ಬೆಳಗಾವಿ ಅಧಿವೇಶನದಲ್ಲಿ ಪದವೀಧರರ ಸಮಸ್ಯೆ ಪ್ರಸ್ತಾಪ
ಮುಂಡರಗಿ: ನಿರುದ್ಯೋಗಿ ಪದವೀಧರರ ಸಮಸ್ಯೆ ಕುರಿತು ಬೆಳಗಾವಿಯಲ್ಲಿ ಜರುಗುವ ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡುವುದಾಗಿ ವಿಧಾನ ಪರಿಷತ್ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಹೇಳಿದರು.
ಅವರು ಶುಕ್ರವಾರ ಸಂಜೆ ಮುಂಡರಗಿ ಹಾವಿನಾಳ ಅವರ ನಿವಾಸದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಸಭೆ ನಡೆಸಿ ಮಾತನಾಡಿ, ಶೀಘ್ರದಲ್ಲಿ ಉದ್ಯೋಗ ಮೇಳ ಮಾಡುವ ಕುರಿತು ಚಿಂತನೆ ನಡೆಸಿರುವುದಾಗಿ ತಿಳಿಸಿದರು. ಈಗಾಗಲೇ ವಿಧಾನ ಮಂಡಲದ ಅಧಿವೇಶನದಲ್ಲಿ ಶಿಕ್ಷಣ ಇಲಾಖೆಗೆ ಸಂಬಂಧ ಪಟ್ಟಂತೆ ಪ್ರಶ್ನೆಗಳನ್ನು ಕೇಳಿ ಶಿಕ್ಷಣ ಇಲಾಖೆಗಳಲ್ಲಿನ ಲೋಪದೋಷಗಳು ಹಾಗೂ ಹೆಚ್ಚುವರಿ ಶಿಕ್ಷಕರ ಸಮಸ್ಯೆ, ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜುಗಳ ಶಿಕ್ಷಕರ ನೇಮಕಾತಿಯ ಕುರಿತು ಮಾತನಾಡಿದ್ದೇನೆ. ಜಿಲ್ಲೆಯ ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡದ ಕುರಿತು ಸದನದಲ್ಲಿ ಸಮಗ್ರವಾಗಿ ಚರ್ಚಿಸಿ ಇಲ್ಲಿನ ಔಷಧಿ ಸಸ್ಯ ಹಾಗೂ ಜೀವವೈವಿಧ್ಯ ಕುರಿತು ಮಾತನಾಡಿರುವೆ. ಈ ಹಿಂದಿನ 50 ವರ್ಷದ ಕಪ್ಪತ್ತಗುಡ್ಡಕ್ಕೂ ಹಾಗೂ ಈಗಿರುವ ಕಪ್ಪತ್ತಗುಡ್ಡದ ಪರಿಸ್ಥಿತಿಯ ಕುರಿತು ಸಮಗ್ರವಾಗಿ ಚರ್ಚಿಸಿರುವೆ. ನನ್ನ ಚರ್ಚೆಗೆ ಸ್ಪಂದಿಸಿ ಅರಣ್ಯ ಇಲಾಖೆ ಸಚಿವರೆ ಹೆಚ್ಚು ಮುತುವರ್ಜಿ ವಹಿಸಿ ಔಷಧಿ ಸಸ್ಯವಿರುವ ಭಾಗವನ್ನು ಗುರುತಿಸಿ, ಸರ್ವೆ ಮಾಡಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೇ ಒಂದು ಬಾರಿ ಸಚಿವರೆ ಖುದ್ದಾಗಿ ಕಪ್ಪತ್ತಗುಡ್ಡಕ್ಕೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎಂದರು. ಇದೇ ತಿಂಗಳಿನಲ್ಲಿ ಗದಗ ಹಾಗೂ ಧಾರವಾಡಗಳಲ್ಲಿ ತಮ್ಮ ಕಾರ್ಯಾಲಯಗಳನ್ನು ಪ್ರಾರಂಭಿಸಲಿದ್ದು, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಕರಬಸಪ್ಪ ಹಂಚಿನಾಳ, ದೇವಪ್ಪ ಇಟಗಿ, ಸಸಿಮಠ, ಎಸ್.ಬಿ. ಹಿರೇಮಠ, ಮಂಜುನಾಥ ಮುಧೋಳ, ಎ.ಐ. ಮಾರನಬಸರಿ ಪದವೀಧರರ ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರ ಒದಗಿಸುವಂತೆ ಮಾತನಾಡಿದರು. ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಅಧ್ಯಕ್ಷತೆ ವಹಿಸಿದ್ದರು.