ಶಿರಹಟ್ಟಿ ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಶಿರಹಟ್ಟಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಫೆ. 8
ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಫೆ. 19ರಂದು ನಡೆಯಲಿರುವ 3ನೇ ಶಿರಹಟ್ಟಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ದೂರದರ್ಶನದ ಹಾಗೂ ಆಕಾಶವಾಣಿಯ ನಿವೃತ್ತ ನಿರ್ದೇಶಕರು, ಸಾಹಿತಿಗಳು, ಬರಹಗಾರರು, ವಿದ್ವಾಂಸರು ಆದ ಜಿ.ಎಂ. ಶಿರಹಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.
ಶುಕ್ರವಾರ ಸಂಜೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸಮ್ಮೇಳನದ ಸ್ವಾಗತ ಸಮಿತಿ ಹಾಗೂ ಪರಿಷತ್ತಿನ ಕಾರ್ಯಕಾರಿ ಮಂಡಳಿಯಲ್ಲಿ ಚರ್ಚಿಸಿ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಶಿವಪ್ಪ ಕುರಿ ಅವರು ಜಿ.ಎಂ. ಶಿರಹಟ್ಟಿ ಅವರನ್ನು ಸಮ್ಮೇನದ ಅಧ್ಯಕ್ಷರಾಗಿ ಆಯ್ಕೆ ಮಾಡಿರುವ ಕುರಿತು ಹಾಗೂ ಸಾಹಿತಿ ಡಾ. ಎಂ. ಮೋಹನ್ ಆಳ್ವ ಅವರು ಸಮ್ಮೇಳನ ಉದ್ಘಾಟಿಸುವರು ಎಂದು ತಿಳಿಸಿದರು.
ಸ್ವಾಗತ ಸಮಿತಿ ಅಧ್ಯಕ್ಷರಾದ ಶಾಸಕ ರಾಮಕೃಷ್ಣ ದೊಡ್ಡಮನಿ ಸಮ್ಮೇಳನದ ಲಾಂಛನ ಬಿಡುಗಡೆಗೊಳಿಸಿ ಮಾತನಾಡಿ, ತಾಲೂಕು ದರ್ಶನ ಗೋಷ್ಠಿ, ಸಂಕೀರ್ಣ ಗೋಷ್ಠಿ ಹಾಗೂ ಕವಿಗೋಷ್ಠಿ ಸೇರಿದಂತೆ 3 ಗೋಷ್ಠಿಗಳು ನಡೆಯಲಿದ್ದು, ರಾಜ್ಯ, ಜಿಲ್ಲೆ ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಗ್ರಾಮೀಣ ಕಲಾ ತಂಡಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದೆಂದರು.
ಅರ್ಥಪೂರ್ಣವಾಗಿ, ವ್ಯವಸ್ಥಿತವಾಗಿ ಸಮ್ಮೇಳನ ನಡೆಸುವ ಕುರಿತು ಎಲ್ಲ ರೂಪುರೇಷೆ ಹಮ್ಮಿಕೊಳ್ಳಲಾಗಿದ್ದು, ಎಲ್ಲ ಸಾಹಿತ್ಯಾಸಕ್ತರ ವಿಶ್ವಾಸದೊಂದಿಗೆ ಉಳಿದೆಲ್ಲ ವ್ಯವಸ್ಥೆಯನ್ನು ತುಂಬಾ ಅಚ್ಚುಕಟ್ಟಾಗಿ ನೆರವೇರಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಸ್ವಪ್ರೇರಣೆಯಿಂದ ಸಮ್ಮೇಳನ ಯಶಸ್ವಿಗೆ ಶ್ರಮಿಸಬೇಕು ಎಂದರು.
ಕಸಾಪ ತಾಲೂಕಾಧ್ಯಕ್ಷ ಕೆ.ಎ. ಬಳಿಗೇರ, ಎನ್.ಆರ್. ಕುಲಕರ್ಣಿ, ವೈ.ಎಸ್. ಪಾಟೀಲ, ಯು.ಎನ್. ಹೊಳಲಾಪುರ, ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ್, ಮಹೇಂದ್ರ ಮುಂಡವಾಡ, ಪಪಂ ಸದಸ್ಯ ಹುಮಾಯೂನ ಮಾಗಡಿ, ಎಂ.ಕೆ. ಲಮಾಣಿ, ಕಸಾಪ ಗೌರವ ಕಾರ್ಯದರ್ಶಿ ಗಿರೀಶ ಕೋಡಬಾಳ, ಡಿ.ಎಚ್. ಮಲ್ಲೇಶ, ಶಿವಣ್ಣ ಹಾವೇರಿ ಇತರರಿದ್ದರು.
ಶಿರಹಟ್ಟಿ ತಾಲೂಕು ದರ್ಶನ ಗೋಷ್ಠಿ, ಸಂಕೀರ್ಣ ಗೋಷ್ಠಿ ಹಾಗೂ ಕವಿಗೋಷ್ಠಿ ಸೇರಿದಂತೆ 3 ಗೋಷ್ಠಿಗಳು ನಡೆಯಲಿದ್ದು, ರಾಜ್ಯ, ಜಿಲ್ಲೆ ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಗ್ರಾಮೀಣ ಕಲಾ ತಂಡಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಅರ್ಥಪೂರ್ಣವಾಗಿ, ವ್ಯವಸ್ಥಿತವಾಗಿ ಸಮ್ಮೇಳನ ನಡೆಸುವ ಕುರಿತು ಎಲ್ಲ ರೂಪುರೇಷೆ ಹಮ್ಮಿಕೊಳ್ಳಲಾಗಿದ್ದು, ಎಲ್ಲ ಸಾಹಿತ್ಯಾಸಕ್ತರ ವಿಶ್ವಾಸದೊಂದಿಗೆ ಉಳಿದೆಲ್ಲ ವ್ಯವಸ್ಥೆಯನ್ನು ತುಂಬಾ ಅಚ್ಚುಕಟ್ಟಾಗಿ ನೆರವೇರಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಸ್ವಪ್ರೇರಣೆಯಿಂದ ಸಮ್ಮೇಳನ ಯಶಸ್ವಿಗೆ ಶ್ರಮಿಸಬೇಕು.
- ರಾಮಕೃಷ್ಣ ದೊಡ್ಡಮನಿ, ಶಾಸಕ, ಸಮ್ಮೇಳನ ಸ್ವಾಗತಸಮಿತಿ ಅಧ್ಯಕ್ಷ