ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಪ್ರಾರಂಭ
ಗದಗ: ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿಯಲ್ಲಿ ಕೈಕೊಂಡ ನಿರ್ಣಯದಂತೆ ಗದಗ ಕಾಟನ್ ಸೇಲ್ಸ್ ಸೊಸೈಟಿ ಆವರಣದಲ್ಲಿ ಹಾಗೂ ರೋಣ ಟಿಎಪಿಸಿಎಂಎಸ್ ಆವರಣದಲ್ಲಿ ಪ್ರತಿ ಕ್ವಿಂಟಲ್ಗೆ ರು. 3100 ಬೆಂಬಲ ದರದಲ್ಲಿ ಕಡಲೆಕಾಳು ಖರೀದಿ ಕೇಂದ್ರಗಳನ್ನು ಫೆ. 12ರಿಂದ ಆರಂಭಿಸಲಾಗಿದೆ. ಜಿಲ್ಲೆಯ ರೈತ ಬಾಂಧವರು ಇದರ ಪ್ರಯೋಜನ ಪಡೆಯಬೇಕು ಎಂದು ಗದಗ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ತಿಳಿಸಿದ್ದಾರೆ.
ಶೈಕ್ಷಣಿಕ ಸಮ್ಮೇಳನ ಯಶಸ್ವಿಗೆ ಬಳ್ಳಾರಿ ಕರೆ
ಗದಗ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ವತಿಯಿಂದ ರಾಜ್ಯ ಮಟ್ಟದ ಪ್ರಾಥಮಿಕ ಶಾಲಾ ಶಿಕ್ಷಕರ ಶೈಕ್ಷಣಿಕ ಸಮಾವೇಶ ಫೆ. 15ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯಲಿದೆ.
ಸಮ್ಮೇಳನವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅಧ್ಯಕ್ಷತೆ ವಹಿಸುವರು. ಈ ಮಾಹಿತಿಯನ್ನು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಬಿಡುಗಡೆಗೊಳಿಸಲಿದ್ದು, ಶಾಲಾ ಪಂಚಾಂಗವನ್ನು ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ದಿನೇಶ ಗುಂಡೂರಾವ್ ಬಿಡುಗಡೆಗೊಳಿಸುವರು. ಶಿಕ್ಷಣ ಸನ್ನದು ಬಿಡುಗಡೆಯನ್ನು ಲೋಕಸಭಾ ಸದಸ್ಯ ಪ್ರಹ್ಲಾದ್ ಜೋಶಿ ನೆರವೇರಿಸುವರು. ಅತಿಥಿಗಳಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಲೋಕಸಭಾ ಸದಸ್ಯ ಎಚ್.ವಿಶ್ವನಾಥ, ಶಾಸಕ ಸಂತೋಷ ಲಾಡ್, ಪ್ರಸಾದ ಅಬ್ಬಯ್ಯ, ಸಿ.ಎಸ್. ಶಿವಳ್ಳಿ, ವಿನಯ ಕುಲಕರ್ಣಿ, ಅರವಿಂದ ಬೆಲ್ಲದ, ಎನ್.ಎಚ್. ಕೋನರಡ್ಡಿ, ವಿಪ ಸದಸ್ಯ ಬಸವರಾಜ ಹೊರಟ್ಟಿ, ವೀರಣ್ಣ ಮತ್ತಿಕಟ್ಟಿ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಮಾಜಿ ಸಚಿವ ಎಚ್.ಎಂ. ರೇವಣ್ಣ ಹಾಗೂ ಡಾ. ರಾಜಕುಮಾರ ಖತ್ರಿ ಮುಂತಾದವರು ಆಗಮಿಸುವರು. ಈ ಕಾರ್ಯಕ್ರಮದಲ್ಲಿ ಶೈಕ್ಷಣಿಕ ಅಧಿವೇಶನಗಳು ನಡೆಯಲಿದ್ದು, ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯಾಧ್ಯಕ್ಷ ಬಸವರಾಜ ಗುರಿಕಾರ ವಹಿಸಲಿದ್ದಾರೆ. ಈ ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ 15 ಮತ್ತು 16ರ ದಿನಾಂಕಗಳಂದು ಅನ್ಯಕಾರ್ಯ ನಿಮಿತ್ತ (ಓಓಡಿ) ರಜೆ ಸೌಲಭ್ಯವಿದೆ ಎಂದು ತಿಳಿಸಿದ್ದಾರೆ.