ಭೋವಿ ಸಮಾಜ ಅಭಿವೃದ್ಧಿಗೆ ನಿಗಮ
ಕನ್ನಡಪ್ರಭ ವಾರ್ತೆ, ಮುಂಡರಗಿ, ಫೆ. 10
ರಾಜ್ಯದಲ್ಲಿರುವ ಎಲ್ಲ ಭೋವಿ ಸಮಾಜದ ಜನತೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಭೋವಿ ಸಮಾಜದ ಅಭಿವೃದ್ಧಿ ನಿಗಮವನ್ನು ಇಷ್ಟರಲ್ಲಿಯೇ ಸ್ಥಾಪಿಸಲಾಗುವುದು. ಇದಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಈಗಾಗಲೇ ಹಸಿರು ನಿಶಾನೆ ತೋರಿಸಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಸೋಮವಾರ ಮುಂಡರಗಿ ಪಟ್ಟಣದಲ್ಲಿ ತಾಲೂಕು ಭೋವಿ ಸಂಘದ ಆಶ್ರಯದಲ್ಲಿ ನಡೆದ ಕಾಯಕಯೋಗಿ ಶಿವಯೋಗಿ ಸಿದ್ಧರಾಮೇಶ್ವರರ 841ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಭೋವಿ ಸಮಾಜದ ಅಭಿವೃದ್ಧಿ ನಿಗಮ ಆರಂಭವಾದರೆ ಸಮಾಜದಲ್ಲಿ ಒಂದು ಕ್ರಾಂತಿಯಾಗುತ್ತದೆ. ಈ ಸಮಾಜಕ್ಕೆ ಬೇಕಾಗುವ ಎಲ್ಲ ತರಹದ ಸರ್ಕಾರಿ ಸೌಲಭ್ಯಗಳನ್ನು ಮತ್ತು ಸಮಾಜದ ಅಭಿವೃದ್ಧಿಗೆ ಎಲ್ಲ ರೀತಿಯಿಂದಲೂ ಸಹಕಾರಿಯಾಗುತ್ತದೆ. ಆದ್ದರಿಂದ ಭೋವಿ ಅಭಿವೃದ್ಧಿ ನಿಗಮವನ್ನು ಪ್ರಾರಂಭಿಸುವುದಾಗಿ ತಿಳಿಸಿದರು.
ಹಿಂದಿನ ಸರ್ಕಾರ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಸರ್ಕಾರದ ಮಟ್ಟದಲ್ಲಿ ಆಚರಿಸುವ ತೀರ್ಮಾಣ ತೆಗೆದುಕೊಂಡಿತ್ತು. ಆದರೆ, ಅದು ಜಾರಿಯಾಗಿರಲಿಲ್ಲ. ಇಂದಿನ ಕಾಂಗ್ರೆಸ್ ಸರ್ಕಾರ ಈ ಜಯಂತಿಯನ್ನು ಸರ್ಕಾರದಿಂದ ಆಚರಿಸುವಂತೆ ಕ್ರಮ ಜರುಗಿಸಿ ರಾಜ್ಯದ ಪ್ರತಿ ಜಿಲ್ಲೆಗೆ ರು. 1 ಲಕ್ಷ ಹಾಗೂ ತಾಲೂಕು ಕೇಂದ್ರಗಳಿಗೆ ರು. 20ರಿಂದ 25 ಸಾವಿರ ಬಿಡುಗಡೆ ಮಾಡಿ ಭೋವಿ ಸಮಾಜಕ್ಕೆ ಅನುಕೂಲ ಮಾಡಿಕೊಟ್ಟಿದೆ ಎಂದರು.
ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಭೋವಿ ಸಮಾಜದ ಸಮುದಾಯ ಭವನದ ನಿರ್ಮಾಣಕ್ಕೆ ಶಾಸಕರ ಅನುದಾನದಲ್ಲಿ ರು. 10 ಲಕ್ಷ ನೀಡುವುದಾಗಿ ಹೇಳಿದರು. ಶಿರಹಟ್ಟಿ ಕ್ಷೇತ್ರದಲ್ಲಿ ಒಟ್ಟು 68 ಕೆರೆಗಳು ಇವೆ. ಅವುಗಳಲ್ಲಿ ಅನೇಕ ಕೆರೆಗಳು ಹೂಳು ತುಂಬಿ ಅವಸಾನದ ಅಂಚಿನಲ್ಲಿವೆ. ಆದ್ದರಿಂದ ಈ ಎಲ್ಲ ಕೆರೆಗಳ ದುರಸ್ತಿಗೆ ರು. 100 ಕೋಟಿ ನೀಡಿ ಈ ಭಾಗದ ಕೆರೆಗಳ ಪುನರುಜ್ಜೀವನಗೊಳಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಜ.ಡಾ. ಅನ್ನದಾನೀಶ್ವರ ಮಹಾ ಸ್ವಾಮೀಜಿ, ಜ. ಇಮ್ಮುಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಕರ್ಮಯೋಗಿ ಶಿವಯೋಗಿ ಸಿದ್ಧರಾಮೇಶ್ವರ ಜೀವನದ ಆದರ್ಶ ಅಳವಡಿಸಿಕೊಳ್ಳುವಂತೆ ತಿಳಿಸಿದರು.
ಮಾಜಿ ಶಾಸಕ ರಾಮಣ್ಣ ಲಮಾಣಿ ಎಸ್.ಎಸ್. ಕರಿದುರಗಣ್ಣವರರ ಕೃತಿ ಬಿಡುಗಡೆ ಮಾಡಿದರು.
ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ನಿರ್ಮಲಾ ಬರದೂರ, ಹೇಮಂತಗೌಡ ಪಾಟೀಲ, ಕೊಟ್ರಮ್ಮ ಇಟಗಿ, ಬಾಲಚಂದ್ರ ದೊಡ್ಡಮನಿ, ಲಿಂಗರಾಜಗೌಡ ಪಾಟೀಲ, ಬಸವರಾಜ ರಾಮೇನಹಳ್ಳಿ, ಚಂದ್ರಶೇಖರ ಬಡಿಗೇರ, ಫಕ್ರುದ್ದೀನ ಹಾರೋಗೇರಿ, ವೀರೇಶ ಸಜ್ಜನರ, ಪಾಲಾಕ್ಷಿ ಗಣದಿನ್ನಿ, ಡಾ. ಬಿ.ಎಸ್. ಮೇಟಿ, ಚಿನ್ನಪ್ಪ ವಡ್ಡಟ್ಟಿ, ತಾಲೂಕು ಭೋವಿ ಸಂಘದ ಅಧ್ಯಕ್ಷ ಈರಪ್ಪ ಬಂಡಿವಡ್ಡರ, ಪರಶುರಾಮ ಕರಡಿಕೊಳ್ಳ, ಗ್ರಾಪಂ ಅಧ್ಯಕ್ಷೆ ನಾಗಮ್ಮ ಬಳ್ಳಾರಿ, ವೆಂಕಪ್ಪ ಬಳ್ಳಾರಿ, ಪರಶುರಾಮ ಸುಣಗಾರ, ಧ್ರುವಕುಮಾರ ಹೊಸಮನಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯರು, ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು. ಡಾ. ಆರ್.ಎಚ್. ಜಂಗಣವಾರಿ ಮತ್ತು ಬಿ.ಎಸ್. ಬಂಡಿ ನಿರೂಪಿಸಿದರು.
ಚೆಕ್ ಡ್ಯಾಂ, ಕೆರೆ ದುರಸ್ತಿಗೆ ಅನುದಾನ ಮೀಸಲು
ಸಣ್ಣ ನೀರಾವರಿ ಯೋಜನೆ ಹಾಗೂ ಕೇಂದ್ರ ಸರ್ಕಾರದ ಎಐಬಿಪಿ ಯೋಜನೆಯಡಿ ಮುಂಡರಗಿ ತಾಲೂಕಿನಲ್ಲಿ ಅನೇಕ ಚೆಕ್ ಡ್ಯಾಮ್ ನಿರ್ಮಾಣ ಮತ್ತು ಕೆರೆಗಳ ದುರಸ್ತಿಗೆ 10ರಿಂದ 12 ಕೋಟಿ ತೆಗೆದಿರಿಸಲಾಗಿದೆ. ಕೊಳವೆ ಬಾವಿಗಳಿಗೆ ಸೋಲಾರ್ ಪ್ಯಾನೆಲ್ಗಳನ್ನು ಅಳವಡಿಸಿ ರೈತರಿಗೆ ಹಗಲು 12 ತಾಸು ವಿದ್ಯುತ್ ದೊರೆಯುವಂತೆ ನೂತನ ಸೌಲಭ್ಯವನ್ನು ರಾಜ್ಯದಲ್ಲಿ ಅಳವಡಿಸಲು ಎಲ್ಲ ತರಹದ ತಯಾರಿ ಮಾಡಿಕೊಳ್ಳಲಾಗಿದೆ.
ಅಂತರ್ಜಲ ಕುಸಿಯುತ್ತಿರುವ ಈ ದಿನಮಾನದಲ್ಲಿ ಅದನ್ನು ವೃದ್ಧಿಸುವ ನಿಟ್ಟಿನಲ್ಲಿ ಜಿಲ್ಲೆಗೆ ಒಂದು ಅಂತರ್ಜಲ ನಿರ್ದೇಶನಾಲಯ ತೆರೆಯಲಾಗುತ್ತದೆ. ಈ ನಿರ್ದೇಶನಾಲಯದಿಂದ ಪ್ರತಿ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೆ ಬೇಕಾಗುವ ಕ್ರಮಗಳನ್ನು ತೆಗೆದುಕೊಳ್ಳುವುದು. ಅದರೊಂದಿಗೆ ಅಂತರ್ಜಲ ಕಾಪಾಡಿಕೊಳ್ಳುವ ಕ್ರಮಗಳ ಬಗ್ಗೆ ರೈತರಿಗೆ ಮತ್ತು ಜನಸಾಮಾನ್ಯರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.