ಚೌಡಯ್ಯನವರ ವಚನಗಳ ಸಂಶೋಧನೆ ಆಗಲಿ
ಗದಗ: ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಸಾಮಾಜಿಕ ಚಿಂತನೆ, ಬದುಕಿನ ನೈಜ ತಿರುಳುಗಳು ಅಡಕವಾಗಿದ್ದು, ಅವರ ವಚನಗಳ ಮೇಲೆ ಬೆಳಕು ಚೆಲ್ಲುವ ಸಂಶೋಧನೆ ಅವಶ್ಯಕತೆಯಿದೆ ಎಂದು ಡಾ. ಗಣೇಶ ಸುಲ್ತಾನಪುರ ಹೇಳಿದರು.
ಅವರು ನಗರದ ತಾಪಂ ಆವರಣದಲ್ಲಿರುವ ಜಿಲ್ಲಾ ಕಸಾಪ ಕಾರ್ಯಾಲಯದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಶನಿವಾರ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯನವರ ಜೀವನ ಮತ್ತು ವಚನಗಳ ಸಂದೇಶ ಕುರಿತು ಉಪನ್ಯಾಸ ನೀಡಿದರು. ನೇರ ಮಾತುಗಳ ಹಾಗೂ ನಿಷ್ಠುರ ನುಡಿಗಳಿಂದ ವಚನಗಳ ಮೂಲಕ ಸಮಾಜ ತಿದ್ದುವ ಹಾಗೂ ಧಾರ್ಮಿಕ ಪಥದತ್ತ ಜನರನ್ನು ಕೊಂಡೊಯ್ದು ಸನ್ಮಾರ್ಗ ತೋರಿದವರು ಅಂಬಿಗರ ಚೌಡಯ್ಯನವರು. ಎಲ್ಲ ಅನಿಷ್ಟಗಳ ತಡೆಯುವಿಕೆಗೆ ಸೂಕ್ತ ಪರಿಹಾರವನ್ನು ವಚನಗಳ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶರಣು ಗೋಗೇರಿ ಮಾತನಾಡಿ, ಅಂಬಿಗರ ಚೌಡಯ್ಯನವರು ನುಡಿದಂತೆ ನಡೆದು ತೋರಿಸಿದ ನಿಜಶರಣರು ಎಂದರು. ತಾಲೂಕು ಗೌರವ ಕಾರ್ಯದರ್ಶಿ ಕವಿತಾ ದಂಡಿನ, ಜೆ.ಎಂ. ರೇವಡಿಹಾಳ, ಕೆ.ಕೆ. ಹೂಗಾರ, ಸಿ.ಎಂ. ಕೇಸರಿ, ಆರ್.ಡಿ. ಕಪ್ಪಲಿ, ವಿ.ಎನ್. ಬೇಂದ್ರೆ, ಅ.ದ. ಕಟ್ಟಿಮನಿ, ಎಸ್.ಯು. ಸಜ್ಜನಶೆಟ್ಟರ್, ಪಿ.ಕೆ. ಮೂಲಿಮಠ, ಶೋಭಾ ಶಲವಡಿ, ರೇಣುಕಾ ಬಣಕಾರ, ಜಯಶ್ರೀ ಅಂಗಡಿ, ಪ್ರಕಾಶ ಬಂಡಿ, ಜಿ.ಎಸ್. ಯತ್ನಟ್ಟಿ, ಆರ್.ಎನ್. ಸಜಗಾರ, ಶರಣಪ್ಪ ಬಾಲಣ್ಣವರ, ಮಲ್ಲಿಕಾರ್ಜುನ ಪೂಜಾರ, ಸಂಜೀವಸ್ವಾಮಿ, ದಾನೂ ದಾನಪ್ಪಗೌಡರ ಮುಂತಾದವರು ಉಪಸ್ಥಿತರಿದ್ದರು.
ಮಲ್ಲಿಕಾರ್ಜುನ ಪೂಜಾರ ಪ್ರಾರ್ಥಿಸಿದರು. ಡಿ.ಎಸ್. ತಳವಾರ ಸ್ವಾಗತಿಸಿದರು. ವಿಶ್ವನಾಥ ಕಮ್ಮಾರ ನಿರೂಪಿಸಿದರು. ಪ್ರಕಾಶ ಗಿಡ್ಡಣ್ಣವರ ವಂದಿಸಿದರು.