ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೋಣದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ

Mainashree
Updated On : 4 Feb 2014, 10:34 am

ಕನ್ನಡಪ್ರಭ ವಾರ್ತೆ, ರೋಣ, ಫೆ. 3
ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನ ಫೆ. 22 ಮತ್ತು 23ರಂದು 2 ದಿನಗಳ ಕಾಲ ರೋಣ ಪಟ್ಟಣದಲ್ಲಿ ನಡೆಯಲಿದ್ದು, ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಸಾಹಿತ್ಯ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಪಟ್ಟಣದ ಅಂದಾನಪ್ಪ ದೊಡ್ಡಮೇಟಿ ಸಭಾಭವನದಲ್ಲಿ ಸೋಮವಾರ ಗದಗ ಜಿಲ್ಲಾ 6ನೇ ಸಾಹಿತ್ಯ ಸಮ್ಮೇಳನ ಸಿದ್ಧತೆ ಕುರಿತು ಸಮ್ಮೇಳನದ ಸಲಹಾ ಸಮಿತಿ, ಸ್ವಾಗತ ಸಮಿತಿ, ನೌಕರ ಸಂಘ, ಕಸಾಪ ಆಜೀವ ಸದಸ್ಯರು, ಪದವಿ, ಪಪೂ ಕಾಲೇಜ್ ಪ್ರಾಚಾರ್ಯರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಿತಿಗೆ ಸ್ವಪ್ರೇರಣೆಯಿಂದ ಸೇರಿಕೊಳ್ಳಿ: ಸಮ್ಮೇಳನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫೆ. 22ರಂದು ಬೆಳಗ್ಗೆ 11ಕ್ಕೆ ಉದ್ಘಾಟಿಸುವರು. ಸಾಹಿತ್ಯ ಅಭಿಮಾನಿ, ಆಸಕ್ತರಿಗೆ ಸಾಹಿತ್ಯ ರಸದೌತನ ಉಣಬಡಿಸುವ ವೇದಿಕೆಯಾಗುವುದರ ಜತೆಗೆ ಜಿಲ್ಲೆ ಮತ್ತು ತಾಲೂಕಿನಲ್ಲಿನ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ಹಾಗೂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಮ್ಮೇಳನ ಒಂದು ಅಭೂತಪೂರ್ವ ವೇದಿಕೆಯಾಗಲಿದೆ. ಸಮ್ಮೇಳನವು ಅಚ್ಚುಕಟ್ಟಾಗಿ, ವಿಶಿಷ್ಟ ರೀತಿಯಲ್ಲಿ ಮತ್ತು ವ್ಯವಸ್ಥಿತವಾಗಿ ನಡೆಸುವ ದಿಶೆಯಲ್ಲಿ ಈಗಾಗಲೇ ಸ್ವಾಗತ ಸಮಿತಿ ಸೇರಿದಂತೆ ಹಣಕಾಸು, ಊಟ, ವಸತಿ, ಪ್ರಚಾರ ಸಮಿತಿ ಒಳಗೊಂಡು 28 ಉಪ ಸಮಿತಿ ರಚಿಸಲಾಗಿದೆ. ಈ ಮೂಲಕ ಅಗತ್ಯ ರೂಪರೇಷ ಮತ್ತು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸೇವಾ ಮನೋಭಾವನೆಯುಳ್ಳವರು ಸಮಿತಿಯಲ್ಲಿ ಸ್ವಪ್ರೇರಣೆಯಿಂದ ಸೇರಿಕೊಳ್ಳಬಹುದು. ಸಮ್ಮೇಳನ ಯಶಸ್ಸಿಗೆ ಪ್ರತಿಯೊಬ್ಬರ ಶ್ರಮ ಅಗತ್ಯವಾಗಿದೆ ಎಂದರು.
ವಿದ್ಯಾರ್ಥಿಗಳ ಸೇವೆ ಅಗತ್ಯ: ನಾಡಿನ ಭಾಷೆ, ಕಲೆ, ಸಂಸ್ಕೃತಿ, ಸಾಹಿತ್ಯ ಮುಂತಾದವುಗಳ ಮೇಲೆ ಬೆಳಕು ಚೆಲ್ಲುವ ದಿಶೆಯಲ್ಲಿ ಸಮ್ಮೇಳನ ವೈವಿಧ್ಯತೆಯಿಂದ ಕೂಡಿರುತ್ತದೆ. ಯುವ ಪೀಳಿಗೆಗೆ ನಾಡು, ನುಡಿ, ಸಂಸ್ಕೃತಿ ಕುರಿತು ಅರಿವು ಮೂಡಿಸುವ ಉದ್ದೇಶ ಸಮ್ಮೇಳನದ್ದಾಗಿದೆ. ವಿವಿಧ ಮಜಲುಗಳ ಕುರಿತು ನಾಡಿನ ಪ್ರಖ್ಯಾತ ವಿದ್ವಾಂಸರನ್ನು ಕರೆಸಿ ವಿಚಾರ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ, ನಾಡಿನ ಮತ್ತು ಸ್ಥಳೀಯ ಪ್ರಖ್ಯಾತ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಜಿಲ್ಲೆ ಮತ್ತು ತಾಲೂಕಿನ ಹಿರಿಯ ಮತ್ತು ಯುವ ಸಾಹಿತಿಗಳಿಗೆ ಆದ್ಯತೆ ನೀಡಲಾಗುವುದು. ಸಮ್ಮೇಳನದಲ್ಲಿ ಉಪ ಸಮಿತಿಯೊಂದಿಗೆ ತಾಲೂಕಿನಲ್ಲಿನ ಶಾಲಾ, ಕಾಲೇಜ್ಗಳಲ್ಲಿನ ಎನ್ಎಸ್ಎಸ್, ಎನ್ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ ಸೇವೆ ಅಗತ್ಯವಾಗಿದೆ ಎಂದರು.
ಎಲ್ಲರ ಶ್ರಮ, ಸಲಹೆ ಮುಖ್ಯ: ಸಮ್ಮೇಳನ ಸ್ವಾಗತ ಸಮಿತಿ ಸ್ವಾಗತಾಧ್ಯಕ್ಷ, ನರಗುಂದ ಶಾಸಕ ಬಿ.ಆರ್. ಯಾವಗಲ್ ಮಾತನಾಡಿ, ಜಿಲ್ಲಾ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳ್ಳಲು ಜಿಲ್ಲಾ ಮತ್ತು ತಾಲೂಕನಲ್ಲಿನ ವಿವಿಧ ಸಂಘ, ಸಂಸ್ಥೆಗಳು, ನೌಕರರು, ಬುದ್ಧಿಜೀವಿಗಳು, ಸಾಹಿತಿಗಳು, ಸಾಹಿತ್ಯ ಮತ್ತು ಕಲಾ ಆಸಕ್ತರು ಸೇರಿದಂತೆ ಪ್ರತಿಯೊಬ್ಬರ ಶ್ರಮ ಮತ್ತು ಸಲಹೆ ಅತಿ ಮುಖ್ಯವಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ, ಸಿ.ಜಿ. ಹುಡೇದಗಡ್ಡಿ, ನಿಂಗಪ್ಪ ಕೆಂಗಾರ, ನಿಂಗಪ್ಪ ಬೇವಿನಮರದ, ಎಸ್.ಎನ್. ಬಳ್ಳಾರಿ, ಡಿ.ಎಚ್. ತಳವಾರ, ರಾಜ್ಯ ಪ್ರಶಸ್ತಿ ಪುರಸ್ಕೃತ ಸಿದ್ದಲಿಂಗಯ್ಯ ಸೋಪ್ಪಿಹಿರೇಮಠ, ಪ್ರಮೀಳಾ ಕೋರಧ್ಯಾನಮಠ, ವೀರಣ್ಣ ಶೆಟ್ಟರ್, ಶರಣು ಗೋಗೇರಿ ಮಾತನಾಡಿದರು.
ತಾಪಂ ಅಧ್ಯಕ್ಷೆ ತಿಪ್ಪವ್ವ ದೊಡ್ಡಮನಿ, ಕಸಾಪ ತಾಲೂಕು ಅಧ್ಯಕ್ಷ ಶಿವರಾಜ ಗುರಿಕಾರ, ಪ್ರಭು ಮೇಟಿ, ಎ.ಓ. ಪಾಟೀಲ, ವಿ.ಆರ್. ಗುಡಿಸಾಗರ, ದಶರಥ ಗಾಣಿಗೇರ, ಡಾ. ಕೆ.ಬಿ. ಧನ್ನೂರ, ಶಂಕ್ರಣ್ಣ ಸಂಕಣ್ಣವರ, ಶಿವಪುತ್ರಪ್ಪ ದೊಡ್ಡಮನಿ, ಸಿಪಿಐ ಎಸ್.ಆರ್. ಬೆಂತೂರ, ಪಿಎಸ್ಐ ಡಿ.ಬಿ.ಪಾಟೀಲ, ಸಿ.ಎನ್. ಕೇಸರಿ, ಡಾ. ಹನುಮಂತಗೌಡ ಗೌಡರ ಮುಂತಾದವರು ಉಪಸ್ಥಿತರಿದ್ದರು. ವಿ.ಬಿ. ಸೋಮನಕಟ್ಟಿಮಠ ಸ್ವಾಗತಿಸಿದರು. ಕಳಕನ್ನವರ ನಿರೂಪಿಸಿದರು. ರಮಾಕಾಂತ ಕಮತಗಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement