11ರಿಂದ 14ರ ವರೆಗೆ ಬೊಮ್ಮಸಾಗರಜಾತ್ರೆ: ಶಾಸಕ ಜಿ.ಎಸ್. ಪಾಟೀಲ
ಕನ್ನಡಪ್ರಭ ವಾರ್ತೆ, ರೋಣ, ಫೆ. 7
ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿರುವ ತಾಲೂಕಿನ ಬೊಮ್ಮಸಾಗರ ದುರ್ಗಾದೇವಿ ಜಾತ್ರೆ ಫೆ. 11ರಿಂದ 14ರ ವರೆಗೆ ನಡೆಯಲಿದೆ. ವಿವಿಧ ಭಾಗಳಿಂದ ಲಕ್ಷಾಂತರ ಜನ ಆಗಮಿಸುವುದರಿಂದ ಭಕ್ತಾದಿಗಳಿಗೆ ಕುಡಿಯುವ ನೀರು, ವಿದ್ಯುತ್, ಸಾರಿಗೆ, ಆರೋಗ್ಯ ಸೇರಿದಂತೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ತಾಲೂಕು ಆಡಳಿತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಗುರುವಾರ ತಾಲೂಕಿನ ಬೊಮ್ಮಸಾಗರ ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಶಾಂತಗೇರಿ, ಸರ್ಜಾಪುರ, ಬೊಮ್ಮಸಾಗರ ಗ್ರಾಮದ ಮುಖಂಡರ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಜಾತ್ರಾ ಮಹೋತ್ಸವದ ವೇಳೆ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಏರ್ಪಡಿಸಲು ಪೊಲೀಸ್ ಇಲಾಖೆ ಜಿಲ್ಲಾ ಕೇಂದ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಬೇಕು. ಜಾತ್ರೆ ನಿಮಿತ್ತ 3 ದಿನಗಳ ಕಾಲ ದೂರದ ಊರಿನಿಂದ ಬರುವವರಿಗೆ ವಾಸ್ತವ್ಯಕ್ಕೆ ಅಗತ್ಯ ಸ್ಥಳ ಕಲ್ಪಿಸಬೇಕು. ಆರೋಗ್ಯ ಇಲಾಖೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಜಾತ್ರೆಯು ವ್ಯವಸ್ಥಿತವಾಗಿ ನಡೆಯುವಲ್ಲಿ ತಾಲೂಕು ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ತಹಸೀಲ್ದಾರ್ ಎ.ಜೆ. ಪಂಡಿತ ಮಾತನಾಡಿ, ಫೆ. 11ರಿಂದ 14ರ ವರೆಗೆ ನಡೆಯಲಿರುವ ಬೊಮ್ಮಸಾಗರ ಗ್ರಾಮದೇವತೆ ದುರ್ಗಾದೇವಿ ಜಾತ್ರೆಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ತಾಲೂಕು ಆಡಳಿತ ಮುಂಜಾಗ್ರತಾ ಕ್ರಮ ಅನುಸರಿಸಲಿದೆ. ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ತಾಪಂ ಅಧ್ಯಕ್ಷೆ ತಿಪ್ಪವ್ವ ದೊಡ್ಡಮನಿ, ಹೊಳೆಆಲೂರು ಕಾಂಗ್ರೆಸ್ ಕಮಿಟಿ ಅಧ್ಯಕ್ಷ ದಶರಥ ಗಾಣಿಗೇರ, ವಿ.ಆರ್. ಗುಡಿಸಾಗರ, ಜಿಪಂ ಎಇಇ ಕಟ್ಟಿಮನಿ, ಅಬಕಾರಿ ಇಲಾಖೆ ಎ.ಬಿ. ಮಠಪತಿ, ಸಿಪಿಐ ವೆಂಕಟಪ್ಪ ನಾಯಕ, ಪಿಎಸ್‌ಐ ಡಿ.ಬಿ. ಪಾಟೀಲ, ಅರಣ್ಯ ಇಲಾಖೆಯ ಕೆ.ಎಸ್. ಬೀಳಗಿ ಸೇರಿದಂತೆ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಲಪ್ಪ ಮಾದರ ಸ್ವಾಗತಿಸಿದರು. ಎಸ್.ಬಿ. ಕೊಪ್ಪದ ನಿರೂಪಿಸಿದರು. ದಾವಲ್ ವಂದಿಸಿದರು.