ಟಂಟಂ-ಬೈಕ್ ಡಿಕ್ಕಿ: ಐವರಿಗೆ ಗಾಯ
ರೋಣ: ಟಂಟಂ ವಾಹನ ಮತ್ತು ಬೈಕ್ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿ ಐವರು ಗಾಯಗೊಂಡ ಘಟನೆ ತಾಲೂಕಿನ ಹುಲ್ಲೂರು ಮತ್ತು ಮುದೇನಗುಡಿ ಗ್ರಾಮದ ನಡುವೆ ಗುರುವಾರ ರಾತ್ರಿ ನಡೆದಿದೆ. ಬೈಕ್ನಲ್ಲಿದ್ದ ಇಬ್ಬರಿಗೆ ಮತ್ತು ಟಂಟಂನಲ್ಲಿದ್ದ ಮೂವರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ತಾಲೂಕಿನ ಮುದೇನಗುಡಿ ಗ್ರಾಮದ ಬಸವರಾಜ ಫಕೀರಪ್ಪ ಚಲವಾದಿ, ಮಂಜುನಾಥ ಚಲವಾದಿ, ಹುಲ್ಲೂರು ಗ್ರಾಮದ ಬಸವರಾಜ ಮಲಕನ್ನವರ, ಮುತ್ತನಗೌಡ ಅಯ್ಯನಗೌಡ್ರ ಮತ್ತು ರೋಣ ಪಟ್ಟಣದ ಗುಡ್ನೇಸಾಬ್ ಕೋಲ್ಕಾರ ಎಂದು ಗುರುತಿಸಲಾಗಿದೆ. ಇವರಿಗೆ ಪಟ್ಟಣದ ಭಾರತರತ್ನ ಡಾ. ಭೀಮಸೇನ ಜೋಶಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ಮಂಜುನಾಥ ಚಲವಾದಿ ಮತ್ತು ಬಸವರಾಜ ಮಲಕನ್ನವರ ಎಂಬುವರಿಗೆ ತೀವ್ರ ಗಾಯಗಳಾಗಿವೆ. ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸೇತುವೆ ಮೇಲಿಂದ ಬಿದ್ದು ಬೈಕ್ ಸವಾರ ಸಾವು
ಗಜೇಂದ್ರಗಡ: ಸಮಿಪದ ಸೂಡಿ ಬಳಿಯ ಸೇತುವೆ ಮೇಲಿಂದ ಬೈಕ್ ಬಿದ್ದು ಸವಾರನೋರ್ವ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಗುರವಾರ ರಾತ್ರಿ ನಡೆದಿದೆ. ಮೃತನನ್ನು ರೋಣ ತಾಲೂಕಿನ ಹುಲ್ಲೂರು ಗ್ರಾಮದ ಮೇಘರಾಜ ಗಟ್ಟಿ (21) ಎಂದು ಗುರುತಿಸಲಾಗಿದೆ. ಬೈಕ್ನಲ್ಲಿದ್ದ ಇನ್ನೋಬ್ಬ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಾಳೆ ಮುಂಡರಗಿಗೆ ನಮೋ ರಥಯಾತ್ರೆ
ಮುಂಡರಗಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಫೆ. 8ರಂದು ಬೆಳಗ್ಗೆ 10ಕ್ಕೆ ಮುಂಡರಗಿ ಪಟ್ಟಣಕ್ಕೆ ಆಗಮಿಸಲಿದೆ. ಈ ರಥವನ್ನು ನರೇಂದ್ರ ಮೋದಿ ಅಭಿಮಾನಿ ಬಳಗ ಹಾಗೂ ನಮೋ ಬಿಗ್ರೇಡ್ನ ಸದಸ್ಯರು ಬೈಕ್ ರ್ಯಾಲಿ ನಡೆಸುವ ಮೂಲಕ ಸ್ವಾಗತಿಸಲಿದ್ದಾರೆ. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಪುರಸಭೆ ಪಕ್ಕದ ಪೊಲೀಸ್ ಪರೇಡ್ ಮೈದಾನದಲ್ಲಿ ಸಮಾವೇಶಗೊಳ್ಳಲಿದೆಂದು ಸಮಿತಿಯ ಸದಸ್ಯ ಅಂದಪ್ಪ ಕುರಿ, ನಾಗರಾಜ ಕೋಳಿಯವರ, ರಾಮು ಡೊಣ್ಣಿ, ಶ್ರೀಕಾಂತ ಬಡಿಗೇರ, ಮಾರುತಿ ಯಾವಗಲ್, ಕೃಷ್ಣಾ ಗಾರವಾಡ, ಮಾರುತಿ ಅಳವಂಡಿ, ಹುಚ್ಚಪ್ಪ ಕುರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
9ರಂದು ರಂಗಪ್ಪಜ್ಜನ ಜಾತ್ರೆ
ಬೆಟಗೇರಿ: ಇಲ್ಲಿಯ ರಂಗಪ್ಪಜ್ಜ ರಂಗಾವಧೂತರ ತಪೋಭೂಮಿಯಲ್ಲಿ ಫೆ. 9ರ ಸಂಜೆ 6ಕ್ಕೆ ಜೋಡು ರಥೋತ್ಸವ ಜರುಗಲಿದೆ. ರಂಗಪ್ಪಜ್ಜನವರ ತೇರನ್ನು ನರಸಾಪುರದ ಸದ್ಭಕ್ತರು ಶ್ರೀಮಠಕ್ಕೆ ತರಲಿದ್ದು, ಶ್ರೀ ಮಠದಲ್ಲಿ ಸಿದ್ಧಗೊಂಡಿರುವ ವೀರಪ್ಪಜ್ಜನವರ ತೇರು ಅವುಗಳ ಸಮ್ಮೇಳನದೊಂದಿಗೆ ಜೋಡು ರಥೋತ್ಸವವಾಗಿ ಜರುಗಲಿದೆ ಎಂದು ಟ್ರಸ್ಟ್ ಕಾರ್ಯದರ್ಶಿ ಗಣೇಶಸಿಂಗ ಬ್ಯಾಳಿ ವಿನಂತಿಸಿದ್ದಾರೆ.