ಬಡವರ ಕೆಲಸ ಧರ್ಮದ ಕೆಲಸ: ಸಚಿವ ಎಚ್.ಕೆ. ಪಾಟೀಲ
ಗದಗ: ನಮ್ಮ ಸರ್ಕಾರ ಬಡವರ ಸರ್ಕಾರ. ಕಡು ಬಡುವರು, ಸಮಾಜದ ಕಟ್ಟ ಕಡೆಯ ಜನರನ್ನು ಗುರುತಿಸಿ ಮನೆಯ ಸ್ವಾಧೀನ ಪತ್ರವನ್ನು ನೀಡುವುದು ಅತ್ಯಂತ ಪವಿತ್ರವಾದ ಕೆಲಸ. ಇಂತಹವರನ್ನು ಗುರುತಿಸುವ ಕೆಲಸ ಮಾಡಬೇಕೆಂದು ನಗರಸಭೆ ಸದಸ್ಯರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಸ್ಥಳೀಯ ಕಾಟನ್ ಸೇಲ್ ಸೊಸೈಟಿಯಲ್ಲಿ ಭಾನುವಾರ ರಾಜಕೀಯ ಭೀಷ್ಮ ಕೆ.ಎಚ್. ಪಾಟೀಲರ 22ನೇ ಪುಣ್ಯಸ್ಮರಣೆ ಅಂಗವಾಗಿ ಲೆರ್ಪೋಸಿ (ಕುಷ್ಠರೋಗದ) ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.
ಈ ಭಾಗದ ಜನರು ಅತ್ಯಂತ ಹಿಂದುಳಿದ ಸಮುದಾಯದವರಾಗಿದ್ದು, ಸುಮಾರು 20 ವರ್ಷಗಳಿಂದ ಸ್ವಾಧೀನಪತ್ರವಿಲ್ಲದೇ ವಂಚಿತರಾಗಿದ್ದರು. ಇವರ ಬೇಡಿಕೆ ಇಂದು ಈಡೇರಿದೆ ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯೆ ಕಮಲಾ ಹಾದಿಮನಿ, ಕೃಷ್ಣಾ ಪರಾಪುರ, ರುದ್ರಮ್ಮ ಕೆರಕಲಮಟ್ಟಿ, ಪೊನ್ನಾಬಾಯಿ ಬಾಗಡೆ, ಅಮೃತಾ ಪಾಟೀಲ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ ಮಂದಾಲಿ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಕಡೇಮನಿ, ಮಾರ್ತಾಂಡಪ್ಪ ಹಾದಿಮನಿ, ಅಶೋಕ ಬೀಳಗಿ, ಶ್ರೀಕಾಂತ ಬಡಿಗೇರ ಹಾಗೂ ಫಲಾನುಭವಿಗಳಾದ ಗಂಗಮ್ಮ ಹುಬ್ಬಳ್ಳಿ, ಲಾಲಬಿ ಮೌಲಾಸಾಬ ಶೇಖ, ಸಾಬವ್ವಾ ಮರಿಯಪ್ಪ ದೊಡ್ಡಮನಿ, ದುರಗಪ್ಪ ವಡ್ಡರ, ನಾಗರಾಜ ಜಾಲಗಾರ, ಪ್ರಕಾಶ ಗುಜರಾತಿ ಉಪಸ್ಥಿತರಿದ್ದರು.