ಧರ್ಮಚಕ್ರ ಆರಾಧನೆಯಿಂದ ಉತ್ತಮ ಫಲ: ಮಹಾರಾಜ
ಹಾನಗಲ್ಲ: ಧರ್ಮದ ಆಚರಣೆಗಳು ಮಾನವನ ಸಂಪನ್ನ ಬದುಕಿಗೆ ಪ್ರೇರಕ ಶಕ್ತಿಗಳಾಗಿವೆ. ಪೂಜೆ, ಆರಾಧನೆಗಳು ಉತ್ತಮ ಗತಿ, ಸ್ಥಾನಮಾನ, ಸಮೃದ್ಧಿಗಳನ್ನು ದೊರಕಿಸಿಕೊಡುತ್ತವೆ ಎಂದು ಕ್ಷುಲ್ಲಕ ರತ್ನ ಸುಧರ್ಮಗುಪ್ತ ಮಹಾರಾಜರು ನುಡಿದರು.
ತಾಲೂಕಿನ ವೀರಾಪುರ ಗ್ರಾಮದಲ್ಲಿ ಜೈನ ಸಮಾಜ ಬಾಂಧವರು ಆಯೋಜಿಸಿರುವ ಬೃಹತ್ ಧರ್ಮಚಕ್ರ ಆರಾಧನಾ ಮಹೋತ್ಸವದ ವಿವಿಧ ಧಾರ್ಮಿಕ ಸಮಾರಂಭಗಳ ಸಾನ್ನಿಧ್ಯ ವಹಿಸಿ ಅವರು ಮಂಗಲ ಪ್ರವಚನ ನೀಡಿದರು. ಧರ್ಮಚಕ್ರ ಆರಾಧನೆಯು ಸಂಸಾರದ ದುಃಖಗಳನ್ನು ನಾಶಮಾಡಿ ಉತ್ತಮ ಜೀವನಕ್ಕೆ, ಸನ್ಮಾರ್ಗಕ್ಕೆ ದಾರಿದೀಪವಾಗುತ್ತದೆ. ಜೊತೆಗೆ ಸಕಾರಾತ್ಮಕ ಧರ್ಮಾಧಾರಿತ ಇಚ್ಛೆಗಳಿಗೆ ಉತ್ತಮ ಫಲಗಳು ದೊರೆಯುತ್ತವೆ. ಸ್ವಪರ ಆತ್ಮ ಶ್ರೇಯಸ್ಸಿಗೆ ಪೂರಕವಾಗಿ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಗಳು ಉಂಟಾಗುತ್ತವೆ. ಪುಣ್ಯಾವೃದ್ಧಿಯಲ್ಲಿ ಆತ್ಮಶ್ರೇಯಸ್ಸಿಗೂ, ಪರಮಾತ್ಮ ಪದಪ್ರಾಪ್ತಿಗೂ ಆತ್ಮಶಕ್ತಿಯಾಗುವ ಮಹೋನ್ನತ ಮಹಿಮೆಯನ್ನು ಧರ್ಮಚಕ್ರವು ಹೊಂದಿದೆ. ಧರ್ಮಚಕ್ರ ಆರಾಧನೆಯಿಂದ ಕರ್ಮಚಕ್ರಗಳು ಕರಗಿ ಪುಣ್ಯಚಕ್ರಗಳು ಲಭಿಸಿ ಭಾಗ್ಯಚಕ್ರಗಳಾಗಲಿವೆ ಎಂದು ನುಡಿದ ಅವರು, ಈ ಮೂಲಕ ಜಗದ ಜನಮನಗಳಿಗೂ ಶಾಂತಿ ಲಭಿಸಿ ಸಕಲ ಜೀವ ರಾಶಿಗಳಿಗೂ ಶ್ರೇಯಸ್ಸು ಉಂಟಾಗುತ್ತದೆ ಎಂದರು.
ಆರತಿ, ಭಜನೆ, ಭಕ್ತಿಗೀತೆ ಗಾಯನ, ನೃತ್ಯಗಳು ಹರ್ಷೋಲ್ಲಾಸ ಮೂಡಿಸಿದವು. ರಾತ್ರಿ ಪೂಜಾ ವ್ರತಿಕರು ಜೈನ ಆಗಮ ಗ್ರಂಥವನ್ನು ಹಿಡಿದು ಕುಳಿತಿದ್ದ ಆನೆ, ಕುದುರೆ ವಾದ್ಯ ಗೋಷ್ಠಿಯೊಂದಿಗಿನ ಆಕರ್ಷಕ ಭವ್ಯ ಮೆರವಣಿಗೆಯ ನಡೆಯಿತು. ಹೊಸದುರ್ಗದ ಜೈನ ಸಮಾಜದ ಅಧ್ಯಕ್ಷ ಇ.ವಿ.ಧನ್ಯಕುಮಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಮನೋಹರ ತಹಸೀಲ್ದಾರ್, ಮಾಜಿ ಸಚಿವ ಸಿ.ಎಂ. ಉದಾಸಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ನವಲಗುಂದದ ಸುರೇಖಾ ಬಸ್ತಿ, ಪದ್ಮಣ್ಣ ಹವಳಣ್ಣವರ, ಚಂದ್ರಪ್ಪ ನೇಮಣ್ಣವರ, ರವಿಕುಮಾರ ಬೆಲ್ಲದ, ಅಶೋಕ ಮರೆಮ್ಮನವರ್, ವಾಸಪ್ಪ ಪದ್ಮೋಜಿ, ಶಾಂತಪ್ಪ ಅಂಗಡಿ ಸೇರಿದಂತೆ ಇನ್ನಿತರರು ಇದ್ದರು.