ಪಡಿತರ ಖಾತರಿ ಯೋಜನೆಗೆ ಚಾಲನೆ
ಕನ್ನಡಪ್ರಭ ವಾರ್ತೆ, ಗದಗ, ಫೆ. 3
ಬಡವರಿಗೆ ಸಹಕಾರಿಯಾಗಲಿ ಎಂಬ ಸದುದ್ದೇಶದಿಂದ ರಾಜ್ಯ ಸರ್ಕಾರ ಫೆ. 1ರಿಂದ ಪಡಿತರ ಖಾತರಿ ಯೋಜನೆಯನ್ನು ರಾಜ್ಯಾದ್ಯಂತ ಪ್ರಾರಂಭಿಸಿದ್ದು, ಇನ್ನು ಮುಂದೆ ಪಡಿತರ ಕೇಂದ್ರಗಳು ತಿಂಗಳ 1ರಿಂದ 10ನೇ ದಿನಾಂಕದ ವರೆಗೆ ಪ್ರತಿದಿನ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಕಾರ್ಯನಿರ್ವಹಿಸಲಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಗ್ರಾಪಂ ಪ್ರಭಾರಿ ಅಧ್ಯಕ್ಷೆ ಶಾಂತವ್ವ ಹರ್ಲಾಪುರ ಹೇಳಿದರು.
ಅವರು ತಾಲೂಕಿನ ಕೋಟುಮಚಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ-1ರ ನ್ಯಾಯಬೆಲೆ ಅಂಗಡಿ 121ರಲ್ಲಿ ಶನಿವಾರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಡಿತರ ಖಾತರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರದ ಅನ್ನಭಾಗ್ಯ ಯೋಜನೆಯು ಇನ್ನು ಮುಂದೆ ಸಂಪೂರ್ಣವಾಗಿ ಖಾತ್ರಿಯಾಗಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಂಡು ಸರ್ಕಾರದ ಯೋಜನೆಯನ್ನು ಯಶಸ್ವಿಗೊಳ್ಳಬೇಕು ಎಂದರು.
ಗ್ರಾಪಂ ಸದಸ್ಯ ಪಾಲಾಕ್ಷಯ್ಯ ಬಳಿಗೇರಮಠ ಮಾತನಾಡಿ, ರಾಜ್ಯ ಸರ್ಕಾರದ ನಿರ್ದೇಶನದಂತೆ ಫೆ. 1ರಿಂದ ಪಡಿತರ ಖಾತರಿ ಯೋಜನೆ ಹೆಸರಿನಲ್ಲಿ ಅನುಷ್ಠಾನಗೊಂಡು ಜಿಲ್ಲೆಯಲ್ಲಿರುವ ಎಲ್ಲ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಧಾನ್ಯ ಅಕ್ಕಿ, ಗೋದಿ, ಸಕ್ಕರೆ ವಿತರಿಸಲಾಗುತ್ತಿರುವುದು ಸಂತಸ ತಂದಿದೆ. ಈ ಯೋಜನೆಯ ಅನ್ವಯ ನ್ಯಾಯಬೆಲೆ ಅಂಗಡಿಗಳು ತಿಂಗಳ 1ರಿಂದ 10ನೇ ತಾರೀಖಿನವರೆಗೆ ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಕಾರ್ಯನಿರ್ವಹಿಸುತ್ತವೆ. ಜಿಲ್ಲೆಯ ಪಡಿತರ ಚೀಟಿದಾರರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಸೂಚಿಸಿದರು.
ಗ್ರಾಪಂ ಸದಸ್ಯ ದೇವಪ್ಪ ಬಡಿಗೇರ, ಮುಡಿಯಮ್ಮ ಜಗ್ಗಲ, ಫಕೀರಪ್ಪ ಹಕ್ಕಿ, ಶೇಖಪ್ಪ ಗಾಣಿಗೇರ, ಸುರೇಶ ಶಿಂಗ್ಟಾಲಕೇರಿ, ರಾಮಪ್ಪ ಶಿಂಗ್ಟಾಲಕೇರಿ, ಶಿವಪ್ಪ ನೀರಲಗಿ, ವೀರಪ್ಪ ಭಜಂತ್ರಿ, ಸಕ್ರೆಟರಿ ವೈ.ಎಲ್. ಶಿಂಗ್ಟಾಲಕೇರಿ, ಬಸವರಾಜ ಆಡಿನ ಮುಂತಾದವರು ಉಪಸ್ಥಿತರಿದ್ದರು.