ಸಹಕಾರಿ ತತ್ವ ಸೌಹಾರ್ದಯುತ ಬದುಕಿಗೆ ಸಹಕಾರಿ: ಪಾಟೀಲ
ಗಜೇಂದ್ರಗಡ: ಸಹಕಾರಿ ಸಂಘಗಳು ಗ್ರಾಹಕರ ಆರ್ಥಿಕ ಸ್ಥಿತಿ ಹೆಚ್ಚಿಸುವುದರ ಜೊತೆಗೆ ಸೌಹಾರ್ದಯುತ ಬದುಕಿಗೆ ಸಹಕಾರಿಯಾಗಿದೆ ಎಂದು ಕೆಸಿಸಿ ಬ್ಯಾಂಕ್ ಅಧ್ಯಕ್ಷ ಐ.ಎಸ್. ಪಾಟೀಲ ಹೇಳಿದರು.
ಸಮೀಪದ ಕುಂಟೋಜಿ ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಹಾಗೂ ಸಂಘದ ನೂತನ ಉಗ್ರಾಣ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಗ್ರಾಹಕರ ಅಭ್ಯುದಯವೇ ಮೂಲ ಮಂತ್ರ ಎನ್ನುವ ತತ್ವದಡಿ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸಿ ಸಾರಸ್ವತ ಲೋಕ ಜನರ ಅಭಿವೃದ್ಧಿ ಮಾದರಿಯಾಗಿಟ್ಟುಕೊಂಡು ಸೇವೆ ಸಲ್ಲಿಸುವ ಅಗತ್ಯವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಆರ್ಥಿಕ ಮುಗ್ಗಟ್ಟಿನಲ್ಲಿ ಸಿಲುಕಿರುವ ಸಮುದಾಯಗಳ ಕಲ್ಯಾಣವೇ ಸಹಕಾರಿ ಸಂಘಗಳ ಮೂಲ ಉದ್ದೇಶ ಈ ನಿಟ್ಟಿನಲ್ಲಿ ಸಹಕಾರಿ ಬಂಧುಗಳು ತಮ್ಮ ಅಗತ್ಯಗನುಗುಣವಾಗಿ ಸಾಲ ಪಡೆದು ನಿಗದಿತ ಸಮಯದಲ್ಲಿ ಮರು ಪಾವತಿಸಿದಾಗ ತಾವು ಹಾಗೂ ಸಂಸ್ಥೆ ಮುನ್ನಡೆಯಲು ಸಾಧ್ಯ ಎಂದರು. ಚಳಗೇರಿ ಹಿರೇಮಠದ ವೀರೂಪಾಕ್ಷಲಿಂಗ ಶಿವಾಚಾರ್ಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಶಾಂತವ್ವ ಮಾಳೋತ್ತರ, ಎನ್.ಕೆ. ಬೇವಿನಮರದ, ವಿ.ಆರ್. ಗುಡಿಸಾಗರ, ಅಶೋಕ ಬಾಗಮಾರ, ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ, ಗ್ರಾಪಂ ಮಾಜಿ ಅಧ್ಯಕ್ಷ ಮುದಿಯಪ್ಪ ಕರಡಿ, ಕಳಕಪ್ಪ ಡೊಳ್ಳಿನ, ಹನುಮವ್ವ ತಳವಾರ, ಅಕ್ಕವ್ವ ಕರಬಾಶೆಟ್ಟಿ, ದ್ರಾಕ್ಷಾಯಿಣಿ ಡೊಳ್ಳಿನ, ಕುಮಾರ ರಾಠೋಡ, ಅರ್ಜುನ ರಾಠೋಡ, ಭೀಮನಗೌಡ ಡೊಳ್ಳಿನ, ಕಳಕಪ್ಪ ಜೂಲಗುಡ್ಡ ಉಪಸ್ಥಿತರಿದ್ದರು.