ಪ್ರಾಚೀನ ಗುರುಕುಲ ಶಿಕ್ಷಣ ಪದ್ಧತಿಗೆ ಆದ್ಯತೆ ನೀಡಿ: ಚನ್ನವೀರ ಶ್ರೀ
ಲಕ್ಷ್ಮೇಶ್ವರ: ಪಠ್ಯೇತರ ವಿಷಯಕ್ಕೂ ಪ್ರಾಶಸ್ತ್ಯ ನೀಡುವ ಜತೆಗೆ ಗುರುಕುಲ ಪದ್ಧತಿಯ ಶಿಕ್ಷಣಕ್ಕೆ ಒತ್ತುಕೊಡಬೇಕಾಗಿದೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಈಚೆಗೆ ಪಟ್ಟಣದ ವೇದಗಂಗೋತ್ರಿ ಪ್ರಾಥಮಿಕ ಹಾಗೂ ಎಸ್.ವಿ. ಕಾಶಿಮಠ ಆಂಗ್ಲಮಾಧ್ಯಮ ಪ್ರೌಢಶಾಲೆಗಳ ಮಹಾಸಮ್ಮೇಳನ ಹಾಗೂ ಸಂಸ್ಥೆಯ 11ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸ್ಪರ್ಧಾತ್ಮಕ ಯುಗದಲ್ಲಿರುವ ವಿದ್ಯಾರ್ಥಿಗಳು ದೈಹಿಕ, ಮಾನಸಿಕವಾಗಿ ಬೆಳೆಯುವುದರಿಂದ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ ಎಂದರು.
ಲೋಕೇಶ ದೊಡ್ಡಮನಿ ಮಾತನಾಡಿ, ಗ್ರಾಮೀಣ ಭಾಗದಲ್ಲಿನ ಅನೇಕ ವಿದ್ಯಾರ್ಥಿಗಳು ಉತ್ತಮ ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸುವ ಉದ್ದೇಶದಿಂದ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎಸ್.ಎಸ್. ನಾಗಲೋಟಿ ಮಾತನಾಡಿ, 11 ವರ್ಷಗಳಿಂದ ಸಮಾಜದಲ್ಲಿನ ಎಲ್ಲ ವರ್ಗದವರ ಸಹಕಾರದಿಂದ ಸಂಸ್ಥೆ ಪ್ರಗತಿ ಹೊಂದುತ್ತಿದೆ ಎಂದರು. ಪುರಸಭೆ ಸದಸ್ಯರಾದ ಮಹೇಶ ಹೊಗೆಸೊಪ್ಪಿನ, ರಾಜಣ್ಣ ಕುಂಬಿ, ಸಂಸ್ಥೆಯ ನಿರ್ದೇಶಕ ಶ್ರೀದೇವಿ ಎಂ.ಎನ್., ಎಸ್.ಸಿ. ಕಳ್ಳಿಮನಿ, ಜಿ.ಎನ್. ಹಳ್ಳಿಕೇರಿ, ಎಸ್.ವಿ. ಅಂಗಡಿ, ಲೋಕಾಂಬಾ, ಮಲ್ಲಿಕಾರ್ಜುನ ನಾಗಲೋಟಿ ಮುಂತಾದವರು ಉಪಸ್ಥಿತರಿದ್ದರು. ಬಡ ಮತ್ತು ಅನಾಥ ಮಕ್ಕಳನ್ನು ದತ್ತಕ ತೆಗೆದುಕೊಂಡು ಓದಿಸುತ್ತಿರುವ ಗೌರಿಶಂಕರ ಸುರಗೀಮಠ ದಂಪತಿಯನ್ನು ಹಾಗೂ ಭರತನಾಟ್ಯದಲ್ಲಿ ಕರ್ನಾಟಕ ಕಲಾರತ್ನ ಪ್ರಶಸ್ತಿ ಪಡೆದ ಸೌಜನ್ಯಾ ನಾಗಲೋಟಿ ಅವರನ್ನು ಸನ್ಮಾನಿಸಲಾಯಿತು. ಶಕುಂತಲಾ ಗುಡಗೇರಿ ವರದಿ ವಾಚಿಸಿದರು. ಸುಧಾ ಡಿ. ಸ್ವಾಗತಿಸಿದರು. ರಾಜೇಶ ಗುಡಗೇರಿ ನಿರೂಪಿಸಿದರು. ಬಿ.ಎಚ್. ಮುಳಗುಂದ ವಂದಿಸಿದರು. ನಂತರ ಮಕ್ಕಳಿಂದ ವೇಷಭೂಷಣ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.