ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಡಲೆಗೆ ಬೆಂಬಲ ಬೆಲೆ ನೀಡಿ: ಕರವೇಯಿಂದ ಮನವಿ

Lingaraj Badiger
Updated On : 6 Feb 2014, 1:55 am

ನರೇಗಲ್ಲ: ಕಡಲೆಗೆ ಸೂಕ್ತ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಸ್ಥಳೀಯ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಹಾಗೂ ರೈತ ಸಂಘದ ನೇತೃತ್ವದಲ್ಲಿ ರೈತರು ಸೋಮವಾರ ಪಟ್ಟಣದ ಹಳೇಬಸ್ ನಿಲ್ದಾಣದಿಂದ ಮೆರವಣಿಗೆಯ ಮೂಲಕ ನಾಡ ಕಚೇರಿಗೆ ತೆರಳಿ ವಿಶೇಷ ತಹಸೀಲ್ದಾರ್ ಮೂಲಕ ಜಿಲ್ಲಾಕಾರಿಗೆ ಮನವಿ  ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಸಿ.ಎಂ. ಕಲಹಾಳ ಮಾತನಾಡಿ, ತಾಲೂಕಿನ ವಿವಿಧ ಕಡೆಗಳಿಂದ ರೈತರು ವಾಣಿಜ್ಯ ಬೆಳೆಯಾದ ಕಡಲೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದು, ಬೆಲೆ ಕುಸಿತದಿಂದ ತಾಲೂಕಿನ ಎಲ್ಲ ರೈತರು ಸಂಕಷ್ಟಕ್ಕೆ ಒಳಗಾಗಿರುವುದು ಮನವರಿಕೆಯಾಗಿದೆ. ಕಡಲೆ ಬೆಂಬಲ ಬೆಲೆಗಾಗಿ ವಿವಿಧ ಕಡೆಗಳಿಂದ ರೈತರು ತಾಲೂಕಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದರು. ರೈತ ಮುಖಂಡ ಬಸವರಾಜ ಪಾಟೀಲ, ಗದಗ ಜಿಲ್ಲಾ ಕರವೇ ಅಧ್ಯಕ್ಷ ಎಚ್.ಎಸ್. ಅಬ್ಬಿಗೇರಿ, ರೋಣ ತಾಲೂಕು ಅಧ್ಯಕ್ಷ ನಿಂಗಪ್ಪ ಹೊನ್ನಾಪುರ, ನರೇಗಲ್ಲ ಘಟಕದ ಅಧ್ಯಕ್ಷ ಎಂ.ಎನ್. ಕುಂದಗೊಳ, ರಮೇಶ ಕಾಟಿ ಹಾಗೂ ತಾಲೂಕಿನ ವಿವಿಧ ಗ್ರಾಮಗಳಾದ ಜಕ್ಕಲಿ, ಡ.ಸ.ಹಡಗಲಿ ಮತ್ತು ಹಾಲಕೆರಿ ಗ್ರಾಮಗಳಿಂದ ಕರವೇ ಸಂಘಟನೆ ಮುಖಂಡರು ಹಾಗೂ ರೈತರು          ಉಪಸ್ಥಿತರಿದ್ದರು.
--
ಗ್ರಾಮೀಣ ಮಹಿಳೆಯರಿಗೆ ಕಾನೂನು ಅರಿವು ಅಗತ್ಯ
ಕನ್ನಡಪ್ರಭ ವಾರ್ತೆ, ಮುಳಗುಂದ, ಫೆ. 5
ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಇವುಗಳನ್ನು ತಡೆಗಟ್ಟುವ ಉದ್ದೇಶದಿಂದ ಸರ್ಕಾರ ಹಲವಾರು ಕಾನೂನು ಜಾರಿಗೆ ತಂದಿದೆ. ಮಹಿಳೆಯರಿಗೆ ಕಾನೂನಿನ ಮಹತ್ವ ತಿಳಿಯಪಡಿಸಬೇಕು. ಅದರಲ್ಲೂ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕಾನೂನಿನ ಅರಿವು ಅಗತ್ಯವಾಗಿದೆ ಎಂದು ಗದಗ ಜಿಲ್ಲಾ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಎಸ್.ಎಸ್. ಮುರಗೋಡ ಅಭಿಪ್ರಾಯ ಪಟ್ಟರು.
ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆ, ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘ ಇವರ ಆಶ್ರಯದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ-2005 ನಿಯಮ 2006ರ ಅಡಿ ಸ್ಥಳೀಯ ಲಕ್ಷ್ಮಿವೆಂಕಟೇಶ್ವರ ಕಲಾಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾನೂನು ಜಾಗೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.  ಫೆ. 6ರಿಂದ ಏ. 12ರ ವರೆಗೆ ಮೆಗಾ ಲೋಕ ಅದಾಲತ್ ಏರ್ಪಡಿಸಿಲಾಗಿದೆ. ಕಕ್ಷಿದಾರರು ತಮ್ಮ ಪ್ರಕರಣಗಳನ್ನು ರಾಜಿ ಮಾಡಿಕೊಂಡು ಸಮಯ ಹಾಗೂ ಹಣವನ್ನು ಉಳಿತಾಯ ಮಾಡಿಕೊಂಡು ಸ್ನೇಹಪರ ವಾತಾವರಣ ನಿರ್ಮಾಣ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಎಂ. ಶೋಭಾ ಮಾತನಾಡಿ, ಸಂಕಟ ಬಂದಾಗ ವೆಂಕಟರಮಣ ಎನ್ನದೇ ಮಹಿಳೆಯರು ಮೊದಲೇ ಕಾನೂನಿನ ಜ್ಞಾನ ಪಡೆಯುವುದು ಅಗತ್ಯವಾಗಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಉಚಿತ ಕಾನೂನಿನ ನೆರವು ಪಡೆದುಕೊಳ್ಳಬಹುದಾಗಿದೆ ಎಂದರು. ಪಪಂ ಅಧ್ಯಕ್ಷೆ ಲಕ್ಷ್ಮವ್ವ ಕಣವಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎಚ್.ಎಸ್. ಪರಮೇಶ್ವರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಿತ್ರಾ ಶ್ರೀಗಿರಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005 ನಿಯಮ 2006ರ, ವರದಕ್ಷಿಣೆ ನಿಷೇದ ಕಾಯ್ದೆ, ಮಂಜುಳಾ ದೇಸಾಯಿಮಠ ಇವರು ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಹಿಳೆಯರ ಆಸ್ತಿ ಹಕ್ಕು ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ನ್ಯಾಯಾಧೀಶ ಕುಲಕರ್ಣಿ ಅಂಬಾದಾಸ, ಹೊಸಮನಿ ಪುಂಡಲಿಕ, ವಕೀಲರ ಸಂಘದ ಅಧ್ಯಕ್ಷ ವಿ.ಬಿ. ಹುಬ್ಬಳ್ಳಿ, ಪಪಂ ಸದಸ್ಯ ಕೆ.ಎಲ್. ಕರಿಗೌಡರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಕ್ಕಮಹಾದೇವಿ, ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಎಸ್.ಟಿ. ಆಳಂದಿ ನಿರೂಪಿಸಿದರು. ಸರೋಜಿನಿ ಹೊಸಮನಿ ವಂದಿಸಿದರು.
--
ನಾಗರಿಕರಿಗೆ ಅನುಕೂಲವಾಗುವ ಕಾರ್ಯ ಕೈಗೊಳ್ಳಿ
ಗದಗ: ಗ್ರಾಮದ ನಾಗರಿಕರಿಗೆ ಅನುಕೂಲವಾಗುವ ಕಾರ್ಯಗಳನ್ನು ಹಮ್ಮಿಕೊಳ್ಳುವಂತೆ ಶಾಸಕ ಬಿ.ಆರ್. ಯಾವಗಲ್ ಹೇಳಿದರು.
ಅವರು ಸೋಮವಾರ ತಾಲೂಕಿನ ಪಾಪನಾಶಿ ತಾಂಡಾದಲ್ಲಿ 2013-14ನೇ ಸಾಲಿನ ಟಾಸ್ಕ್ ಪೊರ್ಸ್ ಯೋಜನೆಯಡಿ ರು. 5 ಲಕ್ಷ ಅನುದಾನದಲ್ಲಿ ಪಾಪನಾಶಿ ತಾಂಡಾದಿಂದ ಪಾಪನಾಶಿ ರಸ್ತೆ ದುರಸ್ತಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸಿ, ಗ್ರಾಮದ ಸಮಸ್ಯೆಗಳನ್ನು ಅರಿತು ಅವುಗಳನ್ನು ನಿವಾರಿಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಬೇಕು. ರಸ್ತೆ ತುಂಬಾ ಹಾಳಾಗಿದ್ದು, ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಆದಷ್ಟು ಬೇಗನೆ ದುರಸ್ತಿ ಕಾರ್ಯ ಪೂರ್ಣಗೊಳಿಸುವಂತೆ ಹೇಳಿದರು. ಗ್ರಾಪಂ ಅಧ್ಯಕ್ಷ ರಮೇಶ ಲಮಾಣಿ, ಸದಸ್ಯ ತಿಮ್ಮರಡ್ಡಿ ವಡ್ಡರ, ರಾಮಪ್ಪ ನಾಯಕ, ನಾರಾಯಣ ಪೂಜಾರ, ಸೋಮಪ್ಪ ರಾಠೋಡ, ರಾಮಪ್ಪ ಕಾರಬಾರಿ, ಶಾಂತವ್ವ ಕಾರಬಾರಿ, ಲಾಲಪ್ಪ ಅಂಗಡಿ, ಮನಪ್ಪ ಪೂಜಾರ, ಸೋಮಪ್ಪ ಪೂಜಾರ, ಗೋಪಣ್ಣ ಲಮಾಣಿ ಸೇರಿದಂತೆ ತಾಂಡಾದ ಗುರುಹಿರಿಯರು, ಯುವಕರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
--
ಉತ್ತಮ ಸಂಸ್ಕಾರದಿಂದ ಬದುಕು ವಿಕಸನ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಫೆ. 5
ಉತ್ತಮ ಸಂಸ್ಕಾರದಿಂದ ಮನುಷ್ಯನ ಬದಕು ವಿಕಸನವಾಗಲಿದೆ. ಜತೆಗೆ ಜೀವನ ಚೈತನ್ಯವಾಗಲಿದೆ ಎಂದು ಜನಪದ ಸಾಹಿತಿ ಡಾ. ಶಂಭು ಬಳಿಗಾರ ಹೇಳಿದರು.
ಅವರು ಸಮೀಪದ ಸೂಡಿ ಗ್ರಾಮದ ಐತಿಹಾಸಿಕ ಗಣಪತಿ ದೇವಸ್ಥಾನದಲ್ಲಿ ಗಣೇಶ ಜಯಂತಿ ಪ್ರಯುಕ್ತ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಜೀವನ ಚೈತನ್ಯ ಹಾಸ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯನ ಅಂತರಂಗ ಶುಚಿಯಾಗಿಸುವ ಉತ್ತಮ ಸಂಸ್ಕಾರ ಮನುಷ್ಯ ವ್ಯಕ್ತಿತ್ವವನ್ನು ಎತ್ತರಕ್ಕೆ ಒಯ್ಯಲಿದೆ. ಇಂತಹ ಶ್ರದ್ಧೆ, ನಿಷ್ಠೆ ಹೊಂದಿರುವ ಗ್ರಾಮೀಣ ಸೊಗಡಿನ ಜನಪದ ಶೈಲಿಯ ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದಿರುವ ಕೂಡಿ ಬಾಳುವ ಹಂಚಿಕೊಂಡು ಉಣ್ಣುವ ಪದ್ಧತಿಯನ್ನು ಮಕ್ಕಳ ಮನದಲ್ಲಿ ಬಿತ್ತಬೇಕು. ಹಸಿದವರಿಗೆ ಉಣಿಸಿದರೆ ಕೊನೆ ತನಕ ನೆನೆಯುತ್ತಾರೆ ಎಂಬುದನ್ನು ಮರೆಯಬಾರದು. ಕಬ್ಬನ್ನು ಮನುಷ್ಯ ಕಡಿದು ಸವಿಯುವುದು ಪ್ರಕೃತಿ ನಿರ್ಮಿತವಾಗಿದೆ. ಅದನ್ನು ಹಿಂಡಿ ಕಬ್ಬಿನ ಹಾಲು ಕುಡಿದರೆ ಸಂಸ್ಕೃತಿ ಎನಿಸುವುದು. ಆದರೆ, ಕಬ್ಬಿನ ಹಾಲನ್ನು ಮಧ್ಯೆ(ಹೆಂಡ) ತಯಾರಿಸಲು ಬಳಸುವುದು ವಿಕೃತಿಯಾಗುವುದು. ಭವಿಷ್ಯದ ಉತ್ತಮ ಸಮಾಜಕ್ಕಾಗಿ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಜವಾಬ್ದಾರಿ ಹೆತ್ತವರ ಮೇಲಿದೆ. ಮನೆಯಲ್ಲಿ ಉತ್ತಮ ಸಂಸ್ಕಾರವಿದ್ದರೆ ಸಮಾಜದಲ್ಲಿ ಗೌರಯುತವಾಗಿ ಬದಕಲು ಸಾಧ್ಯ ಎಂದರು. ಸಿ.ಆರ್. ಜೋಶಿ ಅಧ್ಯಕ್ಷತೆ ವಹಿಸಿದ್ದರು. ಭುಜಂಗಭಟ್ ಜೋಶಿ, ಅರುಣ ಜೋಶಿ, ಎಸ್‌ಬಿಐ ಶಾಖಾ ಪ್ರಬಂಧಕ ವಿನಾಯಕರಾಮ ಸಿರಸಿಕರ್, ಉಪಪ್ರಭಂಧಕ ಎಚ್.ಡಿ. ಪಾಟೀಲ, ರಂಜನ್ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಹಿತಿ ಶಂಭು ಬಳಿಗಾರ ಅವರನ್ನು ಸನ್ಮಾನಿಸಲಾಯಿತು. ವೀರಭದ್ರೇಶ್ವರ ಗೆಳೆಯರ ಬಳಗದಿಂದ ಜಾನಪದ ಜನಮನ ಸೆಳೆಯಿತು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement