ಅಂದು ನಾನು ಡಾಕು, ಇಂದು ಬ್ರಹ್ಮಕುಮಾರ
ಗದಗ: 100 ಕೊಲೆ 200 ಡಕಾಯಿತಿಯ ಆರೋಪದ ಮೇಲೆ ನನ್ನನ್ನು ಮತ್ತು ನನ್ನ ಸಾತಿಗಳನ್ನು ಗಲ್ಲು ಶಿಕ್ಷೆ ನೀಡಿದ್ದರು. ನಾವೆಲ್ಲ ಶಿಕ್ಷೆ ಅನುಭವಿಸಬೇಕೆನ್ನುವ ಹೊತ್ತಿಗಾಗಲೇ ರಾಷ್ಟ್ರಪತಿಗಳು ನಮಗೆ ಕ್ಷಮಾದಾನ ನೀಡಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶರೀಯ ವಿಶ್ವವಿದ್ಯಾಲಯದಲ್ಲಿ ನಮ್ಮನ್ನು ಪರವರ್ತನೆಗೊಳಿಸಿ ಡಾಕು ಇದ್ದವರನ್ನು ಬ್ರಹ್ಮಕುಮಾರರನ್ನಾಗಿ ಮಾಡಿ ಜೀವನ ಸಾರ್ಥಕಗೊಳಿಸಿದರು. ಈಶ್ವರೀಯ ವಿಶ್ವವಿದ್ಯಾಲಯಕ್ಕೆ ಧನ್ಯವಾದಗಳು ಎಂದು ಚಂಬಲ್ ಕಣವೆಯ ಮಾಜಿ ಡಕಾಯಿತ ಬಿ.ಕೆ. ಪಂಚಮಸಿಂಗ್ ಹೇಳಿದರು.
ಅವರು ನಗರದ ಮುನ್ಸಿಪಲ್ ಕಾಲೇಜು ಆವರಣದಲ್ಲಿ ಈಚೆಗೆ ಏರ್ಪಡಿಸಿದ್ದ ಗದಗ ಆಧ್ಯಾತ್ಮಿಕ ಸಂಸ್ಕೃತಿ ಉತ್ಸವದ ಅಂಗವಾಗಿ ಅಧ್ಯಾತ್ಮ ಮತ್ತು ಉನ್ನತ ಪರಿವರ್ತನೆ ಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರ ನಮ್ಮ ಮೇಲೆ ನಗದು ಬಹುಮಾನ ಕೊಟ್ಟು ಹಿಡಿಯಲು ಹೇಳಿದ್ದರು. ಆದರೂ ನಾವು ಅವರಿಗೆ ಸಿಕ್ಕಿರಲಿಲ್ಲ. ಮತ್ತು ನಮ್ಮ ಎಂಟು ಷರತ್ತುಗಳನ್ನು ಸರ್ಕಾರದ ಮುಂದೆ ಇಟ್ಟು ಕ್ಷಮಾದಾನ ನೀಡುವಂತೆ ಕೇಳಿ ಶರಣಾಗತರಾದೆವು. ಸರ್ಕಾರ ಒಪ್ಪಿಕೊಂಡಿತು. ಇಂದಿನ ಕೆಟ್ಟ ಜಗತ್ತಿನಲ್ಲಿ ನನ್ನಂತಹ ಡಾಕು ಇದ್ದವನನ್ನೂ ಉತ್ತಮ ನಾಗರಿಕನನ್ನಾಗಿ ರೂಪಿಸಿ ಜೀವನ ಶೈಲಿಯಲ್ಲಿ ಬದಲಿಸಿದ ಈಶ್ವರಿಯ ವಿಶ್ವವಿದ್ಯಾಲಯ ಮತ್ತು ಅಲ್ಲಿನ ಪರಿಸರ ಪರಿವಾರಕ್ಕೆ ಎಷ್ಟು ಕೃತಜ್ಞತೆ ತಿಳಿಸಿದರೂ ಕಡಿಮೆ. ನನ್ನಂತಹ ಡಾಕುನೇ ಪರಿವರ್ತನೆಗೊಂಡಿರಬೇಕಾದರೆ ನಿಮ್ಮಂತಹ ಜನರು ಒಳ್ಳೆಯ ಮಾರ್ಗದಲ್ಲಿ ನಡೆಯಲು ಬಹಳ ಸಮಯ ಬೇಕಾಗಲ್ಲ. ನನಗೆ ಈಗ 90 ವರ್ಷ ವಯಸ್ಸು. ಪರಿಸ್ಥಿತಿಯ ಒತ್ತಡದಿಂದ ನಾನು ಡಾಕು ಆಗಿದ್ದೆ. ಹಲವಾರು ಜನರನ್ನು ಕೊಂದೆ, ಅದು ಸರಳವೆನಿಸಿದರೂ ಪಶ್ಚಾತ್ತಾಪದಲ್ಲಿ ಪರಿವರ್ತನೆಯಿಂದ ಭಗವಂತನ ಸತ್ಯಜ್ಞಾನದಿಂದ ಪರಿವರ್ತನೆಗೊಂಡು ಬಡವರಿಗೆ ಶಾಲೆ, ಮನೆ ಕಟ್ಟಿಸಿದೆವು. ಒಟ್ಟು 550 ಜನ ಡಾಕುಗಳು ಒಟ್ಟಿಗೆ ಬದಲಾಗಿ ನಮ್ಮನ್ನು ನಮ್ಮ ಬಂದೂಕುಗಳನ್ನು ಸರ್ಕಾರಕ್ಕೆ ಒಪ್ಪಿಸಿದೆವು. ಸರ್ಕಾರದ ಸಹಯೋಗದಿಂದ ಮತ್ತು ಮುಖ್ಯವಾಗಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಪರಿವರ್ತನೆಗೊಂಡಿದ್ದೆವು. ಇದು ನಿಜವಾಗಿಯೂ ಭಗವಂತನೇ ಮಾಡಿದ ಚಮತ್ಕಾರ ಎನಿಸುತ್ತದೆ ಎಂದರು.
ಅತಿಥಿಗಳಾಗಿ ಆಗಮಿಸಿದ ದೆಹಲಿಯ ಬಿ.ಕೆ. ಸುರೇಶಬಾಯಿ, ರೂಪಚಂದ ಜೈನ, ವಿಜಯಕುಮಾರ ಹಿರೇಮಠ, ಸುನಿಲ ಬಿಚನಳ್ಳಿ, ಸುಭಾಷ ಗುಗ್ಗರಿ, ಸತ್ಯನಾರಾಯಣ, ಎಸ್.ಎನ್. ದೇಸಾಯಿ, ರಮೇಶ ತೇರದಾಳ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿ.ಕೆ. ಪಂಚಮಸಿಂಗ್ ಅವರನ್ನು ಸನ್ಮಾನಿಸಲಾಯಿತು. ರಾಜಯೋಗಿ ಬ್ರಹ್ಮಕುಮಾರಿ ಜಯಂತಿ ಅಧ್ಯಕ್ಷತೆ ವಹಿಸಿದ್ದರು. ಬಿ.ಕೆ. ಸ್ವಾತಿ ನಿರೂಪಿಸಿದರು. ಉಮಕ್ಕ ವಂದಿಸಿದರು.