ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವ್ಯಾಪಾರಸ್ಥರಿಂದ ಕಾರ್ಮಿಕರಿಗೆ ಅಗೌರವ: ಪ್ರತಿಭಟನೆ

Mainashree
Updated On : 7 Feb 2014, 10:22 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಫೆ. 6
ರಾಜಸ್ತಾನ ಮೂಲದ ಶ್ರೀಮಂತ ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವ ಪಟ್ಟಣದ ಕಾರ್ಮಿಕರಿಗೆ ಗೌರವ ನೀಡದೆ ಅವರನ್ನು ಕೀಳು ಮಟ್ಟದಿಂದ ಕಾಣುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ)ಬಣದ ಕಾರ್ಯಕರ್ತರು ಗುರುವಾರ ಕೆ.ಕೆ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರವೇ ಜಿಲ್ಲಾ ಉಪಾಧ್ಯಕ್ಷ ಕಳಕಪ್ಪ ಜಾಡಬಂದಿ ಮಾತನಾಡಿ, ವ್ಯಾಪಾರಕ್ಕಾಗಿ ರಾಜಸ್ಥಾನದಿಂದ ಬಂದಿರುವ ವ್ಯಾಪಾರಿಗಳು ಇಲ್ಲಿ ವಿವಿಧ ವ್ಯಾಪಾರಗಳಲ್ಲಿ ತೊಡಗಿದ್ದಾರೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ, ಅದು ಅವರ ಹಕ್ಕು. ಆದರೆ, ಸ್ಥಳೀಯ ವ್ಯಾಪಾರಸ್ಥರ ಜತೆ ಸೌಹಾರ್ದತೆಯಿಂದ ನಡೆದುಕೊಂಡು ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ಗೌರವಿತವಾಗಿ ವರ್ತಿಸಿ ವ್ಯಾಪಾರ ವಹಿವಾಟು ನಡೆಸುವ ಬದಲು ಶ್ರೀಮಂತಿಕೆಯ ದರ್ಪದಿಂದ ನಡೆದುಕೊಂಡಿರುವುದನ್ನು ಕರವೇ ಖಂಡಿಸುತ್ತದೆ.
ಈ ಕೂಡಲೇ ರಾಜಸ್ಥಾನ ವ್ಯಾಪಾರಸ್ಥರು ತಮ್ಮ ನಡುವಳಿಕೆ ಬದಲಾಯಿಸಿಕೊಂಡು ಸ್ಥಳೀಯರ ಜತೆ ಸಹಕಾರದಿಂದ ತಮ್ಮ ವ್ಯಾಪಾರ ವಹಿವಾಟು ನಡೆಸದಿದ್ದಲ್ಲಿ ಸಂಘಟನೆಯಿಂದ ಉಗ್ರ ಪ್ರತಿಭಟನೆ ಜತೆ ಅವರನ್ನು ಗಡಿಪಾರು ಮಾಡುವವರೆಗೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಇದಕ್ಕೂ ಮುನ್ನ ಬಸವೇಶ್ವರ ಸರ್ಕಲ್, ದುರ್ಗಾ ವೃತ್ತ, ಜೋಡು ವೃತ್ತ, ಮೂಲಕ ಕೆ.ಕೆ ಸರ್ಕಲ್‌ನಲ್ಲಿ ಮಾನವ ಸರಪಳಿ ರಚಿಸಿ ರಾಜಸ್ಥಾನ ವ್ಯಾಪಾರಿಗಳ ವಿರುದ್ಧ ಘೋಷಣೆ ಕೂಗಿದರು. ಬಳಿಕ ವಿಶೇಷ ತಹಸೀಲ್ದಾರ್ ಕಾರ್ಯಾಲಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.
ಶರಣಪ್ಪ ಪೂಜಾರ, ಅಲ್ಲಾಭಕ್ಷಿ ಮುಚ್ಚಾಲಿ, ರವಿ ಗಡೇದವರ, ಉಮೇಶ್ ರಾಠೋಡ, ಮುತ್ತಣ್ಣ ಲಕ್ಕಲಕಟ್ಟಿ, ಮೆಹಬೂಬಸಾಬ್ ತಾಳಿಕೋಟಿ, ಶಿವು ಮಾಳೇಕೊಪ್ಪ, ಬಸವರಾಜ ಅಂಗಡಿ, ಸಂತೋಷ ಮಲ್ಲಾಪುರ, ಬುಡ್ಡಾ ಊಟಗೂರ, ಮೌಲಾ ದೊಡ್ಡಮನಿ, ಮಾರುತಿ ಬೆಟಗೇರಿ, ನಾಗೂಸಾ ರಂಗ್ರೇಜಿ, ರಾಘು ಪವಾರ, ಮುತ್ತು ನಾಗರಸಕೊಪ್ಪ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement