ಪದವೀಧರರ ಕ್ಷೇತ್ರಕ್ಕೆ ಜೆಡಿಎಸ್ನಿಂದ ಆಕಾಂಕ್ಷಿ: ಹನುಮಂತಗೌಡ ಕಲ್ಮನಿ
ಕನ್ನಡಪ್ರಭ ವಾರ್ತೆ, ಗದಗ, ಏ. 29
ಪಶ್ಚಿಮ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ನಾನೂ ಕೂಡಾ ಆಕಾಂಕ್ಷಿ. ಈ ಬಗ್ಗೆ ಜೆಡಿಎಸ್ ವರಿಷ್ಠರಾದ ದೇವೇಗೌಡರ ಹಾಗೂ ಕುಮಾರಸ್ವಾಮಿಯವರ ಹತ್ತಿರ ಇನ್ನು 2 ದಿನದಲ್ಲಿ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳೊಂದಿಗೆ ನಿಯೋಗ ತೆಗೆದುಕೊಂಡು ಹೋಗುತ್ತೇವೆ ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ರಾಜ್ಯ ಉಪಾಧ್ಯಕ್ಷ, ಜೆಡಿಎಸ್ ಯುವ ಮುಖಂಡ ಹನುಮಂತಗೌಡ ಕಲ್ಮನಿ ಹೇಳಿದರು.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜೆಡಿಎಸ್ ಪಕ್ಷದಲ್ಲಿ ಸುಮಾರು 8 ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನರಗುಂದ ಕ್ಷೇತ್ರದ ಟಕೆಟ್ ಆಕಾಂಕ್ಷಿಯಾಗಿದ್ದ ನಾನು ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಟಿಕೆಟ್ ಕೊಡುವ ಭರವಸೆಯನ್ನು ನಾಯಕರು ಕೊಟ್ಟಿದ್ದರು. ನರಗುಂದ ವಿಧಾನಸಭೆ ಕ್ಷೇತ್ರದ ಯುವ ಘಟಕದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದು ನಾಯಕರು ಇದನ್ನು ಗಮನಿಸಿದ್ದಾರೆ. ಪಕ್ಷದಲ್ಲಿ ಆಕಾಂಕ್ಷಿಗಳು ಇರುವುದು ಸಾಮಾನ್ಯ. ಪಕ್ಷದ ವರಿಷ್ಠರು ಅಭ್ಯರ್ಥಿಯನ್ನು ಅಳೆದು ತೂಗಿ ಅಭ್ಯರ್ಥಿಯ ಆಯ್ಕೆ ಮಾಡಲಿದ್ದು ನನಗೆ ಟಿಕೆಟ್ ಸಿಗುವ ಭರವಸೆಯಿದೆ ಹಾಗೂ ಕ್ಷೇತ್ರದಲ್ಲಿ ಈಗಾಗಲೇ ಸಭೆಗಳನ್ನು ನಡೆಸುತ್ತಿದ್ದು ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹಿಂದೆ ಪದವೀಧರರ ಕ್ಷೇತ್ರದಿಂದ ಆಯ್ಕೆಯಾದ ನಾಯಕರು ಚುನಾವಣೆ ಮುಗಿದ ತಕ್ಷಣ ಯಾರೊಬ್ಬರೂ ಸಮಸ್ಯೆ ಬಗೆಹರಿಸುವತ್ತ ಗಮನ ಕೊಟ್ಟಿಲ್ಲ. ಡಾ. ಅಬ್ದುಲ್ ಕಲಾಂ ಅವರ ಕನಸು ನನಸಾಗಬೇಕಾದರೆ ಪ್ರಜ್ಞಾವಂತ ಪದವೀಧರರು ವಿಚಾರಿಸಿ, ತಮ್ಮ ಸಮಸ್ಯೆಗಳನ್ನು ಬಗೆಹರಿಸುವ ಸಮರ್ಥ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಮನವಿ ಮಾಡಿದರು.