ನಿಸ್ವಾರ್ಥರಾಗಿ ರೋಗಿಗಳ ಆರೈಕೆ ಮಾಡಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಫೆ.5
ವೈದ್ಯರು ನಿಸ್ವಾರ್ಥ ಸೇವಾ ಮನೋಭಾವದ ಮೂಲಕ ಹೃದಯ ವೈಶಾಲ್ಯದೊಂದಿಗೆ ರೋಗಿಗಳ ಆರೋಗ್ಯ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಿಬ್ಬಂದಿಗೆ ಶಾಸಕ ರಾಮಕೃಷ್ಣ ದೊಡ್ಡಮನಿ ಸಲಹೆ ನೀಡಿದರು.
ಬುಧವಾರ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ರು. 1.20 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಪ್ರಾಥಮಿಕ ಆರೋಗ್ಯ ಕೇಂದ್ರ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ವೈದ್ಯರು ಕೇವಲ ನಗರ ಪ್ರದೇಶಗಳನ್ನು ಮಾತ್ರ ಕಾರ್ಯಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಂಡರೆ ಗ್ರಾಮೀಣ ಪ್ರದೇಶದ ನಾಗರಿಕರ ಆರೋಗ್ಯ ಕಾಪಾಡುವವರು ಯಾರು ಎಂದು ಪ್ರಶ್ನಿಸಿದರು. ವೈದ್ಯಕೀಯ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಆದರೆ ಮಾನವೀಯತೆ, ಅಂತಕರಣ ಗುಣಗಳು ವೈದ್ಯಕೀಯ ಕ್ಷೇತ್ರದಿಂದ ಕಣ್ಮರೆ ಆಗುತ್ತಿವೆ. ವೈದ್ಯರು ರೋಗಿಯನ್ನು ಗುಣಪಡಿಸುವ ಕಾರ್ಯಕ್ಕೆ ಮುಂದಾಗುವುದಕ್ಕಿಂತ ಪೂರ್ವದಲ್ಲಿ ರೋಗ ನಿವಾರಣೆಗೆ ತಗುಲುವ ವೆಚ್ಚವನ್ನು ಅಂದಾಜಿಸಿ, ಆಸ್ಪತ್ರೆಯನ್ನು ಪ್ರವೇಶಿಸುವಾಗಲೇ ದೊಡ್ಡ ಮೊತ್ತಕ್ಕೆ ಬೇಡಿಕೆ ಇಡುವ ಪದ್ಧತಿ ಸೂಕ್ತವಲ್ಲ. ಇಂಥ ಹೀನ ವ್ಯವಸ್ಥೆಯಿಂದ ಹೊರ ಬಂದು ನಿಸ್ವಾರ್ಥ ಸೇವೆಗೆ ಮುಂದಾಗಬೇಕು ಎಂದರು. ಡಿಎಚ್‌ಒ ಡಿ.ಬಿ. ಚೆನ್ನಶೆಟ್ಟಿ ಮಾತನಾಡಿ, ಜನಸಾಮಾನ್ಯರು ಆರ್ಥಿಕವಾಗಿ ಸುಧಾರಣೆ ಹೊಂದಲಿ ಎಂದು ಸರ್ಕಾರ ಶಿಕ್ಷಣ, ಆರೋಗ್ಯ, ಸಂಪೂರ್ಣ ಆರೋಗ್ಯ ಚೈತನ್ಯ, ವಾಜಪೇಯಿ ಆರೋಗ್ಯ ಶ್ರೀ, ಬಾಲ ಸಂಜೀವಿನಿ, ರಾಜೀವ ಆರೋಗ್ಯ ಶ್ರೀ ಮತ್ತಿರ ಅನೇಕ ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದೆ. ವೈದ್ಯರೊಂದಿಗೆ ಸಹಕರಿಸಿ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನರ, ಉಪಾಧ್ಯಕ್ಷ ರಮೇಶ ಮುಂದಿನಮನಿ, ಸದಸ್ಯ ಎಂ.ಎಸ್. ದೊಡ್ಡಗೌಡರ, ತಾಪಂ ಅಧ್ಯಕ್ಷೆ ಸುನಂದ ಬಿದರಳ್ಳಿ, ಜಿಪಂ ಸದಸ್ಯೆ ಸುನೀತಾ ಹಳ್ಳೆಪ್ಪನವರ, ತಾಪಂ ಸದಸ್ಯ ಶಿವನಗೌಡ್ರ ಕಂಠಿಗೌಡ್ರ, ಗ್ರಾಪಂ ಅಧ್ಯಕ್ಷ ಇಮಾಮಸಾಬ್ ಹಾರೋಗೇರಿ, ಟಿ.ಬಿ. ಮುಂಡವಾಡ, ಎಂ.ಆರ್. ಮುಂಡವಾಡ, ಮಹೇಂದ್ರ ಮುಂಡವಾಡ, ಎ.ವೈ. ನವಲಗುಂದ, ಲಕ್ಷ್ಮಮ್ಮ ಕೋಟಿ, ಶಿವಯೋಗಿ ಗಡ್ಡಿಬಸಾಪುರಮಠ, ತಾಲೂಕು ಆರೋಗ್ಯಾಧಿಕಾರಿ ಶ್ರೀಕಾಂತ ಕಾಟೇವಾಲೆ, ಡಾ. ಕೆ. ಗಣೇಶ, ಎಸ್.ಎಲ್. ಲಿಂಗಶೆಟ್ಟರ್ ಇದ್ದರು.
ಪ್ರಾ.ಆ. ಕೇಂದ್ರದ ವೈದ್ಯಾಧಿಕಾರಿ ಡಾ. ಬಿ.ಎಫ್. ಹಳ್ಳೆಮ್ಮನವರ ಸ್ವಾಗತಿಸಿದರು. ಶಿಕ್ಷಕ ವಿ.ಪಿ. ಮನಸೂರ ನಿರೂಪಿಸಿ, ವಂದಿಸಿದರು.