ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಾರದಲ್ಲಿ ನೀರಿನ ಸಮಸ್ಯೆ ಪರಿಹಾರ

Rashmi Kasaragodu
Updated On : 30 Apr 2014, 12:46 pm

ನರೇಗಲ್ಲ: ಪಟ್ಟಣದಲ್ಲಿ ತಲೆದೋರಿರುವ ನೀರಿನ ಸಮಸ್ಯೆಗೆ ಇನ್ನೊಂದು ವಾರದಲ್ಲಿ ಪರಿಹಾರ ದೊರಕಲಿದೆಂದು ಪಪಂ ಮು ಖ್ಯಾಧಿಕಾರಿ ವಿಜಯಲಕ್ಷ್ಮಿ ಹೇಳಿದರು.
ಅವರು ಮಂಗಳವಾರ ಪಪಂ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನರೇಗಲ್ಲದ ಬಹುತೇಕ ವಾರ್ಡ್ಗಳಲ್ಲಿ ನೀರಿನ ಸಮಸ್ಯೆ ಬಗೆಹರಿಯಲಿದೆ. ಅದಕ್ಕಾಗಿ ಇಂದಿನಿಂದಲೇ ಸಮರೋಪಾದಿಯಲ್ಲಿ ಪೈಪ್ಲೈನ್ ಕೆಲಸ ಪ್ರಾರಂಭಿಸಲಾಗುವುದು. ಪಟ್ಟಣದ ನೀರಿನ ತೊಂದರೆ ಗಮನಿಸಿರುವ ಜಿಲ್ಲಾಧಿಕಾರಿಗಳು ರು. 15 ಲಕ್ಷ ಅನುದಾನವನ್ನು ಕಾಮಗಾರಿಗಾಗಿ ಮಂಜೂರು ಮಾಡಿದ್ದು ಕಾಮಗಾರಿಯ ವಸ್ತುಗಳೆಲ್ಲವೂ ಇಂದು ಪಟ್ಟಣಕ್ಕೆ ಬರುತ್ತಿವೆ ಎಂದರು. ಈಗಾಗಲೇ 7 ಬೋರ್ವೆಲ್ಗಳು ಚಾಲನೆಯಲ್ಲಿದ್ದು ಅವುಗಳಿಂದ ನೀರನ್ನು ಪಡೆಯಲಾಗುವುದು. ಇನ್ನೂ 8 ಬೋರ್ ಪಾಯಿಂಟ್ಗಳನ್ನು ಹಾಕಿಸುವ ಕಾರ್ಯ ಪ್ರಗತಿಯಲ್ಲಿದ್ದು, ಅವುಗಳ ನಿಖರ ಜಾಗೆಯನ್ನು ಇಂದೇ ಗುರುತಿಸಲಾಗುವುದು. ಭೂಗರ್ಭ ತಜ್ಞರ ಪ್ರಕಾರ ಗದ್ದಿಹಳ್ಳದ ಬಳಿ 2 ಪಾಯಿಂಟ್, ರಾಹುತರ ಬಾವಿಯ ಹತ್ತಿರ ಒಂದು, ಹಂಜಿಯವರ ತೋಟದ ಬಳಿ ಒಂದು, ಕೆರೆಯಲ್ಲಿರುವ ಎಲೆಕ್ಟ್ರಿಕ್ ಗ್ರಿಡ್ ಬಳಿ ಒಂದು ಹೀಗೆ 8 ಪಾಯಿಂಟ್ ಗುರುತಿಸುವ ಕಾರ್ಯ ನಡೆಯಲಿದ್ದು ಇವುಗಳಿಂದಲೂ ನೀರಿನ ಮೂಲ ಪಡೆಯಬಹುದಾಗಿದೆ. ಹಾಕಲಾಗುವ ಹೊಸ ಪೈಪ್ಲೈನ್ ಅಂದಾಜು 1.7 ಕಿ.ಮೀ. ನಷ್ಟಿದ್ದು ದ್ಯಾಂಪುರ ರಸ್ತೆಯಲ್ಲಿರುವ ಬಿಸನಳ್ಳಿಯವರ ತೋಟದಿಂದ ಹಾಕಲಾಗುತ್ತಿದೆ. ಈ ಪೈಪ್ಲೈನ್ ಬಂಡಿಹಾಳ ರಸ್ತೆಯಲ್ಲಿನ ಸಂಪ್ವರೆಗೆ ಬಂದು ತಲುಪುತ್ತದೆ. ಇದರಿಂದ 12, 13 ಮತ್ತು 14ನೇ ವಾರ್ಡಿನ ಜನತೆಗೆ ನೀರಿನ ಅನುಕೂಲವಾಗುತ್ತದೆ. ಹಂಚಿನಾಳ ರಸ್ತೆಯಲ್ಲಿರುವ ಬೋರ್ನಿಂದಲೂ ಲೈನ್ ಸಂಪರ್ಕ ತಂದು 7 ಮತ್ತು 9ನೇ ವಾರ್ಡಿನ ಜನತೆಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ನರಗುಂದ ನಾಗಪ್ಪನವರ ಖಾನಾವಳಿಯ ಎದುರಿನ ಬೋರ್ ಕಾರ್ಯನಿರತವಾಗಿದ್ದು, ಇದಕ್ಕೆ ಮೋಟರ್ನ್ನು ಕೂಡ್ರಿಸಿದರೆ 11 ಮತ್ತು 15ನೇ ವಾರ್ಡಿನ ಜನತೆಗೆ ನೀರಿನ ಅನುಕೂಲವಾಗುತ್ತದೆ. ಹೀಗೆ ವಿವಿಧ ಯೋಜನೆ ಮತ್ತು ಕಾಮಗಾರಿಗಳ ಮೂಲಕ ಪಟ್ಟಣದ ನೀರಿನ ಬರವನ್ನು ನೀಗಿಸಲು ಪಪಂ ಮುಂದಾಗಿದ್ದು ಕಾಮಗಾರಿ ಅನಿವಾರ್ಯ ಕಾರಣಗಳಿಂದ ಒಂದೆ ರಡು ದಿನ ವಿಳಂಬವಾದರೂ ಜನ ರು ಸಹಕರಿಸಬೇಕೆಂದು ವಿನಂತಿಸಿದ ಮುಖ್ಯಾಧಿಕಾರಿಗಳು ಅಲ್ಲಿಯವರೆಗೂ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಪ್ರಕ್ರಿಯೆ ಮುಂದುವರಿಯಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement