ಮುಂಡರಗಿ ಸರ್ಕಾರಿ ಕಾಲೇಜು ಬಡ ಮಕ್ಕಳಿಗೆ ದಾರಿದೀಪ
ಮುಂಡರಗಿ: ಮುಂಡರಗಿ ಪಟ್ಟಣ ಸೇರಿ ತಾಲೂಕಿನ ಎಲ್ಲ ಗ್ರಾಮಗಳ ಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಬಾಳಿಗೆ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಬೆಳಕನ್ನು ಮೂಡಿಸುವ ದೀಪವಾಗಿದೆ ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಹೇಳಿದರು.
ಶುಕ್ರವಾರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ, ಸರ್ಕಾರಿ ಪದವಿಪೂರ್ವ ಕಾಲೇಜು ಮುಂಡರಗಿ ಕಾಲೇಜಿನ 2013-14ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ನೆಸ್ಸೆಸ್ ಘಟಕ ಚಟುವಟಿಕೆ ಸಮಾರೋಪ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಮುನ್ನಡೆಯಬೇಕು. ಇಂದಿನ ಕಂಪ್ಯೂಟರ್ ಯುಗದಲ್ಲಿ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಿಗೂ ಮಾನ್ಯತೆ ನೀಡುವ ಮೂಲಕ ದೇಶಿ ಸಂಸ್ಕೃತಿಗಳಾದ ಕಲೆ, ಸಾಹಿತ್ಯ, ಸಂಗೀತ, ನಾಟಕ ಹಾಗೂ ಜನಪದ ಕಲೆ ಮತ್ತು ಜನಪದ ಆಟಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದರು.
ಹೇಮಂತಗೌಡ ಪಾಟೀಲ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ನಾನು ಕೇವಲ ಸರ್ಕಾರಿ ನೌಕರಿ ಸೇರುವುದಕ್ಕಾಗಿ ಮಾತ್ರ ಓದಬೇಕೆನ್ನುವ ವಿಚಾರ ಬಿಡಬೇಕು. ಕ್ರಿಯಾಶೀಲ ವ್ಯಕ್ತಿಗಳಿಗೆ ಸಾಕಷ್ಟು ಉದ್ಯೋಗಾವಕಾಶಗಳಿದ್ದು, ಯಾವುದಾದರೊಂದು ರಂಗದಲ್ಲಿ ಉತ್ತಮ ಹೆಸರು ಮಾಡಬಹುದು ಎಂದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ದೇವೇಂದ್ರಪ್ಪ ರಾಮೇನಹಳ್ಳಿ ಅಧ್ಯಕ್ಷತೆ ವವಹಿಸಿದ್ದರು.
ಈ ಸಂದರ್ಭ ಕಾಲೇಜಿನಿಂದ ದೆಹಲಿಯಲ್ಲಿ ಜ. 26ರಂದು ಜರುಗಿದ ಎನ್ಸಿಸಿ ಪರೇಡ್ನಲ್ಲಿ ಪಾಲ್ಗೊಂಡಿದ್ದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಕಿರಣ ಶಾನಭಾಗ, ಪ್ರೊ. ಎಂ.ಆರ್. ಚೂರಿ, ಈ.ವೈ. ಹಳ್ಳಿಕೇರಿ ಹಾಗೂ ಸೇವಾ ನಿವೃತ್ತಿ ಹೊಂದಿರುವ ಎಂ.ಬಿ. ಗದಗ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾಲೇಜು ಕಮಿಟಿ ಸದಸ್ಯರಾದ ಶಿವಪ್ಪ ಕುರಿ, ಅಶೋಕ ಹುಬ್ಬಳ್ಳಿ, ನಾಗರಾಜ ಹಾನಗಲ್, ವೀರಣ್ಣ ಡಂಬಳ, ದಿಲೀಪಕುಮಾರ ಬನ್ಸಾಲಿ, ಶಾಂತಾ ಕಾವಲದಂಡಿ, ಕೆ.ಎಸ್. ಹನುಮಂತರಾಯ ಉಪಸ್ಥಿತರಿದ್ದರು. ವಿ.ಎಂ. ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಸೀಮಾ ಗ್ರಾಮೋಪಾಧ್ಯಾಯ ವರದಿ ವಾಚಿಸಿದರು. ಪ್ರೊ. ಎಂ.ಎಂ. ಹೆಬ್ಬಾಳ ನಿರೂಪಿಸಿದರು. ಪಾಂಡು ಪರಪ್ಪನವರ ವಂದಿಸಿದರು.