ಇಂದಿನಿಂದ ಗದಗ ಆಧ್ಯಾತ್ಮಿಕ ಸಂಸ್ಕೃತಿ ಉತ್ಸವ
ಕನ್ನಡಪ್ರಭ ವಾರ್ತೆ, ಗದಗ, ಫೆ. 7
ಫೆ. 8ರಿಂದ 11ರ ವರೆಗೆ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಗದಗ ಆಧ್ಯಾತ್ಮಿಕ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ವಾದಿರಾಜ ಭಟ್ ಹೇಳಿದರು.
ಶುಕ್ರವಾರ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ನಗರದಲ್ಲಿ ಸುಮಾರು 30 ವರ್ಷಗಳಿಂದ ಯಾವುದೇ ಜಾತಿ, ಮತ, ವರ್ಗ ವರ್ಣಭೇದವಿಲ್ಲದೆ ನಿಸ್ವಾರ್ಥವಾಗಿ ಆಧ್ಯಾತ್ಮಿಕ ಶಿಕ್ಷಣ, ತರಬೇತಿ ಮೊದಲಾದ ಸಾಂಸ್ಕೃತಿಕ ಚಟುವಟಿಕೆ ಮಾಡುತ್ತಿದೆ.
ಈಶ್ವರೀಯ ವಿಶ್ವವಿದ್ಯಾಲಯ 1976ರಲ್ಲಿ ಪ್ರಾರಂಭವಾಗಿ ಇಂದು 130 ರಾಷ್ಟ್ರಗಳಲ್ಲಿ 9500ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ಫೆ. 8ರಿಂದ 11ರ ವರೆಗೆ ನಗರದಲ್ಲಿ ಗದಗ ಆಧ್ಯಾತ್ಮಿಕ ಸಂಸ್ಕೃತಿ ಉತ್ಸವವನ್ನು ನಗರದಲ್ಲಿ ಪ್ರಥಮ ಬಾರಿಗೆ ಆಯೋಜಿಸಿದೆ ಎಂದು ಹೇಳಿದರು.
ಫೆ. 8ರಂದು ಸಂಜೆ 6ಕ್ಕೆ ಜರಗುವ ಸಾಂಸ್ಕೃತಿಕ ಉತ್ಸವದ ಸಾನ್ನಿಧ್ಯವನ್ನು ಹುಬ್ಬಳ್ಳಿಯ ಈಶ್ವರೀಯ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಬಿ.ಕೆ. ಬಸವರಾಜ ರಾಜಋಷಿಗಳು ವಹಿಸುವರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ದುಶ್ಚಟ ಮುಕ್ತಜೀವನ ಶಿಬಿರವನ್ನು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಉದ್ಘಾಟಿಸುವರು. ಎಸ್ಪಿ ಡಾ. ಎಸ್.ಡಿ. ಶರಣಪ್ಪ ಹಾಗೂ ಗದಗ-ಬೆಟಗೇರಿ ನಗರಸಭೆ ಸದಸ್ಯರು ಭಾಗವಹಿಸುವರು.
9ರಂದು 5.30ಕ್ಕೆ ಆಧ್ಯಾತ್ಮ ಮತ್ತು ನೃತ್ಯ ವೈಭವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ ಉದ್ಘಾಟಿಸುವರು. ಕಸಾಪ ಕಾರ್ಯದರ್ಶಿ ಶರಣು ಗೋಗೇರಿ, ಕಲಾವಿದರಾದ ಶಫೀ ಮಹ್ಮದ ನವಲಗುಂದ, ಬೆಂಗಳೂರಿನ ಬಿ.ಕೆ. ಗಣೇಶ, ಬಿ.ಕೆ. ವೆಂಕಟೇಶ ಭಾಗವಹಿಸುವರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಕಲಾವಿದ ಡಾ. ಆರ್.ಟಿ. ರಮಾ, ಹೇಮಾ ಪ್ರಸಾದ್, ಉಷಾ ದಾತಾರ್ ಅಲ್ಲದೇ ನಗರದ ರಾಜೇಶ್ವರಿ ಕಲಾಕುಟೀರದ ಕಲಾವಿದರಿಂದ ನೃತ್ಯರೂಪಕ ಪ್ರದರ್ಶನ ಜರುಗಲಿದೆ.
ಫೆ. 10ರಂದು ಸಂಜೆ 6ಕ್ಕೆ ಆಧ್ಯಾತ್ಮ ಮತ್ತು ಉನ್ನತ ಪರಿವರ್ತನೆ ಕಾರ್ಯಕ್ರಮ ಜರುಗಲಿದ್ದು, ಬಿ.ಕೆ. ಜಯಂತಿ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ಬಿ.ಕೆ. ಪಂಚಮ್ ಸಿಂಗ್ ಚಂಬಲ್ ಕಣಿವೆಯಲ್ಲಿ ಡಾಕೂ ಆಗಿದ್ದೆ ಎಂಬ ರೋಮಾಂಚನಕಾರಿ ಅನುಭವವನ್ನು ಹಂಚಿಕೊಳ್ಳಲಿದ್ದಾರೆ.
ಫೆ. 11ರಂದು ಸಂಜೆ 6ಕ್ಕೆ ಆಧ್ಯಾತ್ಮ ಜ್ಞಾನದಿಂದ ಸದ್ಭಾವನಾ ಬೆಳಕು ಕುರಿತು ಸರ್ವಧರ್ಮ ಸಮನ್ವಯ ಸಮ್ಮೇಳನ ಜರುಗಲಿದ್ದು, ಅಭಿನವ ಒಪ್ಪತ್ತೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸುವರು. ಮಾಜಿ ಶಾಸಕ ಡಿ.ಆರ್. ಪಾಟೀಲ ಉದ್ಘಾಟಿಸುವರು. ಜಿಪಂ ಅಧ್ಯಕ್ಷೆ ಕಮಲವ್ವ ಸಜ್ಜನರ ಅಧ್ಯಕ್ಷತೆ ವಹಿಸುವರು. ನಂತರ ಸ್ಥಳೀಯ ಸದ್ಭಾವನಾ ಚೇತನ ಮೌಲಾನಾ ಇನಾಯತುಲ್ಲಾ ಫೀರ್ಜಾದೆ, ಎಫ್.ಆರ್. ಲೂರ್ದೆ, ಗೌತಮ್ ಜೈನ್ ವಿಶೇಷ ಪ್ರವಚನ ನೀಡಲಿದ್ದಾರೆ.
ಅತಿಥಿಗಳಾಗಿ ತಾಪಂ ಅಧ್ಯಕ್ಷ ಹನುಮಪ್ಪ ಇಂಗಳಳ್ಳಿ, ಉಪಾಧ್ಯಕ್ಷೆ ಪ್ರತಿಭಾ ಶಿದ್ರಾಮಣ್ಣವರ, ರಾಮದಾಸ ಬಾಲಾಜಿ, ನಗರಸಭೆ ಕಾಲೇಜಿನ ಪ್ರಾಚಾರ್ಯ ಪ್ರೊ. ವೆಂಕಟೇಶ ಕಟ್ಟಿಮನಿ ಸೇರಿದಂತೆ ಗದಗ ತಾಲೂಕಿನ 25 ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಗದಗ-ಧಾರವಾಡ ಜಿಲ್ಲೆಯ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಜಯಂತಿ ಉಪಸ್ಥಿತರಿದ್ದರು.