ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಾರದ ಶೇಂಗಾ ಬೆಂಬೆಲೆ ಹಣ

Lingaraj Badiger
Updated On : 13 Feb 2014, 11:03 am

ಲಕ್ಷ್ಮೇಶ್ವರ: ಸರ್ಕಾರ ರೈತರ ಅನುಕೂಲಕ್ಕಾಗಿ ಬೆಂಬಲ ಬೆಲೆಯಲ್ಲಿ ಶೇಂಗಾವನ್ನು ಶಿರಹಟ್ಟಿ ತಾಲೂಕಿನಲ್ಲಿ ಖರೀದಿ ಮಾಡಿ 2 ತಿಂಗಳಾದರೂ ಇದುವರೆಗೂ ಸರ್ಕಾರ ರೈತರಿಗೆ ಹಣ ಪಾವತಿ ಮಾಡುತ್ತಿಲ್ಲ. ಶೇಂಗಾ ಮಾರಿದರೂ ಹಣವಿಲ್ಲದೆ ರೈತರು ಪರದಾಡುವಂತಾಗಿದ್ದು, ಅದ್ಯಾವ ಕಾರಣಕ್ಕೆ ರೈತರಿಗೆ ಹಣ ನೀಡಲು ವಿಳಂಬವಾಗುತ್ತಿದೆ ಎನ್ನುವ ಬಗ್ಗೆ ತಾಲೂಕಿನ ಹಿರಿಯ ಅಧಿಕಾರಿಗಳು ಗಮನ ನೀಡದೆ ಇರುವುದು ರೈತರನ್ನು ಮತ್ತಷ್ಟು ಕಂಗೆಡಿಸಿದೆ.
ಕಳೆದ ಡಿಸೆಂಬರ್ ತಿಂಗಳಲ್ಲಿ ತಾಲೂಕಿನ ಮಾಗಡಿ, ಶಿಗ್ಲಿ, ರಣತೂರಿನಲ್ಲಿ ಸರ್ಕಾರ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿಗೆ ಅವಕಾಶ ನೀಡಿತ್ತು. ಅದರಂತೆ ಮಾಗಡಿ 85 ಸಾವಿರ ಕ್ವಿಂಟಲ್, ರಣತೂರಿನಲ್ಲಿ 5 ಸಾವಿರ ಕ್ವಿಂಟಲ್ ಹಾಗೂ ಶಿಗ್ಲಿಯಲ್ಲಿ 3 ಸಾವಿರ ಕ್ವಿಂಟಲ್ ಶೇಂಗಾ ಹಾಗೂ ಸೂರ್ಯಕಾಂತಿ ಬೀಜಗಳನ್ನು ರೈತರಿಂದ ಖರೀದಿ ಮಾಡಲಾಗಿದ್ದು. ಆದರೆ, ರೈತರಿಗೆ ಹಣ ಬಟವಡೆ ಮಾಡುವಲ್ಲಿ ಹಿಂದೇಟು ಮಾಡಿದ್ದು ರೈತರು ಹಣವಿಲ್ಲದೆ ಪರದಾಡುವಂತಾಗಿದೆ.
ಸುತ್ತೋಲೆ: ಸರ್ಕಾರ ಮಾಗಡಿಯ ಶೇಂಗಾ ಖರೀದಿ ಕೇಂದ್ರದ ಸಹಕಾರಿ ಸಂಘಕ್ಕೆ ಕೇವಲ ರು. 72 ಲಕ್ಷ ಹಣ ನೀಡಿದ್ದು, ಇದು ಬೆರಳೆಣಿಕೆಯ ಜನರಿಗೆ ಮಾತ್ರ ಹಣ ಮುಟ್ಟಿದ್ದು, ಹಣ ಪಾವತಿಯಾಗದೆ ನೂರಾರು ರೈತರು ತೀವ್ರ ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಈಗ ಮತ್ತೆ ಪ್ರಾದೇಶಿಕ ಎಣ್ಣೆಬೀಜ ನಿಗಮವು ಹೊಸ ರಾಗ ಶುರು ಮಾಡಿದ್ದು, ಎಣ್ಣೆಬೀಜ ಬೆಳೆಗಾರರ ಸಂಘಗಳು ರೈತರ ಆರ್‌ಟಿಜಿಎಸ್ ಮಾಡಿಸಿ ರೈತರ ಬ್ಯಾಂಕ್ ಖಾತೆಯ ನಂಬರ್ ಪಡೆದುಕೊಂಡು ನೀಡಬೇಕು ಎಂದು ಸುತ್ತೋಲೆ ಹೊರಡಿಸಿದೆ.
ಹೊಸ ತಲೆ ನೋವು: ಇದು ಹಣ ಪಾವತಿಯಾಗಲು ಇನ್ನಷ್ಟು ವಿಳಂಬವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಹಾಗೂ ಶೇಂಗಾ ಖರೀದಿ ವೇಳೆಯಲ್ಲಿ ಯಾವುದೆ ಮಾಹಿತಿ ನೀಡದ ಅಧಿಕಾರಿಗಳು ಈಗ ಹೊಸ ಸುತ್ತೋಲೆ ಹೊರಡಿಸಿ ಮತ್ತೆ ರೈತರಲ್ಲಿ ಹೊಸ ತಲೆ ನೋವನ್ನು ಮೂಡಿಸಿದೆ. ಅಲ್ಲದೇ ಇನ್ನೂ ಸಾಕಷ್ಟು ಪ್ರಮಾಣದಲ್ಲಿ ಶೇಂಗಾವು ರೈತರ ಮನೆಯಲ್ಲಿ ಹಾಗೆ ಉಳಿದುಕೊಂಡಿದ್ದು ಈಗ ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಮಾಡುವುದನ್ನು ಕೂಡ ನಿಲ್ಲಿಸಲಾಗಿದೆ ಎನ್ನುತ್ತಾರೆ ರೈತರು.

ರೈತರು ತಮ್ಮ ದಿನನಿತ್ಯದ ಬದುಕಿಗಾಗಿ ಸಾಲ ಸೋಲ ಮಾಡಿ ಜೀವನ ಸಾಗಿಸಬೇಕಾದ ಸ್ಥಿತಿ ಬಂದೊದಗಿದೆ. 2013ರ ಡಿಸೆಂಬರ್ 16ರಂದು ಶೇಂಗಾ ಮಾರಿದ್ದರೂ ಇದುವರೆಗೂ ಹಣ ಪಾವತಿಯಾಗಿಲ್ಲ, ಹಣಕ್ಕಾಗಿ ಶೇಂಗಾ ಖರೀದಿ ಮಾಡಿದ ಕೇಂದ್ರಕ್ಕೆ ದಿನವು ಏಡತಾಡುವುದು ಸಾಕು ಸಾಕಾಗಿ ಹೋಗಿದೆ ಅಲ್ಲದೆ ದೇವರೆ ನಮ್ಮನ್ನು ಯಾಕಾಗಿ ರೈತನನ್ನಾಗಿ ಈ ಭೂಮಿಯ ಮೇಲೆ ಹುಟ್ಟಿಸಿದೆ ಎನ್ನುವಂತಾಗಿದೆ ಎಂಬುದು ಈ ದೇಶದ ಬಹುತೇಕ ಕೃಷಿಕರ ಒಡಲಾಳದ ನೋವಿನ ಧ್ವನಿಯಾಗಿದೆ. ಮಳೆಯ ಜತೆಯಲ್ಲಿ ಸೆಣುಸುತ್ತ ತನ್ನ ಜೀವವನ್ನು ಭೂಮಿಯಲ್ಲಿ ಒತ್ತೆ ಇಟ್ಟು ದುಡಿದರೂ ಸರಿಯಾದ ಬೆಳೆ ಇಲ್ಲ. ಒಮ್ಮೊಮ್ಮೆ ಬೆಳೆದ ಬೆಳೆ ಯೋಗ್ಯ ಬೆಲೆ ಸಿಗುತ್ತಿಲ್ಲ ಹೀಗೆ ಭಾರತದ ರೈತರ ಬದುಕು ಗಾಣಕ್ಕೆ ಸಿಕ್ಕಿ ಎಣ್ಣೆ ತೆಗೆದ ಸಿಪ್ಪೆಯಂತಾಗಿದೆ.
-ಯಲ್ಲಪ್ಪ ದೇವಪ್ಪ ಕುರಿ, ಮಾಗಡಿ ಗ್ರಾಮದ ರೈತ,
-ಶರಣಪ್ಪ ಕರೆಣ್ಣವರ, ಹೊಳಲಾಪುರದ


ಸರ್ಕಾರ 2013ರ ಡಿಸೆಂಬರ್ 12ರಂದು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲು ತಾಲೂಕಿನ ಹಲವು ಎಣ್ಣೆ ಬೀಜ ಬೆಳೆಗಾರರ ಸಂಘಗಳಿಗೆ ಅನುಮತಿ ನೀಡಿತ್ತು. ಸರ್ಕಾರದ ಮಾರ್ಗದರ್ಶನದಂತೆ ಮಾಗಡಿ ಕೇಂದ್ರವೊಂದರಲ್ಲೆ ಸುಮಾರು 85 ಸಾವಿರ ಕ್ವಿಂಟಲ್ ಶೇಂಗಾವನ್ನು ಖರೀದಿ ಮಾಡಿ ಸಂಗ್ರಹಿಸಿಡಲಾಗಿದೆ. ಈಗ ಆ ಶೇಂಗಾ ಚೀಲಗಳಿಗೆ ಮಿಕಳಿಯ ಹಾಗೂ ಗೆದ್ದಲು ಹುಳುಗಳ ಕಾಟ ಪ್ರಾರಂಭವಾಗಿದೆ. ಅಲ್ಲದೇ ಸರ್ಕಾರವು ಖರೀದಿ ಮಾಡಿದ ಶೇಂಗಾ ಚೀಲಗಳನ್ನು ಶೇಖರಣೆ ಮಾಡಲು ಗೋದಾಮುಗಳು ಖಾಲಿ ಇಲ್ಲವಾಗಿದೆ. ಇದು ಶೇಂಗಾ ಖರೀದಿ ಮಾಡಿದ ಕೇಂದ್ರಗಳಿಗೆ ತಲೆ ನೋವಿನ ಸಂಗತಿಯಾಗಿದೆ.
-ಬಸವರಾಜ ಪಲ್ಲೇದ, ಎಣ್ಣೆಬೀಜ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ, ಮಾಗಡಿ

- ಅಶೋಕ ಸೊರಟೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement