ರಾಮದೇವ್ ಹೇಳಿಕೆ ಖಂಡನೀಯ: ಹಾಳಕೇರಿ
ರೋಣ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ದಲಿತರ ಮನೆಗೆ ಪಿಕ್‌ನಿಕ್ ಮತ್ತು ಹನಿಮೂನ್‌ಗೆ ಹೋಗುತ್ತಾರೆ ಎಂದಿರುವ ಯೋಗ ಗುರು ಬಾಬಾ ರಾಮದೇವ್ ಹೇಳಿಕೆ ತೀವ್ರ ಖಂಡನೀಯ ಎಂದು ಪುರಸಭೆ ಸದಸ್ಯ ಮಂಜುನಾಥ ಹಾಳಕೇರಿ ಆಕ್ರೋಶ ವ್ಯಕ್ತಪಡಿದರು. ಈ ಕುರಿತು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಾಬಾ ರಾಮದೇವ್‌ರವರು ಉತ್ತಮ ಯೋಗಗುರುವಾಗಿದ್ದು, ಈ ರೀತಿ ಮಾತನಾಡುವುದು ಶೋಭೆ ತರುವಂತದಲ್ಲ. ಶ್ರೇಷ್ಠ ಸ್ಥಾನದಲ್ಲಿದ್ದುಕೊಂಡು ಸಣ್ಣತನದ ಮಾತುಗಳನ್ನಾಡುವುದರ ಜತೆಗೆ ಸಮಸ್ತ ದಲಿತ ಸಮುದಾಯವನ್ನು ಅವಮಾನಿಸಿದ್ದಾರೆ. ದಲಿತ ಜನಾಂಗಕ್ಕೆ ಅಪಮಾನ ಮತ್ತು ಶೋಷಣೆ ಮಾತುಗಳನ್ನಾಡಿದ ಬಾಬಾ ರಾಮದೇವರನ್ನು ದೇಶದಿಂದ ಗಡಿಪಾರು ಮಾಡಬೇಕುಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೈಕ್ -ಟ್ಯಾಂಕರ್ ಡಿಕ್ಕಿ: ಓರ್ವ ಸಾವು
ಗದಗ: ತಾಲೂಕಿನ ಹುಲಕೋಟಿ ಗ್ರಾಮದ ಬಳಿ ಈಚಲಹಳ್ಳದ ಬಳಿ ಟ್ಯಾಂಕರ್‌ವೊಂದು ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ರಾತ್ರಿ ನಡೆದಿದೆ. ಮೃತನನ್ನು ಅಂತೂರ-ಬೆಂತೂರ ಗ್ರಾಮದ ಅಶೋಕ ಜಾಲಣ್ಣವರ(35) ಎಂದು ಗುರುತಿಸಲಾಗಿದೆ. ಅಶೋಕ ಗ್ರಾಪಂ ಕಚೇರಿಯಲ್ಲಿ ಬಿಲ್‌ಕಲೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ. ಬೈಕ್‌ನಲ್ಲಿದ್ದ ಇನ್ನೋರ್ವನಿಗೆ ಗಂಭೀರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಮಾಡಿ ಪರಾರಿಯಾಗಲು ಯತ್ನಿಸಿದ ಟ್ಯಾಂಕರ್‌ನ್ನು ಸಾರ್ವಜನಿಕರೇ ಹಿಡಿದಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.