ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಾಡು, ನುಡಿ ಬಗ್ಗೆ ಅಭಿಮಾನವಿರಲಿ

Vishwanath S
Updated On : 2 Feb 2014, 12:06 pm

ಗದಗ: ಕನ್ನಡ ನಾಡಿನಲ್ಲಿ ಹುಟ್ಟಿದ ಎಲ್ಲರೂ ಮಾತೃಭಾಷೆಯಲ್ಲಿಯೇ ಶಿಕ್ಷಣ ಪಡೆದು ನಾಡು, ನುಡಿ, ಜಲಗಳ ಬಗ್ಗೆ ಅಭಿಮಾನ ಹೊಂದುವ ಅವಶ್ಯಕತೆ ಇದೆ ಎಂದು ಗದಗ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ವಿ. ರಾಜೇಂದ್ರ ಪ್ರಸಾದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಅವರು ನಗರದ ಮುಂಡರಗಿ ರಸ್ತೆಯಲ್ಲಿರುವ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಲಾದ ಶಾಲಾ ಸಾಹಿತ್ಯ ಸಿಂಚನ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯದಲ್ಲಿ ಅಪಾರವಾದ ಜ್ಞಾನ ಸಂಪತ್ತು ಅಡಕವಾಗಿದೆ. ಇಂದು ಕನ್ನಡ ಭಾಷೆಯ ಬಗ್ಗೆ ಇಂಗ್ಲಿಷ್ ವ್ಯಾಮೋಹದ ಜನರು ಕೀಳರಿಮೆಯನ್ನು ತಂದೊಡ್ಡುತ್ತಿರುವುದು ಆತಂಕದ ಸಂಗತಿಯಾಗಿದೆ.
ಮಾತೃಭಾಷೆಯ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಹಂತಗಳಲ್ಲಿಯೇ ಶಿಕ್ಷಕರು ಸ್ಪಷ್ಟವಾದ ತಿಳಿವಳಿಕೆ ನೀಡಿ ಜಾಗೃತಿ ಮೂಡಿಸಬೇಕು. ಇಂದು ಪಾಲಕರು ನಮ್ಮ ಮಕ್ಕಳು ಆಂಗ್ಲಮಾಧ್ಯಮ ಶಾಲೆಗಳಲ್ಲಿ ಅಧ್ಯಯನ ಮಾಡಿದರೆ ಒಮ್ಮಿಂದೊಮ್ಮೆಲೇ ಏನೋ ಆಗಿಬಿಡುತ್ತಾರೆಂಬ ಭ್ರಮೆಯಲ್ಲಿದ್ದಾರೆ. ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರ ಭಾಷಾಮಾಧ್ಯಮವನ್ನು ತಿಳಿದರೆ ಅವರೆಲ್ಲರೂ ಮಾತೃಭಾಷೆಯಲ್ಲಿ ಶಿಕ್ಷಣ ಪಡೆದವರಾಗಿದ್ದಾರೆಂದು ಅಭಿಪ್ರಾಯ ಪಟ್ಟರು.
ಅತಿಥಿಯಾಗಿ ಆಗಮಿಸಿದ್ದ ಲಯನ್ಸ್ ಶಿಕ್ಷಣ ಸಂಸ್ಥೆಯ ಚೇರ್‌ಮನ್ ಜೆ.ಡಿ. ಉತ್ತರಕರ ಮಾತನಾಡಿ, ನಮ್ಮದು ಆಂಗ್ಲ ಮಾಧ್ಯಮ ಶಾಲೆಯಾಗಿದ್ದರೂ ಮಾತೃಭಾಷೆಗಾಗಿ ಪ್ರೋತ್ಸಾಹ ನೀಡುತ್ತಿದ್ದೇವೆ. ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು 10ನೇ ತರಗತಿಯ ಪರೀಕ್ಷೆಯಲ್ಲಿ ಪ್ರತಿವರ್ಷ ನೂರಾ ಇಪ್ಪತ್ತೈದಕ್ಕೆ ನೂರಾ ಇಪ್ಪತ್ತೈದು ಅಂಕಗಳನ್ನು ಗಳಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಎಲ್ಲ ಚಟುವಟಿಕೆಗಳಿಗೂ ಸಂಸ್ಥೆ ಸಹಕಾರ ನೀಡುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿದರು. ವಿದ್ಯಾನಿಧಿ ಪ್ರಕಾಶನದ ಜಯದೇವ ಮೆಣಸಗಿ, ಸಂಸ್ಥೆಯ ಪ್ರಾ. ಹೇಮಂತ ದಳವಾಯಿ, ಆರ್.ಎಲ್.ಪೊಲೀಸ್‌ಪಾಟೀಲ, ಶರಣು ಗೋಗೇರಿ, ಡಾ. ಸಂಗಮೇಶ ತಮ್ಮನಗೌಡ್ರ, ಮಲ್ಲೇಶ ಡಿ.ಎಚ್, ಕಿಶೋರಬಾಬು ನಾಗರಕಟ್ಟಿ, ಶಶಿಕಾಂತ ಕೊರ್ಲಹಳ್ಳಿ ಎಸ್.ಎಸ್. ತಳ್ಳಿಹಾಳ, ಎಸ್.ಬಿ. ದೊಡ್ಡಣ್ಣವರ, ಬಸವರಾಜ ಮಡಿಕೇಶ್ವರ, ಈರಣ್ಣ ಕುರಿ, ಬಿ.ಜಿ. ಹಿರೇಮಠ, ಕವಿತಾ ದಂಡಿನ, ಪಿ.ಎಸ್. ನದಾಫ, ಜಿ.ಎಸ್. ಯತ್ನಟ್ಟಿ  ಉಪಸ್ಥಿತರಿದ್ದರು. ಪ್ರಾ. ಎಸ್.ಎಚ್. ದಳವಾಯಿ ಸ್ವಾಗತಿಸಿದರು. ಎನ್.ಎಂ. ಖ್ಯಾವಿ ನಿರೂಪಿಸಿದರು. ಕೆ.ಯು. ಹೂಲಿಕಂಠಿಮಠ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement