ನೀರಿಗಾಗಿ ಆಗ್ರಹಿಸಿ ನರೇಗಲ್ಲ ಪಪಂಗೆ ಬೀಗ
ನರೇಗಲ್ಲ: ಪಟ್ಟಣದಲ್ಲಿ ನೀರಿನ ಬವಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪಟ್ಟಣ ಪಂಚಾಯಿತಿ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡುತ್ತಿರುವುದು ಜನತೆಗೆ ಮತ್ತು ದನಕರುಗಳಿಗೆ ಸಾಕಾಗುತ್ತಿಲ್ಲ. ಹೀಗಾಗಿ ನಿತ್ಯವೂ ಯಾವುದಾದರೊಂದು ವಾರ್ಡಿನ ಜನತೆ ಪಟ್ಟಣ ಪಂಚಾಯಿತಿಗೆ, ಮುಖ್ಯಾಧಿಕಾರಿಗೆ, ಪ್ರತಿಭಟನೆ ಮಾಡುತ್ತಲೇ ಇರುತ್ತಾರೆ.
ಅಷ್ಟಾದರೂ ಕ್ರಮಕ್ಕೆ ಮುಂದಾಗದ್ದರಿಂದ ಆಕ್ರೋಶಗೊಂಡ ಪಟ್ಟಣದ 11ನೇ ವಾರ್ಡಿನ ಸಾರ್ವಜನಿಕರು ತಮಗೆ ಸಮರ್ಪಕ ನೀರು ಒದಗಿಸಬೇಕೆಂದು ಆಗ್ರಹಿಸಿ ಮಂಗಳವಾರ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ, ಬೀಗ ಜಡಿದು ಪ್ರತಿಭಟಿಸಿದರು. ಮುಖ್ಯಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿಗೆ ಮೀಟಿಂಗ್ಗೆ ಹೋಗಿದ್ದಾರೆ. ಅಲ್ಲಿ ನೀರಿನ ಬಗ್ಗೆಯೆ ಚರ್ಚೆ ನಡೆಯುತ್ತಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ನೀರಿನ ತೊಂದರೆ ನೀಗಿಸಲೆಂದು ರು. 15 ಲಕ್ಷ ಬಿಡುಗಡೆ ಮಾಡಿದ್ದಾರೆ. ಪೈಪ್ಲೈನ್ ಕಾಮಗಾರಿ ನಿನ್ನೆಯಿಂದಲೇ ಪ್ರಾರಂಭವಾಗಿದೆ. ನಿಮಗೆ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡುತ್ತೇವೆ. ತಾವು ಶಾಂತವಾಗಿ ತೆರಳಬೇಕೆಂದು ಹಾಜರಿದ್ದ ಸಿಬ್ಬಂದಿ ವಿನಂತಿಸಿದರು. ಸಿಬ್ಬಂದಿಯವರ ಯಾವ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳದ ಸಾರ್ವಜನಿಕರು ಮೊ ದಲೇ ಸಿದ್ಧರಾಗಿ ಬಂದಿದ್ದಂತೆ ಪಟ್ಟಣ ಪಂಚಾಯಿತಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೂ ಸಿಬ್ಬಂದಿ ಹರ ಸಾಹಸಪಟ್ಟು ಅವರಿಗೆ ನೀರು ಸರಬರಾಜು ಮಾಡಿದ ನಂತರ 3-4 ಗಂಟೆಗಳ ನಂತರ ಸಾರ್ವಜನಿಕರು ಬೀಗ ತೆರೆದು ಕಚೇರಿ ಕಾರ್ಯಗಳು ಸುಗಮವಾಗಿ ನಡೆಯಲು ಅನುಕೂಲ ಮಾಡಿಕೊಟ್ಟರು.