ವಸತಿಹೀನರಿಗೆ ಮನೆ ಒದಗಿಸಲು ಕ್ರಮ: ಪಾಟೀಲ
ಗದಗ: ಬರುವ ದಿನಗಳಲ್ಲಿ ರೋಣ ಮತಕ್ಷೇತ್ರದಾದ್ಯಂತ ವಸತಿಹೀನರಿಗೆ ವಿವಿಧ ಯೋಜನೆಗಳ ಅಡಿಯಲ್ಲಿ ಎಲ್ಲರಿಗೂ ಮನೆ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಬುಧವಾರ ರಾತ್ರಿ ನೂತನ ಬಡಾವಣೆಯ ಮನೆಗಳ ಹಕ್ಕುಪತ್ರ ವಿತರಣೆ ಹಾಗೂ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಬಡವರಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ವಸತಿಹೀನರಿಗೆ ಮನೆ ಒದಗಿಸುವುದು ಒಂದು. ವಾಸಿಸಲು ಮನೆ ಇಲ್ಲದವರು ಈ ಯೋಜನೆಯ ಲಾಭ ಪಡೆದುಕೊಳ್ಳಬೇಕು. ಮತ್ತು ಈ ನೂತನ ಬಡಾವಣೆಗೆ ಕವಿ ಚಾಮರಸರ ಬಡಾವಣೆ ಎಂದು ನಾಮಕರಣ ಮಾಡಲು ಗ್ರಾಮಸ್ಥರು ಸಹಕರಿಸಬೇಕು ಎಂದರು.
ನಾರಾಯಣಪುರ ಗ್ರಾಮದಲ್ಲಿ ಕವಿ ಚಾಮರಸರ ಸ್ಮಾರಕ ಭವನ ನಿರ್ಮಾಣಕ್ಕಾಗಿ ರು. 5 ಲಕ್ಷ, ಕಲ್ಯಾಣ ಬಸವೇಶ್ವರ ದೇವಸ್ಥಾನಕ್ಕೆ ರು. 3 ಲಕ್ಷ, ಶಾದಿ ಮಹಲ್ಗಾಗಿ ರು. 2 ಲಕ್ಷ, ಅಂಬೇಡ್ಕರ್ಭವನ ನಿರ್ಮಾಣಕ್ಕಾಗಿ ರು. 2 ಲಕ್ಷ ಬಿಡುಗಡೆ ಮಾಡಲಾಗಿದೆ. ಅಲ್ಲದೇ ಮುಂಬರುವ ದಿನಗಳಲ್ಲಿ ಈ ಕಾಮಗಾರಿ ನಿರ್ಮಾಣದಲ್ಲಿ ಹಣಕಾಸಿನ ತೊಂದರೆಯಾದಲ್ಲಿ ಹೆಚ್ಚಿನ ಹಣವನ್ನೂ ಬಿಡುಗಡೆ ಮಾಡಲಾಗುವುದು. ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಆಹಾರ ಭದ್ರತಾ ಕಾಯ್ದೆಯಿಂದ ಬಡವರಿಗೆ ಹಾಗೂ ದಿನದಲಿತರಿಗೂ ಆಹಾರ ಭಾಗ್ಯ ಸಿಗಲಿದೆ. ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಯಿಂದ ಪ್ರತಿತಿಂಗಳು 10ನೇ ತಾರೀಖಿನೊಳಗೆ ಪಡಿತರ ಚೀಟಿ ಹೊಂದಿದವರಿಗೆ ಪಡಿತರ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಮತ್ತು ನಾರಾಯಣಪುರ ಗ್ರಾಮದ ಜನತೆ ಪಡಿತರವನ್ನು ತರಲು ನೆರೆಯ ಕೋಟುಮಚಗಿ ಗ್ರಾಮಕ್ಕೆ ಹೋಗಬೇಕಾಗಿತ್ತು. ಆದರೆ, ಇನ್ನು ಮುಂದೆ ಇಲ್ಲಿನ ಜನತೆಗೆ ಇಲ್ಲಿಯೇ ಪಡಿತರ ವಿತರಿಸಲಾಗುವುದು ಎಂದರು. ಸ್ವಸಹಾಯ ಸಂಘಗಳ ಸದಸ್ಯರು ಕೆಸಿಸಿ ಬ್ಯಾಂಕ್ನಲ್ಲಿ ಸ್ವಸಹಾಯ ಸಂಘಗಳಿಗೆ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಸದಸ್ಯರು ಬ್ಯಾಂಕ್ಗಳಲ್ಲಿ ಮಾಹಿತಿ ಪಡೆದುಕೊಂಡು ಇದರ ಪ್ರಯೋಜನ ಪಡೆಯಬೇಕು. ಇದೇ ರೀತಿ ರೈತರಿಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಲಾಗುತ್ತಿದೆ. ವಿದ್ಯಾರ್ಥಿಗಳಿಗೂ ವಿವಿಧ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಅವುಗಳ ಮಾಹಿತಿ ತಿಳಿದು ಯೋಜನೆಗಳ ಉಪಯೋಗ ಪಡೆದುಕೊಂಡಲ್ಲಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗೆ ಸಾರ್ಥಕತೆ ಸಿಗುವುದು ಎಂದರು.
ಮಡಿವಾಳಯ್ಯ ಹಿರೇಮಠ, ಕುಮಾರಸ್ವಾಮಿ ಬಳಿಗೇರಮಠ, ಮಾರ್ತಾಂಡಪ್ಪ ಗಡಗಿ, ತಾಪಂ ಸದಸ್ಯೆ ಲಲಿತಾ ಅಣ್ಣಿಗೇರಿ, ಗ್ರಾಪಂ ಸದಸ್ಯ ಪಾಲಾಕ್ಷಯ್ಯ ಬಳಿಗೇರಮಠ, ರಾಜೇಸಾಬ್ ನದಾಫ್, ಬಾಳನಗೌಡ ಮಾಲಿಪಾಟೀಲ, ಗೌರವ್ವ ದೊಡ್ಡಮನಿ, ದೇವಪ್ಪ ದೊಡ್ಡಮನಿ, ಮಾರುತಿ ಪೂಜಾರ, ವೀರಪ್ಪ ಪೂಜಾರ, ರ್ಯಾವಪ್ಪ ದೊಡ್ಡಮನಿ ಇದ್ದರು.