೊಲೀಸ್ ಇಲಾಖೆಗೆ ಒಪ್ಪಿಸಿ ನಿಯಮಾನುಸಾರದಂತೆ ಕ್ರಮವನ್ನು ಜರುಗಿಸಲಾಗುವುದು.
ಅಕ್ರಮ ಮರಳು ಸಾಗಾಟ ಬಗ್ಗೆ ನಿಗಾ: ಅನಧಿಕೃತ ಮರಳು ಸಾಗಾಟ ಮಾಡಿದ ವಾಹನಗಳ ಮಾಲೀಕರ ಪಟ್ಟಿ ತಯಾರಿಸಿ ಟಾಸ್ಕ್ ಫೋಸ್ಸ್ ಸಮಿತಿ ಸಭೆಗೆ ಮಂಡಿಸುವಂತೆ ಹಾಗೂ ಎರಡಕ್ಕೂ ಹೆಚ್ಚು ಬಾರಿ ಅನಧಿಕೃತವಾಗಿ ಮರಳು ಗಣಿಗಾರಿಕೆಯಲ್ಲಿ ನಿರತರಾದ ವಾಹನಗಳ ಪರವಾನಗಿ ರದ್ದುಪಡಿಸಲು ಮತ್ತು ಅದರ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಎಲ್ಲಾ ಕಾರ್ಯನಿರ್ವಾಹಕ ದಂಡಾಧಿಕಾರಿಗಳಿಗೆ ಹಾಗೂ ಅಕ್ರಮ ಮರಳು ಸಾಗಾಟ ನಡೆಯದಂತೆ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರೆಲ್ಲರೂ ನಿಗಾವಹಿಸುವಂತೆ ಸೂಚನೆ ನೀಡಲಾಯಿತು.
ತನಿಖಾ ಠಾಣೆ ನಿರ್ಮಿಸಿ: ಪಟ್ಟಾ ಜಮೀನಿನಲ್ಲಿ ಅನಧಿಕೃತ ಮರಳು ಗಣಿಗಾರಿಕೆ ಮತ್ತು ದಾಸ್ತಾನು ಮಾಡಿದ್ದಲ್ಲಿ ಆ ಜಮೀನನ್ನು ಭೂಕಂದಾಯ ಕಾಯ್ದೆಯಡಿ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಮತ್ತು ಭೂ ಮಾಲೀಕರ ವಿರುದ್ಧ ಕ್ರಮ ಕೈಕೊಳ್ಳುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದರು.
ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಟ ತಡೆಯಲು ಜಿಲ್ಲಾ ಟಾಸ್ಕ್ ಫೋಸ್ಸ್ ಸಮಿತಿ ಸದಸ್ಯರನ್ನೊಳಗೊಂಡ ವಿಚಕ್ಷಣದಳ ರಚಿಸಿ ಗಣಿಗಾರಿಕೆ ಮತ್ತು ಸಾಗಾಟ ಗಸ್ತು ಕಾರ್ಯ ಮಾಡಿ ನಿಯಂತ್ರಿಸಲು ಹಾಗೂ ಮರಳು ಸಾಗಾಟ ಮಾಡುವ ವಾಹನಗಳ ದಟ್ಟಣೆ ಇರುವ 4 ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಹಾಗೂ ಇತರೆ ಎಲ್ಲ ಮೂಲ ಸೌಕರ್ಯ ಹೊಂದಿರುವಂತಹ ತನಿಖಾ ಠಾಣೆಗಳನ್ನು ನಿರ್ಮಿಸುವಂತೆ ಮತ್ತು ಸದರಿ ತನಿಖಾ ಠಾಣೆಯಲ್ಲಿ ಶಸ್ತ್ರಸಜ್ಜಿತ ಪೊಲೀಸ್ ಸಿಬ್ಬಂದಿ ಕಂದಾಯ ಅಧಿಕಾರಿಗಳು ಇರುವಂತೆ ನೋಡಿಕೊಳ್ಳಬೇಕು.
ಪಿಡಬ್ಲ್ಯು ಭೂ ವಿಜ್ಞಾನಿಗಳು ಕಾರ್ಯನಿರ್ವಹಿಸಲು ಮತ್ತು 25 ಹೋಮ್ ಗಾಡ್ಸ್ಗಳನ್ನು ನಿಯೋಜಿಸಿಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ. ಬಾಲಕೃಷ್ಣ, ಕಾನೂನು ಸಲಹೆಗಾರರು, ಗಣಿ, ಅರಣ್ಯ, ಕಂದಾಯ, ಲೋಕೋಪಯೋಗಿ, ಕಾರ್ಮಿಕ ಹಾಗೂ ಸಾರಿಗೆ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.