ರಕ್ತದಾನ ಶಿಬಿರ ನಡೆಸಿ: ರಾಮನಕೊಪ್ಪ
ಗದಗ: ಹಿರಿಯ ಹಾಗೂ ಪ್ರಗತಿಪರ ರೈತರಿಗೆ ಸಮಾಜಸೇವೆ ಮಾಡಿರುವ ಎಲ್ಲ ಗಣ್ಯರಿಗೆ ಸನ್ಮಾನ, ಆರೋಗ್ಯ ಉಚಿತ ತಪಾಸಣೆ, ರಕ್ತದಾನ ಶಿಬಿರ, ರಕ್ತ ಉಚಿತ ತಪಾಸಣೆ ಇಂತಹ ಕಾರ್ಯಕ್ರಮ ಹಾಕಿಕೊಂಡು ವಾರ್ಷಿಕೋತ್ಸವ ಆಚರಿಸಿದಲ್ಲಿ ಅರ್ಥಪೂರ್ಣವಾಗಿರುತ್ತದೆ ಎಂದು ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ಜಿಲ್ಲಾಧ್ಯಕ್ಷ ಶಿವಕುಮಾರ ರಾಮನಕೊಪ್ಪ ಹೇಳಿದರು.
ಅವರು ಈಚೆಗೆ ವೇದಿಕೆಯ 4ನೇ ವಾರ್ಷಿಕೋತ್ಸವ ಹಾಗೂ ವೇದಿಕೆಗೆ ಹೊಸ ಸದಸ್ಯರನ್ನು ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗದುಗಿನ ಮೂಲ ಸೌಕರ್ಯಗಳು ಪ್ರಗತಿಪರ ಕಾರ್ಯಗಳು ಬೇಗನೆ ಆಗದಿದ್ದಲ್ಲಿ ಅದಕ್ಕೆ ಒತ್ತಾಯಿಸಿ ಹೋರಾಟ ನಡೆಸಬೇಕು ಎಂದರು.
ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ರಾಜ್ಯ ಕಾರ್ಯಾಧ್ಯಕ್ಷ ಪಿ.ಸುಬ್ರಹ್ಮಣ್ಯಂ ರೆಡ್ಡಿ ಮಾತನಾಡಿ, ಅನ್ಯಾಯದ ವಿರುದ್ಧ ಸದಾಕಾಲ ನಮ್ಮ ವೇದಿಕೆ ಹೋರಾಟ ಮಾಡುತ್ತ ಬಂದಿದೆ. ಜನರ ಆಶೋತ್ತರಗಳಿಗೆ ಕೂಡಲೇ ಸ್ಪಂದಿಸಿ ಪರಿಹರಿಸುವ ಕಾರ್ಯವನ್ನು ಸಂಘಟನೆಯ ಪದಾಧಿಕಾರಿಗಳು ಹಮ್ಮಿಕೊಳ್ಳುತ್ತಿರುವುದು ಅಭಿನಂದನಾರ್ಹ. ಇದೇ ರೀತಿ ಇನ್ನು ಹೆಚ್ಚಿನ ಕಾರ್ಯಗಳನ್ನು ಕೈಗೊಂಡು ಸಮಾಜವನ್ನು ಪರಿವರ್ತಿಸುವ ಕಾರ್ಯಕ್ಕೆ ಸಂಘಟನೆಯ ಮುಖಂಡರು ಸನ್ನದ್ಧಗೊಳ್ಳುವಂತೆ ಕರೆ ನೀಡಿದರು.
ರಾಜ್ಯ ಯುವ ರೈತ ಮೋರ್ಚಾದ ಅಧ್ಯಕ್ಷ ಮನೋಜ ಮೆಹತಾ, ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಎಸ್.ಎಸ್. ರಡ್ಡೇರ, ಆರ್.ಕೆ. ಕೆಂಚಪ್ಪನವರ, ಅಕ್ಬರಬೇಗ್, ಅನೀಲ ಹಾವನೂರ, ಈಶಣ್ಣ ದಿನ್ನಿ, ಉಮೇಶ ಭೂಸನೂರಮಠ, ಉಮೇಶ ಕೋನರಡ್ಡಿ, ರೇಣುಕಾ ಸುಣಗಾರ, ಶಕುಂತಲಾ ಕೊಂಡಾಬಿಂಗಿ, ಜೇಸುದಾಸ, ಷಣ್ಮುಖ ಸುಲಾಖೆ ಸೇರಿದಂತೆ ವೇದಿಕೆಯ ಸದಸ್ಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಐ. ಮುಳಗುಂದ ಸ್ವಾಗತಿಸಿ, ವಂದಿಸಿದರು.
ಇಂದು ಶಿವಾಜಿ ಜಯಂತಿ
ಗಜೇಂದ್ರಗಡ: ಸ್ಥಳೀಯ ಶಿವಾಜಿ ಪೇಟೆ ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್, ಮಾರುತೇಶ್ವರ ಜೀರ್ಣೋದ್ಧಾರ ಸಮಿತಿ, ಮರಾಠ ಸಮಾಜ ಶಿವಾಜಿ ಪೇಟೆ, ಮಾರುತಿ ತರುಣ ಸಂಘ, ಛತ್ರಪತಿ ಶಿವಾಜಿ ಯುವಕ ಮಂಡಳ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 387ನೇ ಜಯಂತ್ಯುತ್ಸವವು ಮೇ 1ರಂದು ಬೆಳಗ್ಗೆ 8.30ಕ್ಕೆ ಜರುಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಾಪಸಿಂಹ ಭುಜಂಗರಾವ್ ಘೋರ್ಪಡೆ ವಹಿಸುವರು. ಕೃಷ್ಣಾಜಿರಾವ್ ಸೂರ್ಯವಂಶಿ ಧ್ವಜಾರೋಹಣ ನೆರವೇರಿಸುವರು. 9ಕ್ಕೆ ಮಹಿಳೆಯರು ಶಿವಾಜಿ ಮಹಾರಾಜರ ತೊಟ್ಟಿಲೋತ್ಸವ ನೆರವೇರಿಸುವರು. 9.30ಕ್ಕೆ ಛತ್ರಪತಿ ಶಿವಾಜಿ ವೃತ್ತದಲ್ಲಿ ನಡೆಯುವ ಸಮಾರಂಭದ ಸಾನ್ನಿಧ್ಯವನ್ನು ಮರಾಠ ಸಮಾಜದ ಧರ್ಮಗುರು ಶಂಕರಗಿರಿ ಗೋಸಾವಿಮಠ ವಹಿಸುವರು. ಪುರಸಭೆ ವಿರೋಧ ಪಕ್ಷ ನಾಯಕ ಶಿವರಾಜ ಘೋರ್ಪಡೆ ಅಧ್ಯಕ್ಷತೆ ವಹಿಸುವರು. ಶಾಸಕ ಜಿ.ಎಸ್. ಪಾಟೀಲ, ಮಾಜಿ ಸಚಿವ ಕಳಕಪ್ಪ ಬಂಡಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಸ್.ಟಿ. ಭೈರಪ್ಪನವರ, ಪುರಸಭೆ ಉಪಾಧ್ಯಕ್ಷೆ ಅಕ್ಕಮ್ಮಾ ಜಾನಾಯಿ, ಸದಸ್ಯ ಎಂ.ಎಸ್. ಹಡಪದ, ಡಿ.ಕೆ. ಛಾವಣಿ ಮುಂತಾದವರು ಪಾಲ್ಗೊಳ್ಳುವರು. ಇದೇ ಸಂದರ್ಭ ಹಾವೇರಿ ವೈದ್ಯಾಧಿಕಾರಿ ಕೃಷ್ಣಾಜಿ ದುಮ್ಮಾಳ, ಪುರಸಭೆ ಉಪಾಧ್ಯಕ್ಷೆ ಅಕ್ಕಮ್ಮಾ ಜಾನಾಯಿ ಅವರನ್ನು ಸನ್ಮಾನಿಸಲಾಗುವುದು. ತರುಣ ಸಂಘದ ಅಧ್ಯಕ್ಷ ಪರಶುರಾಮ ಕಲ್ಗುಡಿ, ಕಾರ್ಯಕಾರಿ ಮಂಡಳಿ ಅಧ್ಯಕ್ಷ ಶೇಖಪ್ಪ ರಾಮಜಿ, ಉತ್ಸವ ಕಮಿಟಿ ಅಧ್ಯಕ್ಷ ಶಿವಾಜಿ ಹಾಲಕೇರಿ ಪಾಲ್ಗೊಳ್ಳುವರು, ಮೇ 11ರಂದು ಸಾಮೂಹಿಕ ವಿವಾಹ ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.