ಚೆಕ್ ವಿತರಣೆಗೆ ಆಗ್ರಹಿಸಿ ಮುತ್ತಿಗೆ
ಶಿರಹಟ್ಟಿ: ಶಿರಹಟ್ಟಿ ಪಟ್ಟಣ ಪಂಚಾಯಿತಿಗೆ 2012-13ನೇ ಸಾಲಿನಲ್ಲಿ ವಾಜಪೇಯಿ ನಗರ ವಸತಿ ಯೋಜನೆಯಡಿ 200 ಮನೆಗಳು ಮಂಜೂರಾಗಿದ್ದು, ಇವುಗಳಲ್ಲಿ 140 ಮನೆಗಳ ಫಲಾನುಭವಿಗಳಿಗೆ ಮೊದಲನೆ ಮತ್ತು ಎರಡನೇ ಕಂತಿನ ಚೆಕ್ ನೀಡಿದ್ದು, ಉಳಿದ ಹಣದ ಚೆಕ್ ವಿತರಣೆ ಮಾಡುವಂತೆ ಆಗ್ರಹಿಸಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರಿಗೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಫಲಾನುಭವಿಗಳಾದ ದೇವಪ್ಪ ಬಟ್ಟೂರ, ಬಸವರಾಜ ಕನ್ಯಾಳ ಮಾತನಾಡಿ, ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಸ್ಥಳ ಪರಿಶೀಲನೆ ಮಾಡಿ ಸರ್ಕಾರದ ಮಾರ್ಗಸೂಚಿ ಹಾಗೂ ಮಾನದಂಡಗಳನ್ನು ಪರಿಗಣಿಸಿ ಮನೆ ಕಟ್ಟಿಕೊಳ್ಳುತ್ತಿರುವ ನಿರ್ಗತಿಕ ಫಲಾನುಭವಿಗಳನ್ನು ಗುರುತಿಸಿಯಾದರೂ ಚೆಕ್ ವಿತರಣೆಗೆ ಮುಂದಾಗಬೇಕು ಎಂದರು. ಈ ಕುರಿತು ಶಾಸಕರು ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳೊಂದಿಗೆ ಮಾತನಾಡಿ, ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ನಂತರ ಶಾಸಕ ರಾಮಕೃಷ್ಣ ದೊಡ್ಡಮನಿ ಪಟ್ಟಣ ಪಂಚಾಯಿತಿ ಸಿಬ್ಬಂದಿಯಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡರು. ನಂತರ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ಯೋಜನಾ ನಿರ್ದೇಶಕರಿಗೆ ದೂರವಾಣಿ ಮೂಲಕ ಮಾತನಾಡಿದ ಶಾಸಕರು ಫಲಾನುಭವಿಗಳಿಗೆ ಚೆಕ್ ವಿತರಣೆಯಲ್ಲಿ ಬಹಳ ವಿಳಂಬವಾಗಿದ್ದು, ಆಶ್ರಯ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿಯಿಂದ ಸಮಗ್ರ ಮಾಹಿತಿ ಪಡೆದುಕೊಂಡು, ಅರ್ಹತೆ ಇಲ್ಲದವರನ್ನು ಬಿಟ್ಟು ಅರ್ಹ ಫಲಾನುಭವಿಗಳ ಪಟ್ಟಿ ಪಡೆದು ತುರ್ತಾಗಿ ಚೆಕ್ ವಿತರಣೆಗೆ ಸೂಚನೆ ನೀಡಬೇಕು ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಮುಖಂಡ ಯು.ಎನ್. ಹೊಳಲಾಪುರ, ಪಪಂ ಸದಸ್ಯ ಜೆ.ಆರ್. ಕುಲಕರ್ಣಿ, ಸಂತೋಷ ಕುರಿ, ಬುಡನಶ್ಯಾ ಮಕಾನದಾರ, ಗ್ರಾಪಂ ಸದಸ್ಯ ಫಕೀರೇಶ ಮ್ಯಾಟಣ್ಣವರ, ಮಂಜುನಾಥ ಘಂಟಿ ಹಾಗೂ ನೂರಾರು ಫಲಾನುಭವಿಗಳು ಇದ್ದರು.