ಇಂದಿನಿಂದ ಅನ್ನದಾನೀಶ್ವರ ಜಾತ್ರಾ ಮಹೋತ್ಸವ
ಕನ್ನಡಪ್ರಭ ವಾರ್ತೆ, ಮುಂಡರಗಿ, ಫೆ. 6
ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳವರ ಜಾತ್ರಾ ಮಹೋತ್ಸವ ಫೆ. 7ರಿಂದ ಫೆ. 14ರ ವರೆಗೆ ಜರುಗಲಿದೆ. ಫೆ. 7ರಿಂದ ನಿತ್ಯ ಬೆಳಗ್ಗೆ 6ಕ್ಕೆ ಕರ್ತೃಗದ್ದುಗೆಗೆ ರುದ್ರಾಭಿಷೇಕ ಮತ್ತು ಪೂಜೆ ನಡೆಯುವುದು. ಫೆ. 7ರಿಂದ ಫೆ. 11ರ ವರೆಗೆ ಸಂಜೆ 7ಕ್ಕೆ ಅನ್ನದಾನಶ್ರೀ ಅವರು ರಚಿಸಿದ ಮಾನವ ಧರ್ಮ ಗ್ರಂಥ ಪ್ರವಚನವನ್ನು ಸಿದ್ದರಾಮದೇವರು ನಡೆಸಿಕೊಡುವರು. ಡಾ. ಹನುಮಂತ ಮಳಲಿ ಉಪನ್ಯಾಸ ನೀಡುವರು.
ಫೆ. 8ರಂದು ಬೆಳಗ್ಗೆ 8.30ಕ್ಕೆ ಹೂವಿನಹಡಗಲಿಯ ಹಿರಿಯ ಶಾಂತವೀರ ಮಹಾಸ್ವಾಮಿಗಳಿಂದ ಷಟ್ಸ್ಥಳ ಧ್ವಜಾರೋಹಣ ಮತ್ತು ರಥಕ್ಕೆ ಕಳಸಾರೋಹಣ ನಡೆಯುವುದು. ಮಧ್ಯಾಹ್ನ 12ಕ್ಕೆ ಅನ್ನದಾನೀಶ್ವರ ದಾಸೋಹ ಮಂದಿರದಲ್ಲಿ ಅನ್ನಪೂರ್ಣೇಶ್ವರಿ ಪೂಜೆ ಮತ್ತು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯುವುದು. ಫೆ. 9ರಂದು ಪ್ರೌಢಶಾಲೆ ಮತ್ತು ಕಿರಿಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಪೂಜ್ಯರ ವಚನಗಳ ಕಂಠಪಾಠ ಸ್ಪರ್ಧೆ ಮತ್ತು ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಾನವ ಧರ್ಮ ಕುರಿತು ಪ್ರಬಂಧ ಸ್ಪರ್ಧೆ ನಡೆಯುವುದು.
ಆರೋಗ್ಯ ತಪಾಸಣೆ: ಫೆ. 10ಕ್ಕೆ ಬೆಳಗ್ಗೆ 10.30ರಿಂದ ಸಾರ್ವಜನಿಕ ಆಸ್ಪತ್ರೆ, ಸುಜಲಾನ್ ಮತ್ತು ಬಸವ ಜಾಗೃತಿ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಇವುಗಳ ಸಹಕಾರದಲ್ಲಿ ಆರೋಗ್ಯ ಉಚಿತ ತಪಾಸಣೆ ಮತ್ತು ನೇತ್ರ ಚಿಕಿತ್ಸೆ ನಡೆಯುವುದು. ಇದರಲ್ಲಿ ಡಾ. ಎಂ.ಎಂ. ಜೋಶಿ, ಡಾ. ಜಿ.ಬಿ. ಪಾಟೀಲ, ಡಾ. ಉಮೇಶ ಪುರದ, ಡಾ. ಆರ್.ಎಸ್. ಬಳ್ಳಾರಿ, ಡಾ. ಪ್ರಕಾಶ ಹೊಸಮನಿ, ಡಾ. ಶ್ರೀಧರ ಕುರಡಗಿ, ಡಾ. ಸುನಿತಾ ಕುರಡಗಿ, ಡಾ. ಪಿ.ಬಿ. ಹಿರೇಗೌಡ್ರ ಭಾಗವಹಿಸುವರು. ಸಂಜೆ 6ಕ್ಕೆ ಮಹಿಳಾ ಗೋಷ್ಠಿ ನಡೆಯಲಿದ್ದು, ಜಿಪಂ ಅಧ್ಯಕ್ಷೆ ಕಮಲಮ್ಮ ಸಜ್ಜನರ ಉದ್ಘಾಟಿಸಲಿದ್ದಾರೆ. ಗದಗ ವಿದ್ಯಾಶ್ರಮದ ಶಿವಶರಣೆ ನೀಲಮ್ಮ ತಾಯಿ ಅವರು ಕಾರ್ಯಕ್ರಮದ ನೇತೃತ್ವ ವಹಿಸುವರು. ಕವಿತಾ ದಂಡಿನ, ಸಾವಿತ್ರಿ ಮುಜಮದಾರ, ಬನಶಂಕರಿ ಅಂಗಡಿ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಗ್ರಂಥ ಬಿಡುಗಡೆ ನಡೆಯುವುದು.
ಕೃಷಿ ಪ್ರದರ್ಶನ: ಫೆ. 11ರಂದು ಸಂಜೆ 5ಕ್ಕೆ ತೋಟಗಾರಿಕೆ, ಕೃಷಿ ಮತ್ತು ರೇಷ್ಮೆ ಪ್ರದರ್ಶನ ನಡೆಯುವುದು. ಚನ್ನವೀರ ಶ್ರೀಗಳು, ಚಿದಾನಂದ ಶ್ರೀಗಳು, ಗುರುಪಾದ ಶ್ರೀಗಳು, ಶಿವಲಿಂಗ ಶ್ರೀಗಳು ನೇತೃತ್ವ ವಹಿಸುವರು. ಕೃಷಿ ತಜ್ಞರಾದ ಬಸವರಾಜ ಅರಬಗೊಂಡ, ಶೇಖರಗೌಡ ಚವಡಪ್ಪನವರ, ಎನ್.ಕೊಟ್ರೇಶ, ದೇವೇಂದ್ರಪ್ಪ ಬಳೂಟಗಿ, ಬಸವರಾಜ ನಾವಿ, ಪೆಲುರ ವೆಂಕಯ್ಯ, ಚನ್ನಪ್ಪ ಬೂದಿಹಾಳ, ಶಾಂತಲಿಂಗಯ್ಯ ಶಾಸ್ತ್ರಿಮಠ ಅವರಿಗೆ ಸನ್ಮಾನ ಜರುಗಲಿದೆ. ಅತಿಥಿಗಳಾಗಿ ವೆಂಕಣ್ಣ ದೊಡ್ಡಯರಾಶಿ ಆಗಮಿಸುವರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯ ಸೇನಾನಿ ಶಂಕ್ರಪ್ಪ ಯರಾಶಿ ಗ್ರಂಥ ಬಿಡುಗಡೆಗೊಳ್ಳುವುದು. ಪ್ರೊ. ಮಹಾಂತೇಶ ಮಲ್ಲನಗೌಡರ ಗ್ರಂಥ ಪರಿಚಯ ಮಾಡಲಿದ್ದಾರೆ. ಸಂಜೆ 6ಕ್ಕೆ ಡಾ. ಚನ್ನಮಲ್ಲ ಶ್ರೀಗಳ ನೇತೃತ್ವದಲ್ಲಿ ಪ್ರವಚನ ಮಂಗಲ ಮತ್ತು ಧರ್ಮ ಚಿಂತನ ಕಾರ್ಯಕ್ರಮ ಜರುಗಲಿದ್ದು, ಪ್ರೊ. ಕೆ.ಎಚ್. ಬೇಲೂರ ಉಪನ್ಯಾಸ ನೀಡುವರು. ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮ ನೃತ್ಯ ವೈಭವ ಜರಗಲಿದೆ. ಫೆ. 12ರಂದು ಬೆಳಗ್ಗೆ 6ಕ್ಕೆ ಶಿವದೀಕ್ಷಾ ಕಾರ್ಯಕ್ರಮ, ನಂತರ 10.30ಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದ್ದು, ಡಾ. ಕೊಟ್ಟೂರೇಶ್ವರ ಶ್ರೀಗಳು, ಗುದ್ದಲೀಶ ಶ್ರೀಗಳು, ಮಲ್ಲಿಕಾರ್ಜುನ ಶ್ರೀಗಳು, ಶಿವಶಾಂತವೀರ ಶರಣರು, ಗುರೂಜಿ ನಿರಂಜನ ಶ್ರೀಗಳು, ಚನ್ನಬಸವ ಶ್ರೀಗಳು, ಪ್ರಭುಲಿಂಗದೇವರು ನೇತೃತ್ವ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಿಎಂ ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ರಾಮಕೃಷ್ಣ ದೊಡ್ಡಮನಿ, ಜಿ.ಎಸ್. ಪಾಟೀಲ, ಬಿ.ಆರ್. ಯಾವಗಲ್ಲ, ಮಾಜಿ ಸಚಿವ ಕಳಕಪ್ಪ ಬಂಡಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಎಸ್. ಆನಂದ ರಡ್ಡಿ, ಕೆ. ಧರ್ಮೇಂದ್ರ ಆಗಮಿಸುವರು. ಇದೇ ಸಂದರ್ಭದಲ್ಲಿ ನಾಡೋಜ, ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ರಚಿಸಿದ ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳು (ಮಕ್ಕಳಿಗಾಗಿ) ಗ್ರಂಥ ಬಿಡುಗಡೆ ನಡೆಯುವುದು. ಸಂಜೆ 5ಕ್ಕೆ ಜಗದ್ಗುರು ಅನ್ನದಾನೀಶ್ವರ ಮಹಾರಥೋತ್ಸವ ಜರಗುವುದು. ಸಂಜೆ 6ಕ್ಕೆ ಜಗದ್ಗುರು ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಮಾಜ ಚಿಂತನ ಕಾರ್ಯಕ್ರಮ ನಡೆಯುವುದು. ಚನ್ನವೀರ ಶ್ರೀಗಳು, ಶಾಂತಲಿಂಗ ಶ್ರೀಗಳು, ಚನ್ನಬಸವ ಶ್ರೀಗಳು, ನೇತೃತ್ವ ವಹಿಸುವರು. ಅತಿಥಿಗಳಾಗಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಆಗಮಿಸುವರು. ವೀರಣ್ಣ ಶಾಸ್ತ್ರಿ, ಡಾ. ಆರ್.ಎಂ. ಷಡಕ್ಷರಯ್ಯ ಉಪನ್ಯಾಸ ನೀಡುವರು. ಇದೇ ಸಂದರ್ಭದಲ್ಲಿ ಶಿವಲಿಂಗ ಶ್ರೀಗಳು ಮತ್ತು ರುದ್ರಮುನಿ ಶ್ರೀಗಳಿಗೆ ಗುರು ಗೌರವ ನಡೆಯುವುದು. ನಂತರ ಕಲಕೇರಿ ಸಂಸ್ಥಾನದ ದಾಖಲೆಗಳ ಸಾಂಸ್ಕೃತಿಕ ಅಧ್ಯಯನ ಗ್ರಂಥ ಬಿಡುಗಡೆಗೊಳ್ಳುವುದು. ಇದೇ ಸಂದರ್ಭದಲ್ಲಿ ಪ್ರೊ. ಶಂಕರಗೌಡ ಬಿರಾದಾರ ಅವರಿಗೆ ಜಗದ್ಗರು ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು. ಶ್ರೀಗಳು ರಚಿಸಿದ 3 ಗ್ರಂಥಗಳು ಬಿಡುಗಡೆಗೊಳ್ಳುವವು. ರಾತ್ರಿ 9ಕ್ಕೆ ಮುಂಡರಗಿಯ ಹೇಮಗಿರೀಶ ಟ್ರೇಡರ್ಸ್ ಕೃಷಿ ಕೇಂದ್ರ ಹಾಗೂ ಬೀಜೋತ್ಪಾದನೆ ಕೇಂದ್ರ ಇವರ ಪ್ರಾಯೋಜಕತ್ವದಲ್ಲಿ ರೀಚರ್ಡ್ ಲೂಯಿಸ್ ಮತ್ತು ಸಂಗಡಿಗರಿಂದ ನಗೆಹಬ್ಬ ಕಾರ್ಯಕ್ರಮ ಜರುಗಲಿದೆ.
ಸಿಬ್ಬಂದಿ ಸಮ್ಮೇಳನ: ಫೆ. 13ರಂದು ಬೆಳಗ್ಗೆ 10ಕ್ಕೆ ಎ.ವಿ. ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಸಿಬ್ಬಂದಿ ಸಮ್ಮೇಳನ ಜರಗುವುದು. ಮುಖ್ಯ ಅತಿಥಿಗಳಾಗಿ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ನಾ.ಡಿಸೋಜ, ಜಿಲ್ಲಾಧಿಕಾರಿ ಎಂ.ಎಸ್. ಪ್ರಸನ್ನಕುಮಾರ ಮತ್ತು ಎಸ್ಪಿ ಡಾ. ಎಸ್.ಡಿ. ಶರಣಪ್ಪ, ಸಿಇಒ ವೀರಣ್ಣ ತುರಮರಿ ಆಗಮಿಸುವರು. ಕೆ.ಕೆ. ಹೂಗಾರ ರಚಿಸಿದ ಕವನ ಸಂಕಲನ ಮಿಡಿ ಬಿಡುಗಡೆಗೊಳ್ಳುವುದು. ನಂತರ ದಾನಿಗಳಿಗೆ, ನಿವೃತ್ತ ನೌಕರರಿಗೆ ಸನ್ಮಾನ ನಡೆಯುವುದು. ಸಂಜೆ 4ಕ್ಕೆ ಜಂಗಮೋತ್ಸವ ನಡೆಯುವುದು. ಸಂಜೆ 6ಕ್ಕೆ ಧರ್ಮಚಿಂತನ, ರಾತ್ರಿ ಭಕ್ತ ಮಾರ್ಕಂಡೇಯ ದೊಡ್ಡಾಟ ಪ್ರದರ್ಶನಗೊಳ್ಳಲಿದೆ. ಫೆ. 14ಕ್ಕೆ 1691ನೇ ಮಾಸಿಕ ಶಿವಾನುಭವ ಕಾರ್ಯಕ್ರಮ ಜರಗುವುದು ಎಂದುಜಾತ್ರಾ ಕಮಿಟಿಯ ಅಧ್ಯಕ್ಷ ಹೇಮಗಿರೀಶ ಹಾವಿನಾಳ, ಉಪಾಧ್ಯಕ್ಷರು, ಸದಸ್ಯರು ಮನವಿ ಮಾಡಿದ್ದಾರೆ.