ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮನವಿಗೆ ಸ್ಪಂದಿಸಿದ ಸದಸ್ಯರು: ಧರಣಿ ವಾಪಸ್

Vishwanath S
Updated On : 8 Feb 2014, 12:45 pm

ಕನ್ನಡಪ್ರಭ ವಾರ್ತೆ, ನರೇಗಲ್ಲ, ಫೆ. 7
ನರೇಗಲ್ಲ ಪಪಂನ ಬಿಜೆಪಿಯ 8 ಸದಸ್ಯರು ಹಾಗೂ ಮುಖಂಡರು ಫೆ. 3ರ ಸೋಮವಾರ ಬೆಳಗಿನಿಂದ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಧರಣಿ ಪ್ರಾರಂಭಿಸಿದ್ದರು. ಆದರೆ ಸರಿಯಾದ ಮಾಹಿತಿ ದೊರಕದ ಹಾಗೂ ಸಮನ್ವಯದ ಕೊರತೆಯಿಂದ ಧರಣಿ 5ನೇ ದಿನಕ್ಕೆ ಕಾಲಿಟ್ಟಿತ್ತು. ಶುಕ್ರವಾರ ಸ್ಥಳೀಯ ಹಿರಿಯ ನ್ಯಾಯವಾದಿ ಕೆ.ಜಿ. ಉಡುಪಿಯವರ ಸಂಧಾನದ ಪ್ರಯುಕ್ತ ಬಿಜೆಪಿ ಸದಸ್ಯರು ತಮ್ಮ ಧರಣಿಯನ್ನು ವಾಪಸ್ ಪಡೆದರು.
ಪಟ್ಟಣ ಪಂಚಾಯಿತಿಯ ಸಭಾಭವನದಲ್ಲಿ ನ್ಯಾಯವಾದಿ ಉಡುಪಿ ಸಂಜೆ 4ರಿಂದ ಎರಡೂ ಪಕ್ಷಗಳ ಸದಸ್ಯರನ್ನು ಸೇರಿಸಿ ಸಮಸ್ಯೆಯನ್ನು ಕೂಲಂಕಷವಾಗಿ ಚರ್ಚಿಸಿದರು. ಎಲ್ಲ ಸದಸ್ಯರಿಗೂ ಸರಿಯಾದ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸಿದರು.  
ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರಿಗೂ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ನಡೆಸಿ ಎಂದು ತಿಳಿಸಿದರು. ನಂತರ ಪಟ್ಟಣ ಪಂಚಾಯಿತಿ ಹೊರಗಡೆ ಧರಣಿನಿರತರೊಂದಿಗೆ ಸಂಧಾನ ನಡೆಸಿ ಧರಣಿಯನ್ನು ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.
ರೋಣ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಪಂ ಸದಸ್ಯ ಶಶಿಧರ ಸಂಕನಗೌಡ ಮಾತನಾಡಿ, ನಗರದ ಹಾಗೂ ಮಜರೆ ಹಳ್ಳಿಗಳ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ದೂರು ಬಂದ ತಕ್ಷಣ ಸರಿಪಡಿಸಬೇಕು. ಇಲ್ಲವಾದರೆ ಸಾರ್ವಜನಿಕರೇ ಪಪಂಗೆ ಬೀಗ ಜಡಿಯುತ್ತಾರೆ. ಸಾರ್ವಜನಿಕರು ಹಾಗೂ ವಾರ್ಡ್ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಬಗೆಹರಿಸಿ ಎಂದು ತಿಳಿಸಿದರು. ಇದಕ್ಕೆ ಎಲ್ಲ ಸದಸ್ಯರು ಅಭಿವೃದ್ಧಿಗೆ ಶ್ರಮಿಸುವುದಾಗಿ ಭರವಸೆ ನೀಡಿ, ಧರಣಿ ಹಿಂಪಡೆದರು.
ಈ ಸಂದರ್ಭದಲ್ಲಿ ಅಧ್ಯಕ್ಷೆ ಬಸಮ್ಮ ಲಕ್ಕನಗೌಡ್ರ, ಉಪಾಧ್ಯಕ್ಷೆ ಅನ್ನಪೂರ್ಣಾ ಗಿಂಡಿ, ಸುನೀಲ ಬಸವರಡ್ಡೇರ, ರಮೇಶ ಕಳಕೊಣ್ಣವರ, ಕಲ್ಮೇಶ ತೊಂಡಿಹಾಳ, ಖಾದಿರಬಾಷಾ ಹೂಲಗೇರಿ, ಜಯಶ್ರೀ ನಾಸಿಪುಡಿ, ಯಲ್ಲಮ್ಮ ಗಿಂಡಿ ಹಾಗೂ ಇನ್ನಿತರ ಸದಸ್ಯರು ಪಾಲ್ಗೊಂಡಿದ್ದರು. ಬಿಜೆಪಿಯ ಶಶಿಧರ ಸಂಕನಗೌಡ್ರ, ವರುಣ ಸಂಗನಾಳ, ಅಂದಪ್ಪ ಮಡಿವಾಳರ, ಯಲ್ಲಪ್ಪ ಮಣ್ಣೊಡ್ಡರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಉಮೇಶ ಸಂಗನಾಳಮಠ, ನಿಂಗಪ್ಪ ಕಣವಿ, ಬಸವರಾಜ ಕೊಟಗಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement