ಗೋವಿನ ಜೋಳ ಬೆಳೆದವರಿಗೆ ನಿರ್ಲಕ್ಷ್ಯದ ಬೆಂಬಲ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಫೆ. 5
ಬರಗಾಲದ ಬವಣೆಯಲ್ಲಿದ್ದ ರೈತ ಸಮೂಹ ಸುರಿದ ಅಲ್ಪ ಸ್ವಲ್ಪ ಮಳೆಯಿಂದಾಗಿ ಹಾಗೂ ನೀರಾವರಿಯಿಂದಾಗಿ ಗೋವಿನ ಜೋಳದ ಬಂಪರ್ ಬೆಳೆ ಬಂದಿದೆ. ಆದರೆ, ಗೋವಿನ ಜೋಳದ ಬೆಲೆ ಕುಸಿತವಾಗಿದ್ದು, ಸರ್ಕಾರ ರೈತರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಗೋವಿನ ಜೋಳ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರ ಪ್ರಾರಂಭಿಸಿದೆ. ಆದರೆ, ಇದು ರೈತರನ್ನು ತಲುಪುವಲ್ಲಿ ಮಾತ್ರ ಯಡವಟ್ಟಾಗುತ್ತಿದೆ.
ರೈತರು ಗೋವಿನ ಜೋಳವನ್ನು ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ತಂದರೆ ಅದನ್ನು ತೂಕ ಮಾಡಿಕೊಳ್ಳಲು 8-10 ದಿನಗಳ ವರೆಗೆ ಕಾಯಬೇಕು. ಎಲ್ಲ ಕೆಲಸಗಳನ್ನು ಬಿಟ್ಟು ಗೋವಿನ ಜೋಳ ಮಾರಾಟಕ್ಕೆ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ತಂದರೆ, ಇಲ್ಲಿ ರೈತರು ನಮ್ಮ ಜೋಳ ಯಾವಾಗ ತೂಕ ಮಾಡಿಕೊಳ್ಳುತ್ತಾರೊ ಎಂದು ಕಾಯುವುದೇ ಕಾಯಕವಾಗಿದೆ. ಶಿರಹಟ್ಟಿ ತಾಲೂಕಿನಲ್ಲಿ ಲಕ್ಷ್ಮೇಶ್ವರ ಹಾಗೂ ಬೆಳ್ಳಟ್ಟಿಯಲ್ಲಿ ಗೋವಿನ ಜೋಳ ಬೆಂಬಲ ಬೆಲೆಯ ಖರೀದಿ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಇದುವರೆಗೆ ಸುಮಾರು 11.755 ಚೀಲ ಗೋವಿನ ಜೋಳವನ್ನು ಸರ್ಕಾರ ಖರೀದಿ ಮಾಡಿದ್ದು ಸುಮಾರು ರು. 7.50 ಕೋಟಿ ಪಾವತಿ ಮಾಡಿದೆ ಎಂದು ಕೆಎಸ್ಎಫ್ಸಿಯ ಅಧಿಕಾರಿಗಳು ಹೇಳುತ್ತಾರೆ.
ನಿರ್ಲಕ್ಷ್ಯ: ಇಷ್ಟಾದರೂ ಇನ್ನೂ ಸಾವಿರಾರು ಚೀಲಗಳು ಖರೀದಿಯಾಗದೆ ಉಳಿದಿವೆ. ಉಳಿದ ಗೋವಿನ ಜೋಳವನ್ನು ಶೀಘ್ರವಾಗಿ ಖರೀದಿ ಮಾಡಬೇಕು. ತಾಲೂಕಿನ ವಿವಿಧ ಭಾಗಗಳಿಂದ ನೂರಾರು ರೈತರು ಗೋವಿನ ಜೋಳದ ಚೀಲಗಳನ್ನು ತಂದು 10 ದಿನಗಳಿಂದ ಕಾಯುತ್ತಾ ಕುಳಿತ್ತಿದ್ದರೂ ತೂಕ ಮಾಡಿಸಿಕೊಳ್ಳಲಾರದೆ ಅಧಿಕಾರಿಗಳು ನಾಳೆ ಮಾಡುತ್ತೇವೆ, ನಾಡಿದ್ದು ಮಾಡುತ್ತೇವೆ ಎಂದು ಕಾಲಹರಣ ಮಾಡುತ್ತಿದ್ದಾರೆ.
ರೈತರ ಆಗ್ರಹ: ಈಗಾಗಲೇ ತೂಕ ಮಾಡಿದ ಜೋಳಗಳ ಚೀಲಗಳು ಖರೀದಿ ಕೇಂದ್ರದಲ್ಲಿಯೇ ಇವೆ. ಖರೀದಿ ಮಾಡಿರುವ ಗೋವಿನ ಜೋಳವನ್ನು ಸ್ಟಾಕ್ ಮಾಡಲು ಜಿಲ್ಲೆಯ ಗೋದಾಮುಗಳು ಖಾಲಿ ಇಲ್ಲ. ಇದು ಅಧಿಕಾರಿಗಳಿಗೆ ದೊಡ್ಡ ತಲೆ ನೋವಿನ ಸಂಗತಿಯಾಗಿದೆ ಎಂದು ಗದಗ ಜಿಲ್ಲಾ ಕೆಎಸ್ಎಪ್ಸಿ ಅಧಿಕಾರಿಗಳು ಹೇಳುತ್ತಾರೆ.
ಜಿಲ್ಲಾಧಿಕಾರಿಗಳು ಶೀಘ್ರವಾಗಿ ಜಿಲ್ಲೆಯ ಖಾಸಗಿ ಗೋದಾಮುಗಳಲ್ಲಿ ಈಗಾಗಲೇ ಖರೀದಿಯಾಗಿರುವ ಗೋವಿನ ಜೋಳದ ಚೀಲಗಳನ್ನು ಸ್ಟಾಕ್ ಮಾಡಲು ಕ್ರಮಕೈಗೊಳ್ಳಬೇಕು. ಅಲ್ಲದೇ ಉಳಿದ ಗೋವಿನ ಜೋಳದ ಚೀಲಗಳನ್ನು ಖರೀದಿ ಮಾಡಲು ವ್ಯವಸ್ಥೆ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.
-ಅಶೋಕ ಸೊರಟೂರ