ಉತ್ಸವ ರಾಕ್ಗಾರ್ಡನ್ನಲ್ಲಿ ಕವಿಗೋಷ್ಠಿ
ಶಿಗ್ಗಾಂವಿ: ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ಗಾರ್ಡನ್ನಲ್ಲಿ ಸಂದರ್ಭ ಕಾವ್ಯದರಳಿಕಟ್ಟೆ ಎಂಬ ಒಂದು ಕವಿತೆ ಎರಡು ಮಾತು ಸ್ವರೂಪದ ವಿಶಿಷ್ಟ ಕವಿಗೋಷ್ಠಿ ನಡೆಯಿತು.
ಈ ಸಂದರ್ಭದಲ್ಲಿ ಯುವ ಕವಿ ಚಿದಾನಂದ ಸಾಲಿ ಮಾತನಾಡಿ, ಸಮುದ್ರದೆದುರು ಸಣ್ಣ ದಪ ಇಟ್ಟಿದ್ದು ನಿನ್ನ ತಪ್ಪು ಅದಕ್ಕೇನು ತಿಳಿಯುವುದು ಎದಿರುಗಿನ ಶಕ್ತಿಯ ಅಗಾಧತೆ ಹೀಗೆ ಮನುಷ್ಯ ಎಸಗುವ ತಪ್ಪಿನ ಅರಿವನ್ನು ತಮ್ಮ ಗಝಲ್ನಲ್ಲಿ ಹೇಳುವ ಮೂಲಕ ಗಮನ ಸೆಳೆದರು.
ಕವಿಯಿತ್ರಿ ವೇದಾರಾಣಿ ದಾಸನೂರ ತಮ್ಮ ಕಾವ್ಯದಲ್ಲಿ ಜನಪದ ಸೊಗಡು ಇಟ್ಟುಕೊಳ್ಳುವ ಮೂಲಕ ನೆರೆದ ಎಲ್ಲ ಕವಿ ಮನಸ್ಸುಗಳನ್ನು ಜನಪದಲೋಕಕ್ಕೆ ಕರೆದೊಯ್ದರು. ಪ್ಯಾಂಟಿನಂತಲ್ಲವೇ ಅಹಂಕಾರ ಬೇಡದ ವಿಶಾಲಭೂಮಿ ಬಳಸಿಕೊಂಡವರ ಭಾವಕೆ ಅವರವರ ಅಂತರಾಳಕೆ ಇರುವಲ್ಲಿ ಹೋಗುವಲ್ಲಿ ಸೀರೆ ಸಮಾಧಾನದ ಸಂಕೇತ ಎಂದು ಭಾವೋತ್ಕರ್ಷದ ಅಂತಿಮಗಳಿಗೆಗಳನ್ನು ತಮ್ಮ ಕವನದ ಸಾಲುಗಳಲ್ಲಿ ಮನದಟ್ಟಾಗಿ ಹೇಳಿದರು.
ಪ್ರಶಾಂತ ವಾತಾವರಣ, ಸ್ವಚ್ಛಂದ ಬೆಳಕು, ಮೊಬೈಲ್ ಸಂಪರ್ಕವಿಲ್ಲದೆ ಹೊರ ಜಗತ್ತು ದೂರಾದಂತಿತ್ತು. ಇಂತಹ ಸ್ವಚ್ಛಂದ ವಾತಾವರಣದಲ್ಲಿ ನಾಡಿನ ಮೂಲೆಮೂಲೆಯಿಂದ ಬಂದಿದ್ದ 55ಕ್ಕೂ ಹೆಚ್ಚು ಯುವ ಕವಿಗಳು ಇಂತಹ ಒಂದು ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಪ್ರಕಾಶ ದಾಸನೂರ, ರಾಜಹರ್ಷ ಸೊಲಬಕ್ಕನವರ, ಯುವ ಕವಿಗಳು, ಸಾಹಿತಿಗಳು, ಡಾ. ಚಂದ್ರಶೇಖರ ತಾಳ್ಯ ಮಾತನಾಡಿದರು. ಪ್ರೊ. ಧರಣೇಂದ್ರ ಕುರಕುರಿ, ಮೋಹನ ನಾಗಮ್ಮನವರ, ಸತೀಶ ಕುಲಕರ್ಣಿ, ಬಸು ಬೇವಿನಗಿಡದ, ರಾಜಹರ್ಷ ದಾಸನೂರ, ವಿಜಯಕಾಂತ ಪಾಟೀಲ, ಚನ್ನಣ್ಣ ಅಂಗಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ವೇದಾರಾಣಿ ಸ್ವಾಗತಿಸಿದರು. ಚೆನ್ನಪ್ಪ ಅಂಗಡಿ ನಿರೂಪಿಸಿದರು.