ಗುಡಿಸಲಿಗೆ ಬೆಂಕಿ: ಅಪಾರ ಹಾನಿ
ಗಜೇಂದ್ರಗಡ: ಸಮೀಪದ ರಾಜೂರು ಗ್ರಾಮದ ಹೊರ ವಲಯದ ತೋಟವೊಂದರಲ್ಲಿನ ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದ ಘಟನೆ ನಡೆದಿದೆ. ಗ್ರಾಮದ ಮಲ್ಲಪ್ಪ ಗುಳಗುಳಿ ಎಂಬುವರ ತೋಟದಲ್ಲಿನ ಗುಡಿಸಲು ಬಳಿಯ ಮೇವಿನ ಬಣವೆಗೆ ಬೆಂಕಿ ಹೊತ್ತಿಕೊಂಡು ನಂತರ ಬೆಂಕಿಯ ಕೆನ್ನಾಲಿಗೆ ಗುಡಿಸಲಿಗೆ ಆವರಿಸಿದೆ. ಪರಿಣಾಮ ಗುಡಿಸಲಲ್ಲಿದ್ದ ಅಡುಗೆ ಸಾಮಗ್ರಿ, ಕೃಷಿ ಉಪಕರಣ, 45 ಶೇಂಗಾ ತುಂಬಿದ ಚೀಲ ಸೇರಿದಂತೆ ಇನ್ನಿತರ ಕೃಷಿ ಬಳಕೆ ಉಪಕರಣಗಳು ಬೆಂಕಿಗೆ ಸಿಲುಕಿ ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ರಜಾಕನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.