ಲಕ್ಷ್ಮೇಶ್ವರ ಮುಖ್ಯಾಧಿಕಾರಿ ಅಮಾನತಿಗೆ ಕರವೇ ಆಗ್ರಹ
ನರಗುಂದ: ಲಕ್ಷ್ಮೇಶ್ವರ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಉಮೇಶ ಗುಡ್ಡದ ಗಣರಾಜ್ಯೋತ್ಸವದಂದು ಪುರಸಭೆ ಆವರಣದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದರೂ ಅವರ ಮೇಲೆ ಜಿಲ್ಲಾಧಿಕಾರಿ ಕ್ರಮ ಜರಗಿಸದೇ ಇರುವುದು ಖಂಡನಾರ್ಹ. ಈ ಕುರಿತು ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಂಡು ಮುಖ್ಯಾಧಿಕಾರಿಯನ್ನು ಕೂಡಲೇ ಅಮಾನತು ಮಾಡುವಂತೆ ನರಗುಂದ ತಾಲೂಕು ಕರವೇ ಕಾರ್ಯರರ್ತರು ಈಚೆಗೆ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ತಾಲೂಕು ಕರವೇ ಅಧ್ಯಕ್ಷ ಎಚ್.ಎಚ್. ಮಜ್ಜಗುಡ್ಡ ಮಾತನಾಡಿ, ಗಣರಾಜ್ಯೋತ್ಸವದಂದು ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರದ ಪುರಸಭೆ ಆವರಣದಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗೆ ಮಾಡಿ ಹಾರಿಸಲಾಗಿದೆ. ಹೀಗಾಗಿ, ಜಿಲ್ಲಾಧಿಕಾರಿ ಪುರಸಭೆ ಮುಖ್ಯಾಧಿಕಾರಿ ಉಮೇಶ ಗುಡ್ಡದ ಅವರನ್ನು 7 ದಿನಗಳೊಳಗೆ ಅಮಾನತು ಮಾಡಬೇಕು. ಒಂದು ವೇಳೆ ವಿಳಂಬ ಮಾಡಿದಲ್ಲಿ ಕರವೇ ಸಂಘಟಣೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದರು. ಗೌರವಾಧ್ಯಕ್ಷ ಶ್ರೀನಿವಾಸ ಬೋನಗೇರಿ, ಪ್ರಧಾನ ಕಾರ್ಯದರ್ಶಿ ರವಿ ಚಿಂತಾಲ, ಎಂ.ಬಿ. ಕಳಸ, ಬಸು ಪೂಜಾರ, ಹನುಮಂತ ಬಾಗಲೆ, ಮಂಜು ಪಾಟೀಲ, ಅಕ್ಷಯ ಯಡಹಳ್ಳಿ, ವಿ.ಪಿ. ಜೋಗಿ, ಸಿ.ಬಿ. ಸರಕಣ್ಣವರ, ಎಸ್.ಎಸ್. ಹಾದಿಮನಿ, ಎ.ಎಸ್. ಕರಸಪ್ಪನವರ, ರಾಕೇಶ ಕಾಳೆ, ಬಿ.ಎಂ. ಸಂಡೂರು ಮುಂತಾದವರಿದ್ದರು.