ಶರಣರ ಜಾತ್ರೆಗೆ ಬಳಗಾನೂರ ಸಿದ್ಧ
ಕನ್ನಡಪ್ರಭ ವಾರ್ತೆ, ಗದಗ, ಫೆ. 5
ತಾಲೂಕಿನ ಬಳಗಾನೂರಿನ ಚಿಕೇನಕೊಪ್ಪದ ಚನ್ನವೀರ ಶರಣರ ಮಠದ 19ನೇ ಜಾತ್ರಾ ಮಹೋತ್ಸವ ಫೆ. 6 ಮತ್ತು 7ರಂದು ಜರುಗಲಿದೆ. ಮಠದಲ್ಲಿ ಜಾತ್ರೆಗೆ ಸಕಲ ಸಿದ್ಧತೆ ಪೂರ್ಣಗೊಂಡಿವೆ.
ಶ್ರೀಮಠದ ಪ್ರವೇಶದಲ್ಲಿ ಭಕ್ತರನ್ನು ಸೆಳೆಯುವ ಆಕರ್ಷಕ ಪ್ರವೇಶದ್ವಾರ ಆಕರ್ಷಣಿಯವಾಗಿ ಶೃಂಗರಿಸಲಾಗಿದೆ. ಜಾತ್ರೆಗಾಗಿ ಶ್ರೀಮಠವು ಸಂಪೂರ್ಣ ವಿದ್ಯುತ್ ದ್ವೀಪಗಳಿಂದ ಅಲಂಕೃತಗೊಂಡಿದೆ. ಶರಣ ಚಿಂತನಗೋಷ್ಠಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗಾಗಿ ವಿಶಾಲ ಹಾಗೂ ಭವ್ಯವಾದ ಪ್ರಮುಖ ವೇದಿಕೆ, ಸಾಮೂಹಿಕ ವಿವಾಹಗಳಿಗಾಗಿ ಕಲ್ಯಾಣ ಮಂಟಪ, ಭಕ್ತರಿಗೆ ಪ್ರಸಾದದ ವ್ಯವಸ್ಥೆಗಾಗಿ ಸುಮಾರು 25 ಕೌಂಟರ್‌ಗಳನ್ನು ಒಳಗೊಂಡ ವಿಶಾಲವಾದ ಊಟದ ಮೈದಾನ, ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿದೆ. ಜಾನುವಾರುಗಳ ಜಾತ್ರೆಗಾಗಿ ಪ್ರತ್ಯೇಕ ಮೈದಾನದೊಂದಿಗೆ ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಮೇವಿನ ವ್ಯವಸ್ಥೆಯನ್ನು ಮಾಡಲಾಗಿದೆ. ಜಾತ್ರೆಗೆ ಬರುವ ಭಕ್ತರಿಗಾಗಿ ವಿಶೇಷ ಬಸ್‌ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆಗಾಗಿ ಉತ್ತರ ಕರ್ನಾಟಕದ ಪ್ರಮುಖ ಖಾದ್ಯವಾದ ಖಡಕ್ ರೊಟ್ಟಿ, ಚಪಾತಿ, ಬದನೆಕಾಯಿ ಪಲ್ಲೆ, ತೊಗರಿ ಬೇಳೆ ದಾಲ್, ಸುಮಾರು 40 ಕ್ವಿಂಟಲ್ ಬೂಂದೆ ತಯಾರಿಸಲಾಗುತ್ತದೆ.
ಜಾತ್ರೆಗೆ ಸೇರುವ ಸುಮಾರು 1 ಲಕ್ಷ ಭಕ್ತರಿಗೆ ಪ್ರಸಾದ ವಿತರಣೆಗಾಗಿ ವಿದ್ಯಾಪೀಠದ ಶಿಕ್ಷಕ, ವಿದ್ಯಾರ್ಥಿ ವೃಂದ ಹಾಗೂ ವಿವಿಧ ಸ್ವ ಸಹಾಯ ಸಂಘಗಳು, ಬಳಗಾನೂರ ಹಾಗೂ ಸುತ್ತ ಮುತ್ತಲಿನ ಗ್ರಾಮದ ಭಕ್ತರು ಸಿದ್ಧರಾಗಿದ್ದಾರೆ. ಜತೆಗೆ ಚಿಣ್ಣರ ಮನ ಸೆಳೆಯಲು ವಿವಿಧ ಆಟಿಕೆಯ, ಕ್ರೀಡೆಯ ಸಾಮಗ್ರಿಗಳು ಕೂಡ ಜಾತ್ರೆಯಲ್ಲಿವೆ.