ಆರೋಗ್ಯ ತಪಾಸಣಾ ಶಿಬಿರ ಎಲ್ಲೆಡೆ ನಡೆಯಲಿ
ಕನ್ನಡಪ್ರಭ ವಾರ್ತೆ, ಗದಗ, ಏ. 30
ಇಂದಿನ ದುಬಾರಿ ವೈದ್ಯಕೀಯ ವೆಚ್ಚದಲ್ಲಿ ಸಾಮಾನ್ಯ ಜನರಿಗೆ ಅನುಕೂಲವಾಗಲು ಆರೋಗ್ಯ ಉಚಿತ ತಪಾಸಣಾ ಶಿಬಿರಗಳು ಎಲ್ಲೆಡೆಯೂ ನಡೆಯಬೇಕು ಎಂದು ಸುಶ್ರುತ ಸೇವಾ ಸಂಸ್ಥೆಯ ಸಂಸ್ಥಾಪಕ ಡಾ. ಎಸ್.ಆರ್. ಹಿರೇಮಠ ಹೇಳಿದರು.
ಅವರು ಬುಧವಾರ ನಗರದ ಗಂಜೀ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸುಶ್ರುತ ಸೇವಾ ಸಂಸ್ಥೆ, ಎನ್‌ಐಎಂಎ, ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಇವುಗಳ ಆಶ್ರಯದಲ್ಲಿ ನಗರದ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಆರೋಗ್ಯ ಉಚಿತ ತಪಾಸಣೆ, ಔಷಧ ಉಚಿತ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ಮನುಷ್ಯನಿಗೆ ಆರೋಗ್ಯವೇ ಭಾಗ್ಯ, ನಾವು ಆರೋಗ್ಯ ಕಾಯ್ದುಕೊಳ್ಳಲು ಆಗಾಗ ತಜ್ಞ ವೈದ್ಯರಿಂದ ಸಲಹೆ ಪಡೆಯುವುದು ಅವಶ್ಯ. ದುಬಾರಿ ವೆಚ್ಚದ ಔಷಧೋಪಚಾರಗಳು ಸಾಮಾನ್ಯ ಜನರಿಗೆ ತಲುಪುತ್ತಿಲ್ಲ. ಅದಕ್ಕಾಗಿ ಇಂತಹ ಶಿಬಿರದ ಪ್ರಯೋಜನ ಜನತೆ ಪಡೆಯಬೇಕು ಎಂದರು.
ನಗರಸಭೆ ಮಾಜಿ ಸದಸ್ಯ ಹಾಗೂ ಗಂಜೀ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಗೌರವ ಕಾರ್ಯದರ್ಶಿ ನಿಂಗಪ್ಪ ಪಡಗದ ಮಾತನಾಡಿ, ಜಾತ್ರೆಗಳಲ್ಲಿ ಇಂತಹ ಆರೋಗ್ಯ ಚೈತನ್ಯ ಕಾರ್ಯಕ್ರಮ ನಡೆಸುವುದರಿಂದ ಎಲ್ಲರಿಗೂ ಅನುಕೂಲ ಎಂದರು.
ಗದಗ ಜಿಲ್ಲಾ ಎನ್‌ಐಎಂಎ ಅಧ್ಯಕ್ಷ ಡಾ. ಕಲ್ಲೇಶ ಮೂರಶಿಳ್ಳಿನ ಮಾತನಾಡಿ, ಜಾತ್ರೆಗಳು ಜನತೆಯನ್ನು ಜಾಗೃತಗೊಳಿಸುವ ಕಾರ್ಯ ಮಾಡಬೇಕು. ಸಮಾಜದ ಸ್ವಸ್ಥ ಮತ್ತು ಜನತೆಯ ಸ್ವಸ್ಥವನ್ನು ಕಾಪಾಡಬೇಕು. ಈ ಹಿನ್ನೆಲೆಯಲ್ಲಿ ಆರೋಗ್ಯ ಉಚಿತ ತಪಾಸಣೆ ಮತ್ತು ಔಷಧ ಉಚಿತ ವಿತರಣಾ ಶಿಬಿರ ಸ್ವಾಗತಾರ್ಹ ಎಂದರು.
ಪ್ರಕಾಶಕ ಬಸವರಾಜ ಶಾಬಾದಿಮಠ ಕಾರ್ಯಕ್ರಮ ಉದ್ಘಾಟಿಸಿದರು. ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಾ ವರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಎಸ್.ಎಫ್. ವರವಿ, ಡಾ. ಜಗದೀಶ ಶಿರೋಳ, ಶ್ರೀಧರ ಕುರಡಗಿ, ಡಾ. ಪ್ರದೀಪ ಉಗಲಾಟದ, ಡಾ. ಪ್ರಭಾ ದೇಸಾಯಿ, ಗಂಜೀ ಬಸವೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಉಳವಪ್ಪ ಹೊಂಬಳ, ಜಾತ್ರಾ ಸಮಿತಿಯ ಅಧ್ಯಕ್ಷ ಬಸಯ್ಯ ಹಿರೇಮಠ, ಈರಣ್ಣ ಮರಿಗೌಡ್ರ, ಕವಿತಾ ದಂಡಿನ, ಆಶಾ ಹುಕ್ಕೇರಿ, ಸಂಧ್ಯಾ ಕೋಟಿ, ಲಲಿತಾ ಇಂಗಳಳ್ಳಿ, ಸುಮಾ ಪಾಟೀಲ, ನಗರಸಭೆ ಸದಸ್ಯೆ ಶಿವಲೀಲಾ ಅಕ್ಕಿ, ಶಾಂತಾ ಮುಂದಿನಮನಿ, ವಿದ್ಯಾ ಸೂಡಿಶೆಟ್ಟರ, ಸವಿತಾ ಪಾಟೀಲ, ಎಫ್.ವಿ. ಮರಿಗೌಡ್ರ, ಮಾರ್ತಾಂಡಪ್ಪ ಹಾದಿಮನಿ, ನಿರಂಜನ ಮಾಯಾಚಾರ, ಸಿದ್ದು ಸಾಲಿಮಠ, ಈರಣ್ಣ ಗಡಗಿಶೆಟ್ಟರ, ಸಿದ್ದು ಉಮಚಗಿ, ಶಂಕರ ಕರಿಬಿಷ್ಠಿ, ಕುಮಾರ ವಿಭೂತಿಮಠ, ರೇವಯ್ಯ ಹಿರೇಮಠ, ಮಂಜುನಾಥ ಲಕ್ಕುಂಡಿ, ಪ್ರಭು ಕಲಬಂಡಿ, ಲಿಂಗರಾಜ ಕೆಂಬಾವಿಮಠ, ಉಮೇಶ ಮುಳ್ಳಾಳ, ಗುರುಶಾಂತ ವಸ್ತ್ರದ, ಪ್ರಶಾಂತ ನರೇಗಲ್, ಸಿದ್ದು ಗಾಣಿಗೇರ ಹಾಗೂ ಟ್ರಸ್ಟ್ ಕಮಿಟಿ ಮತ್ತು ಜಾತ್ರಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗದಗ ಲೈಫ್‌ಲೈನ್ ಡೈಗ್ನೋಸ್ಟಿಕ್ ಲ್ಯಾಬರೋಟರಿಯ ಜಿ.ಎಂ. ಶೇಖ ಮತ್ತು ಸಿಬ್ಬಂದಿಯಿಂದ ರಕ್ತದ ಉಚಿತ ತಪಾಸಣೆ ಜರುಗಿತು. ಜಿ.ಬಿ. ಹಾವಣಗಿ ನಿರೂಪಿಸಿದರು. ಜಿ.ಕೆ. ವಸ್ತ್ರದ ವಂದಿಸಿದರು.
ಮನುಷ್ಯನಿಗೆ ಆರೋಗ್ಯವೇ ಭಾಗ್ಯ, ನಾವು ಆರೋಗ್ಯ ಕಾಯ್ದುಕೊಳ್ಳಲು ಆಗಾಗ ತಜ್ಞ ವೈದ್ಯರಿಂದ ಸಲಹೆ ಪಡೆಯುವುದು ಅವಶ್ಯ. ದುಬಾರಿ ವೆಚ್ಚದ ಔಷಧೋಪಚಾರಗಳು ಸಾಮಾನ್ಯ ಜನರಿಗೆ ತಲುಪುತ್ತಿಲ್ಲ. ಅದಕ್ಕಾಗಿ ಇಂತಹ ಶಿಬಿರದ ಪ್ರಯೋಜನ ಪಡೆಯಬೇಕು.
-ಡಾ. ಎಸ್.ಆರ್. ಹಿರೇಮಠ,
ಸುಶ್ರುತ ಸೇವಾ ಸಂಸ್ಥೆಯ ಸಂಸ್ಥಾಪಕ