ಇಂದು ಬೆಳ್ಳಿ ರಥೋತ್ಸವ
ನರೇಗಲ್ಲ: ಸಮೀಪದ ಹಾಲಕೆರೆ ಗ್ರಾಮದಲ್ಲಿ ಆ. 4ರಂದು 2ನೇ ಶ್ರಾವಣ ಸೋಮವಾರ ನಿಮಿತ್ತ ಸಂಜೆ 6ಕ್ಕೆ ಬೆಳ್ಳಿ ರಥೋತ್ಸವ ಜರುಗಲಿದೆ ಎಂದು ಹಾಲಕೆರೆ ಶ್ರೀಮಠದ ನಿಯೋಜಿತ ಉತ್ತರಾಧಿಕಾರಿ ಮುಪ್ಪಿನ ಬಸವಲಿಂಗ ದೇವರು ಹೇಳಿದರು.
ಅವರು ಶನಿವಾರ ಸಂಜೆ ಶ್ರೀಮಠದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.
ಶ್ರೀಮಠದ ಈಗಿನ ಪೀಠಾಧಿಪತಿ ಡಾ. ಅಭಿನವ ಅನ್ನದಾನ ಶ್ರೀಗಳು ದೂರದೃಷ್ಟಿಯುಳ್ಳವರು. ಸಮಾಜದಲ್ಲಿನ ಪುರುಷ ಮತ್ತು ಮಹಿಳೆಯರು ಸಮಾನರು ಎಂಬ ಭಾವದಲ್ಲಿ ಕೇವಲ ಪುರುಷರಷ್ಟೆ ರಥವನ್ನು ಎಳೆಯುತ್ತಿದ್ದಾರೆ. ಮಹಿಳೆಯರೂ ರಥವನ್ನು ಎಳೆಯುವಂತಾದರೆ ಅದೆಷ್ಟು ಚೆನ್ನ ಎಂದು ಯೋಚಿಸಿ ಅದಕ್ಕಾಗಿ ವಿಶೇಷವಾದ ಬೆಳ್ಳಿ ರಥವವನ್ನೇ ಮಾಡಿಸಿದರು. 165 ಕೆಜಿ ತೂಕದ ಈ ಬೆಳ್ಳಿ ತೇರನ್ನು ನಾಡಿನ ಸುಮಂಗಲೆಯರು ಸೇರಿ ಭಕ್ತಿಯಿಂದ ಎಳೆಯುವ ದೃಶ್ಯ ಅತ್ಯಂತ ಮನಮೋಹಕವಾಗಿರುತ್ತದೆ.
ಶ್ರಾವಣದ 2ನೇ ಸೋಮವಾರವೇ ಈ ತೇರನ್ನು ಮಹಿಳೆಯರಿಂದ ಎಳೆಸಬೇಕೆಂದು ನಿರ್ಧರಿಸಿ ಅದರಂತೆ ಕಳೆದ 7-8 ವರ್ಷಗಳಿಂದ ಈ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದಾರೆ. ಉಳಿದ ತೇರುಗಳಿಗೆ ಉತ್ತತ್ತಿ, ಹಣ್ಣು ಮುಂತಾದವುಗಳನ್ನು ಎಸೆಯುವಂತೆ ಇದಕ್ಕೆ ಕೇವಲ ಹೂವನ್ನು ಎಸೆಯುವ ಸಂಪ್ರದಾಯವನ್ನು ನಡೆಸಿಕೊಂಡು ಬರಲಾಗಿದೆ. ಈ ಬೆಳ್ಳಿ ರಥೋತ್ಸವ ನಾಡಿನ ಜನತೆಯ ಮನ ಗೆದ್ದುದಲ್ಲದೇ ಸುತ್ತಲಿನ ಎಲ್ಲ ಜಿಲ್ಲೆಗಳ ಮಹಿಳೆಯರೂ ಅತ್ಯಂತ ಉತ್ಸಾಹದಿಂದ ಪಾಲ್ಗೊಳ್ಳುವಂತೆ ಮಾಡಿದೆ ಎಂದರು.
ಇಲ್ಲಿನ ಕುಮಾರೇಶ್ವರ ಸೇವಾ ಸಮಿತಿ ವತಿಯಿಂದ ಆ. 4ರಂದು ಸಂಜೆ 4ಕ್ಕೆ ಡಾ. ಅಭಿನವ ಅನ್ನದಾನ ಶ್ರೀಗಳಿಗೆ ರಕ್ತ ತುಲಾಭಾರ ಸೇವೆ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶ್ರೀಗಳ ಆಪ್ತಕಾರ್ಯದರ್ಶಿ ಜಂಬಯ್ಯ, ಶಿಕ್ಷಕ ಸಂಗಮೇಶ ಹೂಲಗೇರಿ ಮುಂತಾದವರು ಉಪಸ್ಥಿತರಿದ್ದರು.