ಭಿಕ್ಷಾಟನೆಗಿಲ್ಲ ಬ್ರೇಕ್
ಕನ್ನಡಪ್ರಭ ವಾರ್ತೆ, ಗದಗ, ಫೆ. 1
ಶಿಕ್ಷಣ ಇಂದು ಹಕ್ಕಾಗಿದೆ. ಆದರೆ, ಜಿಲ್ಲೆಯ 5 ತಾಲೂಕುಗಳಲ್ಲಿ ಮಾತ್ರ ಅದಕ್ಕೆ ಯಾವುದೇ ಮಾನ್ಯತೆ ಎನ್ನುವುದು ಕಂಡು ಬರುತ್ತಿಲ್ಲ. ವಿವಿಧ ಪಟ್ಟಣಗಳು ಸೇರಿದಂತೆ ಹಲವೆಡೆ ನಿತ್ಯವೂ ಹಲವಾರು ಮಕ್ಕಳು ಭಿಕ್ಷಾಟನೆ. ದೇವರ ಹೊತ್ತುಕೊಂಡು ದೇವರ ಹೆಸರಿನಲ್ಲಿ ಭಿಕ್ಷೆ ಬೇಡುತ್ತಿರುವುದು ಸಾಮಾನ್ಯವಾಗಿದ್ದು, ಈ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ನೀಡದೇ ಇರುವುದರಿಂದ ಹಲವಾರು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.
ಶಿಕ್ಷಣ ನೀತಿ ಏನು ಹೇಳುತ್ತೆ
ಪ್ರತಿ ವರ್ಷ ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಕೋಟ್ಯಂತರ ವೆಚ್ಚ ಮಾಡುತ್ತದೆ. 6 ರಿಂದ 14 ವರ್ಷದ ಒಳಗಿನ ಎಲ್ಲ ಮಕ್ಕಳೂ ಶಿಕ್ಷಣ ಹೊಂದಬೇಕು ಎಂದು ಸಂವಿಧಾನವೇ ಒಪ್ಪಿಗೆ ಸೂಚಿಸಿದೆ. ಶಿಕ್ಷಣ ನೀಡಬೇಕು ಎಂಬುದು ಸರ್ಕಾರದ ಕಡ್ಡಾಯ ಕ್ರಮವಾಗಿದೆ. ಈ ಹಕ್ಕಿನಿಂದ ವಂಚಿತವಾಗಿರುವ ಮಕ್ಕಳು ಬೀದಿ ಬೀದಿ ಅಲಿಯುತ್ತ ಭಿಕ್ಷುಕರಾಗಿ ಇಲ್ಲವೇ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಇನ್ನೂ ಕೆಲವು ಮಕ್ಕಳು ಚಿಂದಿ ಆಯುತ್ತಿವೆ. ಈ ಮಕ್ಕಳ ಶಿಕ್ಷಣ ಹಕ್ಕನ್ನು ಕಸಿದವರಾರು? ಪರೋಕ್ಷವಾಗಿ ಇಲಾಖೆ ಹಾಗೂ ಪಾಲಕರ ನಿರ್ಲಕ್ಷ್ಯ ಎನ್ನುವುದು ತಿಳಿದು ಬರುವ ಸತ್ಯವಾಗಿದೆ.
ಗಮನ ನೀಡದ ಶಿಕ್ಷಣ ಇಲಾಖೆ
ಎಲ್ಲ ಮಕ್ಕಳಂತೆ ಆಡುತ್ತ ನಲಿಯುತ್ತ ಬಾಲ್ಯದ ಸವಿಯನ್ನು ಸವಿಯ ಬೇಕಾದ ಈ ಮಕ್ಕಳು ತಮ್ಮದಲ್ಲದ ತಪ್ಪಿಗೆ ಯಾಕೆ ಚಿತ್ರ ಹಿಂಸೆ ಅನುಭವಿಸಬೇಕು? ಇಂತಹ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯವನ್ನು ಮಾಡಬೇಕಾದ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಕೇವಲ ತಮ್ಮ ಶಾಲೆಯಲ್ಲಿ ದಾಖಲಾದ ಮಕ್ಕಳ ಶಾಲೆ ಬಿಟ್ಟರೆ ಮಾತ್ರ ಅವರನ್ನು ಮರಳಿ ಶಾಲೆಗೆ ಕರೆ ತರುವ ಯೋಜನೆಯನ್ನು ಮಾತ್ರ ಮಾಡಿ ಕೈತೊಳೆದುಕೊಂಡು ಬಿಟ್ಟರೆ ಮುಗಿಯಿತು ಎನ್ನುವ ಮನೋಭಾವನೆ ಬದಲಾಗಬೇಕು. ಆದರೆ ಪ್ರತಿವರ್ಷ ಅಂಗನವಾಡಿ ಕೇಂದ್ರದಲ್ಲಿ ದಾಖಲಾದ ಮಕ್ಕಳು ಮುಂದಿನ ವರ್ಷಗಳಲ್ಲಿ ಯಾವ ಪ್ರಾಥಮಿಕ ಶಾಲೆಗೆ ದಾಖಲಾಗುತ್ತಾರೆ ಹಾಗೂ ಆ ಮಕ್ಕಳ ಸ್ಥಿತಿ ಗತಿಯ ಬಗ್ಗೆ ಶಿಕ್ಷಣ ಇಲಾಖೆ ಕಾಳಜಿ ತೆಗೆದುಕೊಳ್ಳಬೇಕಾಗಿದೆ.
ಜಿಲ್ಲೆಯ ಬಹುತೇಕ ಪಟ್ಟಣಗಳಲ್ಲಿ ನಿತ್ಯವೂ ಚಿಂದಿ ಆಯುವ ಹಾಗೂ ಬಸ್ ನಿಲ್ದಾಣಗಳಲ್ಲಿ ಭಿಕ್ಷಾಟನೆ ಮಾಡುವ ಹಲವಾರು ಮಕ್ಕಳು ಕಾಣಸಿಗುತ್ತವೆ. ಸರ್ಕಾರ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಮಕ್ಕಳ ಹಾಜರಾತಿ ಕಡಿಮೆಯಾಗಬಾರದು ಎನ್ನುವ ಉದ್ದೇಶಕ್ಕಾಗಿ ಉಚಿತ ಪ್ರವೇಶ ನೀಡಿಕೆ, ಪಠ್ಯ ಪುಸ್ತಕ, ಸಮವಸ್ತ್ರ, ಶಿಷ್ಯವೇತನ ವಿತರಣೆ, ಮಧ್ಯಾಹ್ನದ ಬಿಸಿಯೂಟ, ಇತ್ತಿತ್ತಲಾಗಿ ಕ್ಷೀರಭಾಗ್ಯ ಯೋಜನೆ ಜಾರಿಗೆ ತಂದಿದೆ. ಆದರೆ, ಫಲಿತಾಂಶ ಮಾತ್ರ ಯಥಾರೀತಿಯಾಗಿ ಮುಂದುವರಿದಿದೆ. ಇದಕ್ಕೆ ಕೇವಲ ಶಿಕ್ಷಣ ಇಲಾಖೆ ಮಾತ್ರ ಹೊಣೆಯಾಗಿಲ್ಲ. ಮಕ್ಕಳ ಪಾಲಕರು ಕೂಡ ಕಾರಣೀಭೂತರು ಎನ್ನುವುದರಲ್ಲಿ ಎರಡು ಮಾತಿಲ್ಲ. ಬಡತನ, ಅನಕ್ಷರತೆ ಮೊದಲಾದವು ಪ್ರಮುಖ ಕಾರಣವಾಗಿವೆ.
ಇತರ ಇಲಾಖೆಗಳೂ ಗಮನ ನೀಡುತ್ತಿಲ್ಲ
ಶಿಕ್ಷಣ ಇಲಾಖೆಯ ಜತೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬಾಲ ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೂಡಾ ಈ ರೀತಿಯ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕಾದ ಅವಶ್ಯವಿದೆ. ಆದರೆ ಇಲಾಖೆಗಳಲ್ಲಿನ ಸಮನ್ವಯದ ಕೊರತೆಯಿಂದ ಇವರ ಮೇಲೆ ಅವರು, ಅವರ ಮೇಲೆ ಇವರು ದೂರುತ್ತಾ ತಮ್ಮ ಕರ್ತವ್ಯದಿಂದ ವಿಮುಖರಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಕೇಂದ್ರ ಸರ್ಕಾರ ಯುನೆಸೆಫ್ನಂತಹ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ದೇಶದ ಬಾಲ ಮಕ್ಕಳ ಶಿಕ್ಷಣಕ್ಕಾಗಿ ಕೋಟ್ಯಂತರ ಹಣವನ್ನು ನೀಡುತ್ತಿದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಇದು ಸಮರ್ಪಕವಾಗಿ ಜಾರಿಯಾಗಿಲ್ಲ.
-ಶಿವಕುಮಾರ ಕುಷ್ಟಗಿ