ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

4 ವರ್ಷವಾದರೂ ಮುಗಿಯದ ಅಂಗನವಾಡಿ ಕಟ್ಟಡ

Rashmi Kasaragodu
Updated On : 11 Feb 2014, 11:33 am

 ಮಹದೇವಪ್ಪ ಎಂ. ಸ್ವಾಮಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಫೆ. 10
ಸುಮಾರು 500 ಜನಸಂಖ್ಯೆ ಹೊಂದಿದ ತಾಲೂಕಿನ ಛಬ್ಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡದಪುರ ತಾಂಡಾದಲ್ಲಿ 4 ವರ್ಷಗಳ ಹಿಂದೆಯೇ ಲಕ್ಷಾಂತರ ಅನುದಾನ ಬಳಸಿಕೊಂಡು ಅಂಗನವಾಡಿ ಕಟ್ಟಡ ಕಾಮಗಾರಿ ಪ್ರಾರಂಭಿಸಿದ್ದು, ಅಪೂರ್ಣಗೊಂಡಿದೆ. ಕಾಮಗಾರಿ ಮುಗಿಯುವ ಮೊದಲೇ ಕಟ್ಟಡ ಸಂಪೂರ್ಣ ಬಿರುಕು ಬಿಟ್ಟಿದ್ದು, ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಲಕ್ಷಾಂತರ ಹಣ ದುರ್ಬಳಕೆಯಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.
ತಾಪಂ ಅನುದಾನದಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈ ಹಿಂದೆ ಇದ್ದ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ಅನುದಾನದ ಕೊರತೆಯಿಂದಾಗಿ ಸದ್ಯ ನಿರ್ಮಾಣಗೊಂಡ ಕಟ್ಟಡವೂ ಬಿರುಕು ಬಿಟ್ಟಿದೆ. ಈ ತಾಂಡಾದಲ್ಲಿ ಅಂಗನವಾಡಿ ಕೇಂದ್ರ ಪ್ರಾರಂಭವಾದಾಗಿನಿಂದಲೂ ತಗಡಿನ ಶೆಡ್ಡಿನಲ್ಲಿ ಮಕ್ಕಳನ್ನು ಕೂಡಿಸಿ ಪಾಠ ಕಲಿಸುವಂತಾಗಿದೆ.
ತಿಪ್ಪೇಗುಂಡಿ: ನೂತನ ಕಟ್ಟಡವನ್ನು ಹೊರಗಡೆಯಿಂದ ನೋಡಿದರೆ ಕಾಮಗಾರಿ ಮುಗಿದಂತೆ ಕಾಣಿಸುತ್ತದೆ. ಆದರೆ, ಕಟ್ಟಡದ ಸುತ್ತಲೂ ತಿಪ್ಪೆಗುಂಡಿ ಹಾಕಿದ್ದು, ಕೋಣೆಯೊ ಕಲ್ಲುಗಳು ಮತ್ತು ಕಸಕಡ್ಡಿ ಬಿದ್ದು ತುಂಬಿ ಅವ್ಯವಸ್ಥೆಯ ಆಗರವಾಗಿದೆ. ಇಂತಹ ಕಟ್ಟಡದಲ್ಲಿ ಕಲಿಕಾ ಪೂರ್ವ ಶಿಕ್ಷಣ ಪಡೆಯುವುದು ಹೇಗೆ ಸಾಧ್ಯ ಎಂದು ಗ್ರಾಮದ ಹೀರಪ್ಪ ಮಾನಪ್ಪ ಲಮಾಣಿ, ಮಂಗಲಪ್ಪ ಲಮಾಣಿ, ಗದ್ಯೆಪ್ಪ ಲಮಾಣಿ, ತಿಪ್ಪಣ್ಣ ಲಮಾಣಿ, ಹನುಮಂತಪ್ಪ ಕೋಳಿ, ಸೋಮಪ್ಪ ನಾಯಕ ಮತ್ತಿತರರು ಪ್ರಶ್ನಿಸುತ್ತಾರೆ.
ಅಂಗನವಾಡಿ ಕೇಂದ್ರಕ್ಕೆ ಸರ್ಕಾರ ಪೌಷ್ಟಿಕ ಆಹಾರ ವಿತರಿಸುತ್ತಿದ್ದು, ಧೂಳಿನಿಂದ ಕೂಡಿರುವ ಕೋಣೆಯಲ್ಲಿ (ತಗಡಿನ ಶೆಡ್ಡಿನಲ್ಲಿ) ಆಹಾರ ಸಾಮಗ್ರಿಗಳನ್ನು ಶೇಖರಣೆ ಮಾಡಲಾಗುತ್ತಿದೆ. ತಗಡಿನ ಶೆಡ್ಡಿನಲ್ಲಿ ಆಹಾರ ಸಾಮಗ್ರಿ ಸಂಗ್ರಹಿಸುವುದರಿಂದ ಅದು ಹಾಳಾಗುವ ಸಾಧ್ಯತೆ ಇರುತ್ತದೆ. ಇಂತಹ ಆಹಾರ ಪೂರೈಸುವುದು ಎಷ್ಟರಮಟ್ಟಿಗೆ ಸರಿ ಎನ್ನುವುದು ಗ್ರಾಮಸ್ಥರ ಪ್ರಶ್ನೆಯಾಗಿದೆ.



ಅನೇಕ ಬಾರಿ ಗುಡ್ಡದಪುರ ತಾಂಡಾಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಕಾಮಗಾರಿ ಕೈಗೆತ್ತಿಕೊಂಡ ಭೂಸೇನಾ ನಿಗಮದ ಅಧಿಕಾರಿಗಳಿಗೆ ಕಳೆದ 6 ತಿಂಗಳಿನಿಂದಲೂ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಂತೆ ಲಿಖಿತವಾಗಿ ಬರೆದು ಕೇಳಿಕೊಂಡರೂ ಸ್ಪಂದಿಸುತ್ತಿಲ್ಲ. ಸದ್ಯ ಅಂಗನವಾಡಿ ಮಕ್ಕಳಿಗೆ ತಗಡಿನ ಶೆಡ್ಡಿನಲ್ಲಿ ಪಾಠ ಹೇಳುತ್ತಿದ್ದು, ತೀವ್ರ ತೊಂದರೆಯಿರುವುದು ಗಮನಕ್ಕೆ ಬಂದಿದೆ. ಬಾಡಿಗೆದಾರರು ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಮತ್ತೊಮ್ಮೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು ತುರ್ತಾಗಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಲಾಗುವುದು.
- ಸರಸ್ವತಿ ಹೊನ್ನೇಗೌಡರ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ
ಗ್ರಾಮಸ್ಥರು ಅನೇಕ ಬಾರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಗ್ರಾಮದತ್ತ ತಿರುಗಿ ನೋಡಿಲ್ಲ. ಮಕ್ಕಳಿಗೆ ಹೊಂದಿಕೊಳ್ಳುವಂತೆ ಸೂಕ್ತ ರೀತಿಯಲ್ಲಿ ಯಾವುದೇ ಪ್ರಾಣಾಪಾಯವಾಗದಂತೆ ಹೊಸ ಕಟ್ಟಡ ಕಾಮಗಾರಿಗೆ ಮುಂದಾಗಿದ್ದು, ನೆನೆಗುದಿಗೆ ಬಿದ್ದಿದೆ. ನೂತನ ಕಟ್ಟಡ ಕಾಮಗಾರಿಯನ್ನು ತುರ್ತಾಗಿ ಮುಗಿಸಿ ಮಕ್ಕಳಿಗೆ ಶಿಕ್ಷಣ ನೀಡಲು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು.
- ದೀಪಕ್ ಲಮಾಣಿ ಗ್ರಾಪಂ ಸದಸ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement