ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಉತ್ತಮ ಆರೋಗ್ಯಕ್ಕೆ ಆಯುರ್ವೇದ ಪದ್ಧತಿ ಸಹಕಾರಿ

Lingaraj Badiger
Updated On : 6 Feb 2014, 1:46 am

ಗದಗ: ಇಂದಿನ ಯಾಂತ್ರಿಕ ಜೀವನದಲ್ಲಿ ಪ್ರತಿಯೊಬ್ಬರೂ ಒತ್ತಡದ ಬದುಕನ್ನು ಸಾಗಿಸುವಂತಾಗಿದೆ. ಇದರಿಂದಾಗಿ ಹತ್ತು ಹಲವು ಕಾಯಿಲೆಗಳು ಮನುಷ್ಯರನ್ನು ಆಕ್ರಮಿಸುತ್ತಿವೆ. ಮನುಷ್ಯರು ಆರೋಗ್ಯದಿಂದಿರಲು ಆಯುರ್ವೇದ ಪದ್ಧತಿ ಮೊರೆ ಹೋಗುವುದು ಅನಿವಾರ್ವವಿದೆ ಎಂದು ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನರ ಹೇಳಿದರು.
ಅವರು ಮಂಗಳವಾರ ಸಂಜೆ ಇಲ್ಲಿನ ಹೆಲ್ತ್‌ಕ್ಯಾಂಪ್‌ನಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆ ಎದುರಿನ ಸೇಂಟ್ ಜಾನ್ ಶಾಲೆಯ ಆವರಣದಲ್ಲಿ ಆಯುಷ್ ಇಲಾಖೆ, ಜಿಪಂ, ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ ಹಾಗೂ ಅನಂತರಾವ್ ಬೀಳಗಿ ಸ್ಮಾರಕ ನಿಸರ್ಗ ಆಸ್ಪತ್ರೆ ಶಿರಸಿ ಇವುಗಳ ಆಶ್ರಯದಲ್ಲಿ ಆರಂಭವಾದ 3 ದಿನಗಳ ಜಿಲ್ಲಾ ಮಟ್ಟದ ಆಯುಷ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವೈದ್ಯಕೀಯ ಕ್ಷೇತ್ರದಲ್ಲಿ ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿ ಚಿಕಿತ್ಸೆಯಾಗಿದ್ದು, ಇದು ಸಮಾಜದ ಎಲ್ಲ ವರ್ಗದ ಜನರಿಗೂ ಕೈಗೆಟುಕುವ ಚಿಕಿತ್ಸೆಯಾಗಿದೆ. ಜನಸಾಮಾನ್ಯರ ಆರೋಗ್ಯದ ವೃದ್ಧಿಯ ಬಗ್ಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಈ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಶಿರಸಿಯ ನಿಸರ್ಗ ಟ್ರಸ್ಟ್‌ನ ಮುಖ್ಯಸ್ಥ ಡಾ. ವೆಂಕಟರಮಣ ಹೆಗಡೆ ಮಾತನಾಡಿ, ಹೃದಯ ಕಾಯಿಲೆ ಹಾಗೂ ಮೆದುಳು ತೊಂದರೆಯಿಂದಾಗಿ ದೇಶದಲ್ಲಿ ವಾರ್ಷಿಕ 35 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ಎಚ್‌ಐವಿ, ಮಧುಮೇಹ, ರಕ್ತದೊತ್ತಡ ಸೇರಿ ಇತರೆ ಕಾಯಿಲೆಗಳಿಗೂ ಲಕ್ಷಾಂತರ ಜನ ತುತ್ತಾಗುತ್ತಿದ್ದಾರೆ. ಇಂತಹ ಕಾಯಿಲೆಗಳ ತಡೆಗಟ್ಟಲು ಆಯುಷ್ ಪದ್ಧತಿ ಸಹಕಾರಿ. ಮಹಾಮಾರಿ ಏಡ್ಸ್‌ಗಿಂತ ಹೃದಯ ಹಾಗೂ ಮೆದುಳು ಸಂಬಂಧಿ ಕಾಯಿಲೆಗಳು ಜನಸಾಮಾನ್ಯರ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಯುಷ್ ಇಲಾಖೆಯ ಪರಿಣಾಮಕಾರಿ ಚಿಕಿತ್ಸೆ ಪಡೆದುಕೊಳ್ಳಬೇಕು. ಮಿತ ಆಹಾರ ಸೇವನೆ, ಯೋಗದಂತಹ ಪದ್ಧತಿಗಳನ್ನು ಜೀವನ ಶೈಲಿಯಲ್ಲಿ ರೂಢಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದು ಡಾ. ಹೆಗಡೆ ಸಲಹೆ ನೀಡಿದರು. ನಗರಸಭೆ ಸದಸ್ಯೆ ಮೇಘಾ ಮುದಗಲ್, ಫಾದರ್ ಲೂರ್ದಸ್ವಾಮಿ ಮಾತನಾಡಿದರು. ಜಿಪಂ ಉಪಾಧ್ಯಕ್ಷ ರಮೇಶ ಮುಂದಿನಮನಿ, ತಾಪಂ ಅಧ್ಯಕ್ಷ ಹನುಮಂತಪ್ಪ ಇಂಗಳಳ್ಳಿ, ಆಯುಷ್ ಇಲಾಖೆಯ ಅಧಿಕಾರಿ ಹಿರೇಮಠ ಮುಂತಾದವರು ಇದ್ದರು. ಜಿಲ್ಲಾ ಆಯು ಷ್ ಅಧಿಕಾರಿ ಡಾ. ಬಿ.ಜಿ. ಪಾಟೀಲ ಸ್ವಾಗತಿಸಿದರು. ಕಾರ್ಯಕ್ರಮಕ್ಕೂ ಮುನ್ನ ಆಯುಷ್ ಆರೋಗ್ಯ ಮೇಳದ ಅಂಗವಾಗಿ ಹಮ್ಮಿಕೊಂಡ ಆರೋಗ್ಯ ತಪಾಸಣಾ ಶಿಬಿರದಲ್ಲಿ ನೂರಕ್ಕೂ ಅಧಿಕ ಜನ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement