ಗೋವಿನಜೋಳ ಸಾಗಾಟ ವಿಳಂಬ: ನರಗುಂದ ರೈತರ ತೀವ್ರ ಆಕ್ರೋಶ
ನರಗುಂದ: ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ 8-10 ದಿನಗಳಾದರೂ ಸಾಗಾಣಿಕೆ ಮಾಡದೇ ರೈತರು ಗೋವಿನಜೋಳವನ್ನು ಕಾಯುವಂತಹ ಪರಿಸ್ಥಿತಿ ಎದುರಾಗಿರುವುದನ್ನು ಖಂಡಿಸಿ ಶನಿವಾರ ಪಟ್ಟಣದ ನೂತನ ಎಪಿಎಂಸಿ ಪ್ರಾಂಗಣದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಈ ಖರೀದಿ ಕೇಂದ್ರವನ್ನು ರೈತರಿಗೆ ಪ್ರಾರಂಭ ಮಾಡಿಲ್ಲ. ಇದು ಕೇವಲ ತಾಲೂಕಿನ ದೊಡ್ಡ ದಲಾಲಿ ಅಂಗಡಿಯವರಿಗೆ ಮಾತ್ರ ತೆರೆದಿದ್ದಾರೆ. ಕೇಂದ್ರದಲ್ಲಿ ಗೋವಿನ ಜೋಳ 8-10 ದಿನಗಳಿಂದ ತೂಕ ಮಾಡಿ ಇಡಲಾಗಿದೆ. ಇವುಗಳನ್ನು ರೈತರೇ ಹಗಲಿರುಳು ಕಾಯುವ ಪರಿಸ್ಥಿತಿ ಉದ್ಭವವಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಈ ಕುರಿತು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಈ ಭಾಗದ ರೈತರು ಕೂಡಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಳಕಪ್ಪ ತಹಸೀಲ್ದಾರ್, ಗುರುನಗೌಡ ಪಾಟೀಲ, ಉಮೇಶ ಕೀಲಿಕೈ, ರಮೇಶ ತಹಸೀಲ್ದಾರ್, ಕಲ್ಲಪ್ಪ ಮೊರಬದ, ನಾಗನೂರ, ಪುಂಡಲೀಕಪ್ಪ ಸೂರ್ಯವಂಶಿ, ಎಪಿಎಂಸಿ ಸದಸ್ಯ ಪರಶುರಾಮ ಜಂಬಗಿ, ಮಹೇಶ ಕೊಡನ್ನವರ ಉಪಸ್ಥಿತರಿದ್ದರು.