ಇಂದು ರೇಲ್ವೆ ಬಜೆಟ್: ಜಿಲ್ಲೆಗೆ ಖರ್ಗೆ ಒಲವು?
ಗದಗ: ಗದಗ ಜಿಲ್ಲೆ ಹೈದರಾಬಾದ್ ಕರ್ನಾಟಕ ಮತ್ತು ಮುಂಬೈ ಕರ್ನಾಟಕವನ್ನು ಬೆಸೆಯುವ ಪ್ರಮುಖ ಕೊಂಡಿಯಾಗಿದೆ. ಹಲವಾರು ವರ್ಷಗಳಿಂದ ಗದಗ ಜಿಲ್ಲೆಯ ಪ್ರಮುಖ ರೇಲ್ವೆ ಬೇಡಿಕೆಗಳು ನೆನೆಗುದಿಗೆ ಬಿದ್ದಿವೆ. ಈ ಬಾರಿಯ ಕೇಂದ್ರ ರೇಲ್ವೆ ಬಜೆಟ್ ಅನ್ನು ಕರ್ನಾಟಕದವರೇ (ಉಕ ಭಾಗದವರು) ಮಂಡಿಸುತ್ತಿದ್ದು, ಹಲವಾರು ನಿರೀಕ್ಷೆಗಳು ಗರಿಗೆದರಿವೆ. ಬಜೆಟ್ ಎಂದಾಕ್ಷಣ ಜಿಲ್ಲೆಯ ಜನತೆಗೆ ಈ ಬಜೆಟ್ನಲ್ಲಾದರೂ ಜಿಲ್ಲೆಗೆ ಏನಾದರೂ ಹೊಸ ಯೋಜನೆ ಘೋಷಣೆ ಮಾಡ್ತಾರಾ ಎಂಬುದು ಈ ಭಾಗದ ಜನರ ನಿರೀಕ್ಷೆ.
ಈ ಹಿಂದೆ ಘೋಷಣೆ ಮಾಡಿರುವಂತೆ ಗದಗ-ಹಾವೇರಿ ಹಾಗೂ ಗದಗ-ವಾಡಿ ನೂತನ ರೈಲು ಮಾರ್ಗ ಕಾಮಗಾರಿ ಇಂದಿಗೂ ನೆನೆಗುದಿಗೆ ಬಿದ್ದಿದೆ. ಇನ್ನು ಗದಗ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ, ನಿಲ್ದಾಣದಲ್ಲಿ ಡೈಗ್ನೋಸ್ಟಿಕ್ ಸೆಂಟರ್ ಪ್ರಾರಂಭಿಸುವುದಾಗಿ ಘೋಷಣೆ ಮಾಡಿದ್ದರೂ ಇದುವರೆಗೂ ಸಾಕಾರವಾಗಿಲ್ಲ. ಗದಗ ನಿಲ್ದಾಣ ಹೈದರಾಬಾದ್ ಹಾಗೂ ಮುಂಬೈ ಕರ್ನಾಟಕಕ್ಕೆ ಸಂರ್ಪಕ ಕಲ್ಪಿಸುವ ಪ್ರಮುಖ ಕೊಂಡಿಯಾಗಿದ್ದು, ನಿಲ್ದಾಣದಲ್ಲಿ ಹೆಚ್ಚುವರಿ ಟ್ರ್ಯಾಕ್ಗಳ ನಿರ್ಮಾಣವಾಗಬೇಕಿದೆ.
ಹಿಂದಿನ ಬಜೆಟ್ ನಿರಾಶಾದಾಯಕ: ಕಳೆದ ಸಾಲಿನಲ್ಲಿ ರೇಲ್ವೆ ಬಜೆಟ್ ಮಂಡಿಸಿದ್ದ ಸಚಿವ ಪವನಕುಮಾರ ಅವರು ಗದಗ ಜಿಲ್ಲೆಗೆ ಅನುಕೂಲವಾಗುವ ಯಾವುದೇ ಯೋಜನೆಗಳನ್ನು ನೀಡಿರಲಿಲ್ಲ. ಈ ಕುರಿತು ಅಂದಿನ ಸರ್ಕಾರ ರೇಲ್ವೆ ಸಚಿವರಿಗೆ ಪತ್ರ ಬರೆದು, ಗದಗ-ವಾಡಿ ಹಾಗೂ ಗದಗ-ಹಾವೇರಿ ನೂತನ ರೈಲು ಮಾರ್ಗಗಳಿಗೆ ಅನುಮೋದನೆ ನೀಡುವಂತೆ ಒತ್ತಾಯಿಸಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ. ಇನ್ನು ಗದಗ-ಸೊಲ್ಲಾಪುರ ಮಧ್ಯೆ ಹೆಚ್ಚಿನ (ಸಾಮಾನ್ಯ) ರೈಲು ಹೆಚ್ಚಿಸಬೇಕು ಎಂದು ಹಲವಾರು ಬಾರಿ ಹೋರಾಟ ಮಾಡಿ ಮನವಿ ಮಾಡಿದರೂ ರೇಲ್ವೆ ಸಚಿವರು ಇದಕ್ಕೆ ಸ್ಪಂದಿಸಿರಲಿಲ್ಲ ಎನ್ನುವುದು ಗಮನಾರ್ಹ ಸಂಗತಿ.
ನೆನೆಗುದಿಗೆ ಬಿದ್ದಿರುವ ರೇಲ್ವೆ ಯೋಜನೆಗಳು ಹಾಗೂ ಹೊಸ ಯೋಜನೆಗಳ ಬಗ್ಗೆ ಕೇಂದ್ರ ರೇಲ್ವೆ ಸಚಿವರನ್ನು ಈಚೆಗೆ ಭೇಟಿ ಮಾಡಿ ಮನವಿ ಮಾಡಲಾಗಿದೆ. ಈ ಯೋಜನೆಗಳಿಂದ ಗದಗ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳ ಅಭಿವೃದ್ಧಿಗೆ ಆಗುವ ಅನುಕೂಲತೆಗಳು, ಬೆಳವಣಿಗೆಯ ಕುರಿತು ವಿವರಣೆ ನೀಡಿ ಮನವಿ ಪತ್ರ ಸಲ್ಲಿಸಿದ್ದೇವೆ.
-ಲಿಂಬಯ್ಯಸ್ವಾಮಿಮಠ,ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷರು, ಗದಗ
ಬೇಡಿಕೆಗಳು...
ಈಗಾಗಲೇ ಪ್ರಸ್ತಾಪಿಸಲಾಗಿರುವ ಎರಡು ನೂತನ ರೈಲು ಮಾರ್ಗಗಳ ನಿರ್ಮಾಣಕ್ಕೆ ಚಾಲನೆ ನೀಡಬೇಕು. ಗದಗ-ಸೊಲ್ಲಾಪುರ ಜೋಡಿ ರೈಲು ಮಾರ್ಗ ಕಾಮಗಾರಿಯನ್ನು ವೇಗಗೊಳಿಸಬೇಕು. ಹೆಬಸೂರ ಗದಗ ಮಧ್ಯೆ ಬಾಕಿ ಉಳಿದಿರುವ ಜೋಡಿ ರೈಲು ಮಾರ್ಗ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಬೇಕಿದೆ. ಗದಗ ರೈಲು ನಿಲ್ದಾಣದಲ್ಲಿ ಹೊಸ ಫ್ಲಾಟ್ ಫಾರಂಗಳನ್ನು ನಿರ್ಮಿಸಬೇಕು. ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ನಿಲ್ದಾಣದಲ್ಲಿ ಕಲ್ಪಿಸುವುದು ಹಾಗೂ ಮೇಲ್ಸೇತುವೆ ನಿರ್ಮಾಣವಾಗಬೇಕಿದೆ. ಹುಬ್ಬಳ್ಳಿ-ಹೈದರಾಬಾದ್ ಮಧ್ಯೆ ನೂತನ ರೈಲುಗಳನ್ನು ಪ್ರಾರಂಭಿಸುವುದು.
ಗದಗ ಜಿಲ್ಲೆಯ ವಿವಿಧ ಬೇಡಿಕೆಗಳು ಮತ್ತು ಹೊಸ ರೈಲು ಮಾರ್ಗಗಳು ನಿರ್ಮಾಣ ಸೇರಿದಂತೆ ಜಿಲ್ಲೆಯ ಜನತೆಯ ಬಹುದಿನದ ಬೇಡಿಕೆಗಳ ಕುರಿತು ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಮಾಡಲಾಗಿದೆ. ಯೋಜನೆಗಳ ಅವಶ್ಯಕತೆಗಳ ಕುರಿತು ಅವರಿಗೆ ಮನವರಿಕೆ ಮಾಡಲಾಗಿದೆ. ಈ ಬಾರಿಯಾದರೂ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಅನುಕೂಲವಾಗುವಂತಹ ಪ್ರಮುಖ ರೇಲ್ವೆ ಯೋಜನೆಗಳು ಘೋಷಣೆಯಾಗಲಿ.
- ವಿಜಯ ಮುಳಗುಂದ, ರೇಲ್ವೆ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ.
ರೋಣ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ
ಶಿವಕುಮಾರ ಕುಷ್ಟಗಿ