ಹಣ ಕೊಟ್ಟು 14 ವರ್ಷವಾದರೂ ನಿವೇಶನವಿಲ್ಲ!
ಗದಗ: ಗದಗ- ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಹಲವು ಅಧ್ವಾನಗಳು ಸಾರ್ವಜನಿಕ ಚರ್ಚೆಗೆ ಕಾರಣವಾಗಿವೆ. ಈಗ ಮತ್ತೊಂದು ಪ್ರಕರಣ ಬಯಲಾಗಿದ್ದು, ಸಾರ್ವಜನಿಕರಿಗೆ ನಿವೇಶನ ನೀಡುವುದಾಗಿ ಹಣ ತುಂಬಿಸಿಕೊಂಡು ಹಲವು ವರ್ಷಗಳೇ ಕಳೆದಿದ್ದರೂ ಅವರಿಗೆ ನಿವೇಶನವನ್ನು ನೀಡಿಲ್ಲ, ಹಣವನ್ನು ಮರಳಿಸಿಲ್ಲ.
ಆಗಿದ್ದೇನು?: ಗದಗ ನಗರಾಭಿವೃದ್ಧಿ ಪ್ರಾಧಿಕಾರ 1999ರಲ್ಲಿ ಸಾರ್ವಜನಿಕರಿಗೆ ವಿವಿಧ ಮಾದರಿಯ ನಿವೇಶಗಳನ್ನು ನೀಡಲಾಗುವುದು ಎಂದು ಜಾಹೀರಾತನ್ನು ನೀಡಿತ್ತು. ಅದನ್ನು ಗಮನಿಸಿದ ಸಾರ್ವಜನಿಕರು ನಗರದಲ್ಲಿ ನಮಗೂ ನಿವೇಶನ ಸಿಗುತ್ತದೆ ಎನ್ನುವ ಆಶಾಭಾವನೆಯಿಂದ ಪ್ರಾಧಿಕಾರ ಸೂಚಿಸಿದ ಖಾತೆಗೆ ಹಣವನ್ನು ಭರಣಾ ಮಾಡಿದ್ದಾರೆ. ಅಂದು ಸಾರ್ವಜನಿಕರಿಗೆ ಹಣ ಭರಿಸಿದ ಬಗ್ಗೆ ರಸೀದಿ ನೀಡಿದ್ದನ್ನು ಹೊರತು ಪಡಿಸಿದಲ್ಲಿ ಇಂದಿಗೂ ಆ ಕಾರ್ಯದಲ್ಲಿ ಯಾವುದೇ ಪ್ರಗತಿಯಾಗಿಲ್ಲ.
4500 ಜನ ಹಣ ಕಟ್ಟಿದ್ದಾರೆ: ಅವಳಿ ನಗರದಲ್ಲಿ ನಿವೇಶನ ಸಿಗುತ್ತದೆ ಎನ್ನುವ ಉದ್ದೇಶದಿಂದ 1999ರಲ್ಲಿಯೇ 4500 ಜನರು (ಬೇರೆ ಬೇರೆ ಊರಿನವರೂ ಇದ್ದಾರೆ) 200 ರಿಂದ 2000 ಸಾವಿರ ರುಪಾಯಿವರೆಗೆ ಸೈಟ್ನ ಅಳತೆಗನುಗುಣವಾಗಿ ಶುಲ್ಕದ ರೂಪದಲ್ಲಿ 28 ಲಕ್ಷಕ್ಕೂ ಹೆಚ್ಚಿನ ಹಣವನ್ನು ಕಟ್ಟಿದ್ದಾರೆ. ಅಂದು ಹಣ ತುಂಬಿದವರಿಗೆ ಇಂದಿಗೂ ನಿವೇಶನವಾಗಲಿ, ಆ ವಿಷಯವಾಗಿ ಮುಂದುವರಿದಿರುವ ಪ್ರಕ್ರಿಯೆಯಾಗಲಿ ಯಾವುದು ನಡೆಯುತ್ತಿಲ್ಲ. ಅಂದು ಶುಲ್ಕ ಪಾವತಿಸಿದವರಿಗೆ ರಸೀದಿ ನೀಡಿದ್ದೇ ನಗರಾಭಿವೃದ್ಧಿ ಪ್ರಾಧಿಕಾರ ಮಾಡಿದ ದೊಡ್ಡ ಸಾಧನೆಯಾಗಿದೆ. ಹಣ ಕಟ್ಟಿ 14 ವರ್ಷವಾದ್ರೂ ಇದುವರೆಗೂ ಜನರಿಗೆ ತಾವು ಕಟ್ಟಿದ ಹಣವೂ ಇಲ್ಲ, ಇತ್ತ ನಿವೇಶನವೂ ಇಲ್ಲವಾಗಿದೆ.
ಅವ್ಯವಸ್ಥೆಯ ಆಗರ: ಗದಗ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಯಾವುದೂ ಸುಸೂತ್ರವಾಗಿಲ್ಲ. ಆಯುಕ್ತರು ಬರ್ತಾರೆ, ಹೋಗ್ತಾರೆ, ಯಾರೂ ಕಾಯಂ ಆಗಿ ನಿಲ್ಲುತ್ತಿಲ್ಲ. ಇನ್ನು ಸಿಬ್ಬಂದಿಯೂ ಇಲ್ಲ, ಇದರಿಂದಾಗಿ ಕೆಲಸಗಳು ಸರಿಯಾಗಿ ನಡೆಯುತ್ತಿಲ್ಲ. ಇನ್ನು ಪ್ರಾಧಿಕಾರ ಇರೋದ್ರಲ್ಲೇ ಕೆಲಸವನ್ನು ಸರಿಯಾಗಿ ನಡೆಸುತ್ತಿದೆಯೇ ಎಂದ್ರೆ ಅದೂ ಕೂಡಾ ಸರಿಯಾಗಿ ನಡೆಯುತ್ತಿಲ್ಲ. ಪ್ರಾಧಿಕಾರದ ಬಳಿ ಹಣವೇ ಇಲ್ಲ ಎಂದ ಮೇಲೆ ನಮಗೆಲ್ಲಿ ಸೈಟು ಎನ್ನೋ ಅನುಮಾನ ಜನರಲ್ಲಿ ಕಾಡುತ್ತಿದೆ. ಈ ಕುರಿತು ಪ್ರಾಧಿಕಾರದ ಕಚೇರಿಗೆ ಅಲೆದು ಸುಸ್ತಾಗಿದ್ದಾರೆ.
ಶಿವಕುಮಾರ ಕುಷ್ಟಗಿ